ದೇವನಹಳ್ಳಿ: ಗ್ರಾಮೀಣ ಪ್ರದೇಶಗಳು ಹೆಚ್ಚು ಅಭಿವೃದ್ಧಿ ಹೊಂದಲು ಮೂಲಭೂತವಾಗಿ ಬಸ್ ಸೌಕರ್ಯ ಅವಶ್ಯ. ಆದರೆ, ದೇವನಹಳ್ಳಿ ತಾಲೂಕಿನ ಸೂಲಕುಂಟೆ, ಇತರೆ ಸುತ್ತಮುತ್ತಲಿನ ಗ್ರಾಮಕ್ಕೆ ಸಮರ್ಪಕ ಬಸ್ ಸೌಕರ್ಯವಿಲ್ಲದೇ ಜನ ಪರಿತಪಿ ಸುತ್ತಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಖ್ಯಾತಿ ಹೊಂದಿರುವ ದೇವನಹಳ್ಳಿ ಇನ್ನೂ ಸಾಕಷ್ಟು ಅಭಿವೃದ್ಧಿ ಆಗಬೇಕಾಗಿದೆ. ಬಿಎಂಟಿಸಿ ಡಿಪೋ ಇರುವುದರಿಂದ ಬಸ್ ಗಳ ಸಂಪರ್ಕವನ್ನು ಗ್ರಾಮಗಳಿಗೆ ಕಲ್ಪಿಸಲು ಜನಪ್ರತಿನಿಧಿಗಳು ಮುಂದಾಗಬೇಕಿದೆ.
ಕಾಲ್ನಡಿಗೆ: ಜಿಲ್ಲಾಡಳಿತ ಭವನಕ್ಕೆ ಕೇವಲ 1ಕಿ.ಮೀ. ಮಾತ್ರ ದೂರವಿದ್ದು, ಈ ಭಾಗದಲ್ಲಿ ಸಾಕಷ್ಟು ರೈತರು, ವಿದ್ಯಾರ್ಥಿಗಳು ದೇವನಹಳ್ಳಿ ನಗರ ಮತ್ತು ಇತರೆ ಪ್ರದೇಶ ಗಳಿಗೆ ಹೋಗಬೇಕಾದರೆ, ಕಾಲ್ನಡಿಗೆಯಲ್ಲೇ ಸುಮಾರು 1ರಿಂದ 2ಕಿ.ಮೀ. ಸಂಚರಿಸುವ ಪರಿಸ್ಥಿತಿ ಇದೆ. ದೇವನಹಳ್ಳಿ ತಾಲೂಕಿನ ಕುಂದಾಣ ಗ್ರಾಪಂ ವ್ಯಾಪ್ತಿಯ ಸೂಲಕುಂಟೆ ಗ್ರಾಮಕ್ಕೆ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಮತ್ತು ರೈತರು ದಿನನಿತ್ಯ ಪರದಾಡುತ್ತಿದ್ದಾರೆ. ಆಟೋ, ಬೈಕ್, ಟಾಟಾ ಏಸ್ ಸೇರಿದಂತೆ ಇತರೆ ವಾಹನಗಳಿಗೆ ಅವಲಂಬಿಸಿ ನಗರ ಪ್ರದೇಶಗಳಿಗೆ ಹೋಗುವಂತೆ ಆಗಿದೆ.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರೇ ಸಚಿವರಾಗಿರುವುದರಿಂದ ಸೂಲಕುಂಟೆ ಗ್ರಾಮ ಸೇರಿದಂತೆ ಸುತ್ತಮುತ್ತಲ ಹಲವಾರು ಗ್ರಾಮಗಳಿಗೆ ಬಸ್ ಸೌಕರ್ಯ ಕಲ್ಪಿಸಿಕೊಡಬೇಕೆಂದು ವಿದ್ಯಾರ್ಥಿಗಳು, ಗ್ರಾಮಸ್ಥರು ಸಚಿವರಿಗೆ ಮನವಿ ಮಾಡಿದ್ದಾರೆ. 2005-06ರಲ್ಲಿ ಸ್ಥಗಿತಗೊಂಡ ಬಸ್ ಸಂಚಾರ ಈವರೆಗೂ ಗ್ರಾಮಕ್ಕೆ ಬಂದಿಲ್ಲ. ಕುಂದಾಣ, ಲಿಂಗಧೀರಗೊಲ್ಲಹಳ್ಳಿ, ಸೂಲಕುಂಟೆ, ಬನ್ನಿಮಂಗಲ, ಬಚ್ಚಹಳ್ಳಿ, ದ್ಯಾವರಹಳ್ಳಿ ಸೇರಿದಂತೆ ದೊಡ್ಡಬಳ್ಳಾಪುರಕ್ಕೆ ಹೋಗುವ ಮಾರ್ಗ ಇದಾಗಿದ್ದು, ಸೂಲಕುಂಟೆ ಗ್ರಾಮದಲ್ಲಿ ಅನೇಕ ವಿದ್ಯಾರ್ಥಿಗಳು ದೇವನಹಳ್ಳಿಗೆ ಹೋಗಬೇಕಾದರೆ, ಕುಂದಾಣ ಗ್ರಾಮದ ತನಕ ನಡೆದುಕೊಂಡು ಹೋಗಿ ಅಲ್ಲಿಂದ ಬಸ್‌ನಲ್ಲಿ ಅಥವಾ ಪರ್ಯಾಯ ವಾಹನ ವ್ಯವಸ್ಥೆ ಮಾಡಿಕೊಂಡು ಹೋಗುವ ಪರಿಸ್ಥಿತಿ ಇದೆ. ದೇವನಹಳ್ಳಿ ಪದವಿ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಂತೂ ದಿನನಿತ್ಯ ಕಾಲೇಜಿಗೆ ಹೋಗುವುದು ಹರಸಾಹಸವಾಗಿದೆ.
ರೈತರು ತಾವು ಬೆಳೆದ ಬೆಳೆಗಳನ್ನು ದೇವನಹಳ್ಳಿ ಟೌನ್ ಅಥವಾ ಬೆಂಗಳೂರು ಇತರೆ ಮಾರುಕಟ್ಟೆಗೆ ಕಳುಹಿಸಿಕೊಡ ಬೇಕಾದರೆ ಸಾಕಷ್ಟು ಪರದಾಡಬೇಕಿದೆ. ಇನ್ನಾದರೂ ಸಂಬಂಧಪಟ್ಟ ಸಾರಿಗೆ ಇಲಾಖೆ, ಸಾರ್ವಜನಿಕರ, ರೈತರ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕುಂದಾಣ ಗ್ರಾಮದವರೆಗೆ ಬರುವ ಬಿಎಂಟಿಸಿ ಬಸ್ ಮುಂದುವರಿದ ಗ್ರಾಮಗಳ ಸಂಪರ್ಕ ಸಂಚಾರಕ್ಕೂ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.
1-2ಕಿ.ಮೀ. ನಡೆದುಕೊಂಡೇ ನಿತ್ಯ ಶಾಲೆ- ಕಾಲೇಜಿಗೆ ಹೋಗಬೇಕು. ಗ್ರಾಮಕ್ಕೆ ನಿಗದಿತ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿದರೆ ಜನರಿಗೆ ಅನುಕೂಲವಾಗುತ್ತದೆ.
● ಸುಮಂತ್, ಸ್ಥಳೀಯ ಯುವಕ, ಸೂಲಕುಂಟೆ
ಸೂಲಕುಂಟೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಹೆಚ್ಚಿನ ಬಸ್ ಸೌಕರ್ಯ ಕಲ್ಪಿಸಬೇಕು. ಈ ಮೂಲಕ ರೈತರು, ವಿದ್ಯಾರ್ಥಿಗಳು, ನಾಗರಿಕರಿಗೆ ಅನುಕೂಲ ಮಾಡಬೇಕು.
● ನಾರಾಯಣಸ್ವಾಮಿ, ಗ್ರಾಮಸ್ಥರು
– ಎಸ್.ಮಹೇಶ್