Advertisement
ವೈರಸ್ ಹಾವಳಿಯನ್ನು ಸಾಧ್ಯವಾದಷ್ಟು ನಿಯಂತ್ರಣ ಮಾಡಬೇಕು ಎಂಬ ಉದ್ದೇಶದಿಂದ ಕಠಿಣ ನಿರ್ಧಾರಕ್ಕೆ ಮುಂದಾಗಿರುವ ಸರ್ಕಾರ ಒಂದು ಕಡೆ ಹೆಚ್ಚು ಜನ ಸೇರುವದು, ಸಭೆ, ಸಮಾರಂಭ ಹಾಗೂ ಶಿಬಿರಗಳನ್ನು ಮಾಡುವದರ ಮೇಲೆ ನಿರ್ಬಂಧ ಹಾಕಿದೆ. ಆದರೆ ಸಾರ್ವಜನಿಕವಾಗಿ ದೊಡ್ಡ ಮಟ್ಟದಲ್ಲಿ ರಕ್ತದಾನ ಶಿಬಿರ ಮಾಡುವ ಖಾಸಗಿ ಆಸ್ಪತ್ರೆಗಳಿಗೆ ಇದು ಸ್ವಲ್ಪಮಟ್ಟಿನ ಸಮಸ್ಯೆ ತಂದೊಡ್ಡಿದೆ. ಕಳೆದ ಕೆಲವು ದಿನಗಳ ಹಿಂದೆ ಉತ್ತರ ಕರ್ನಾಟಕ ಭಾಗದ ಪ್ರತಿಷ್ಠಿತ ಕೆಎಲ್‌ಇ ಆಸ್ಪತ್ರೆ ಬಹಿರಂಗವಾಗಿಯೇ ರಕ್ತದ ಕೊರತೆ ಉಂಟಾಗಿದ್ದು ರಕ್ತದಾನಿಗಳು ರಕ್ತ ನೀಡಲು ಮುಂದೆ ಬರಬೇಕು ಎಂದು ಮನವಿ ಮಾಡಿಕೊಂಡಿರುವುದೇ ಇದಕ್ಕೆ ಸಾಕ್ಷಿ.
Related Articles
Advertisement
ಬೆಳಗಾವಿ ವೈದ್ಯಕೀಯ ಕಾಲೇಜ್ ಹಾಗೂ ಆಸ್ಪತ್ರೆಯಲ್ಲಿ ರಕ್ತ ಸಂಗ್ರಹದಲ್ಲಿ ಯಾವ ಕೊರತೆಯೂ ಇಲ್ಲ. ನಾವು ನಿಯಮಿತವಾಗಿ ವಾರದಲ್ಲಿ ಒಂದೆರಡು ಬಾರಿ ರಕ್ತದಾನ ಶಿಬಿರ ಮಾಡುತ್ತಲೇ ಇದ್ದೇವೆ. ಯಾವುದೇ ಸಮಸ್ಯೆ ಆಗಿಲ್ಲ. ಜನರು ಸಹ ಧೈರ್ಯದಿಂದ ರಕ್ತ ನೀಡಲು ಬರಬೇಕು ಎಂಬುದು ಬಿಮ್ಸ್ ವೈದ್ಯ ಡಾ| ವಿನಯ ದಾಸ್ತಿಕೊಪ್ಪ ಅವರ ಹೇಳಿಕೆ.
ಆಸ್ಪತ್ರೆಗೆ ಬಂದು ರಕ್ತದಾನ ಮಾಡಿ : ಕೋವಿಡ್ 19 ವೈರಸ್ ಹಾವಳಿಯಿಂದಾಗಿ ಈಗ ಜಿಲ್ಲೆಯಲ್ಲಿ ಎಲ್ಲಿಯೂ ರಕ್ತದಾನ ಶಿಬಿರಗಳು ನಡೆಯುತ್ತಿಲ್ಲ. ಇನ್ನೊಂದೆಡೆ ಜನರೂ ಸಹ ಹೆದರಿಕೆಯಿಂದ ರಕ್ತ ಕೊಡಲು ಮುಂದೆ ಬರುತ್ತಿಲ್ಲ. ರಕ್ತದಾನ ಮಾಡುವದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ನಾವು ತಿಳಿ ಹೇಳಿದರೂ ಸ್ವಯಂ ಪ್ರೇರಣೆಯಿಂದ ಮುಂದೆ ಬರುತ್ತಿಲ್ಲ. ಇದರಿಂದ ಮುಂಬರುವ ದಿನಗಳಲ್ಲಿ ರಕ್ತದ ಕೊರತೆ ಕಾಡುತ್ತದೆ ಎಂಬುದು ಬ್ಲಿಡ್ ಬ್ಯಾಂಕ್ ವೈದ್ಯರ ಆತಂಕ. ಕೋವಿಡ್ 19 ವೈರಸ್ ಜತೆಗೆ ಜನರಲ್ಲಿ ರಕ್ತದಾನದ ಬಗ್ಗೆಯೂ ಸರ್ಕಾರ ಜಾಗೃತಿ ಹಾಗೂ ಧೈರ್ಯ ಮೂಡಿಸಬೇಕು. ಶಿಬಿರದ ಬದಲು ಜನರೇ ಮುಂದೆ ಬಂದು ಆಸ್ಪತ್ರೆ ಇಲ್ಲವೇ ಬ್ಲಿಡ್ ಬ್ಯಾಂಕ್‌ಗಳಲ್ಲಿ ರಕ್ತ ಕೊಡಬೇಕು. ಇದರಿಂದ ಸಮಸ್ಯೆ ಗಂಭೀರವಾಗುವುದನ್ನು ತಪ್ಪಿಸಬಹುದು ಎಂಬುದು ಖಾಸಗಿ ಆಸ್ಪತ್ರೆಯ ವೈದ್ಯರ ಹೇಳಿಕೆ.
ಜಿಲ್ಲೆಯಲ್ಲಿ ರಕ್ತದ ಸಂಗ್ರಹದ ಸಮಸ್ಯೆ ಇಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯಕ್ಕೆ ಅನುಗುಣವಾಗಿ ಸಂಗ್ರಹ ಮಾಡಿಕೊಳ್ಳಲಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ದಿನನಿತ್ಯ ಹತ್ತಾರು ರೀತಿಯ ಆಪರೇಷನ್‌ಗಳು ಇರುತ್ತವೆ. ಅದಕ್ಕೆ ಹೆಚ್ಚು ರಕ್ತದ ಅಗತ್ಯತೆ ಇರುತ್ತದೆ. ಹೀಗಾಗಿ ಈ ಆಸ್ಪತ್ರೆಗಳು ತಮ್ಮದೇ ಆದ ವ್ಯವಸ್ಥೆ ಮಾಡಿಕೊಂಡಿವೆ. ಇದುವರೆಗೆ ಅಂತಹ ಸಮಸ್ಯೆ ಎಲ್ಲಿಯೂ ಕಂಡುಬಂದಿಲ್ಲ. -ಡಾ| ಅಪ್ಪಾಸಾಹೇಬ ನರಟ್ಟಿ, ಜಂಟಿ ನಿರ್ದೇಶಕರು, ಆರೋಗ್ಯ ಇಲಾಖೆ
ಈಗ ರಕ್ತದ ಕೊರತೆ ಇಲ್ಲ. ಆದರೆ ಮುಂದೆ ತೊಂದರೆಯಾಗಬಹುದಾದ ಸಾಧ್ಯತೆಗಳಿವೆ. ಕೋವಿಡ್ 19 ಭೀತಿಯಿಂದ ನಾವು ರಕ್ತದಾನ ಶಿಬಿರಗಳನ್ನು ಬಂದ್ ಮಾಡಿದ್ದೇವೆ. ದಾನಿಗಳೂ ಸಹ ಸ್ವಯಂ ಪ್ರೇರಣೆಯಿಂದ ರಕ್ತ ಕೊಡಲು ಬರುತ್ತಿಲ್ಲ. ಜನರಲ್ಲಿ ಹೆದರಿಕೆ ಇದೆ. ಇದರಿಂದಾಗಿ ಏಪ್ರಿಲ್ ಮೊದಲ ವಾರದ ನಂತರ ರಕ್ತದ ಸಂಗ್ರಹ ಸಮಸ್ಯೆ ಆಗಲಿದೆ ಎಂಬುದು ನಮ್ಮ ಆತಂಕ. ಸರ್ಕಾರ ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ ಆಸ್ಪತ್ರೆಗೆ ಬಂದು ರಕ್ತಕೊಡುವಂತೆ ಪ್ರೇರೇಪಿಸಬೇಕು.– ಗಿರೀಶ ಬುಡರಕಟ್ಟಿ, ಬೆಳಗಾವಿ ಬ್ಲಡ್ ಬ್ಯಾಂಕ್ ಎಂಡಿ
-ಕೇಶವ ಆದಿ