ರಾಣಿಬೆನ್ನೂರ: ಜನಸಂಖ್ಯೆ ಹೆಚ್ಚಾದಂತೆ ಮೂಲ ಸೌಲಭ್ಯ ಒದಗಿಸಲು ಸರ್ಕಾರಕ್ಕಾಗಲಿ ಮತ್ತು ಮನೆಯ ಯಜಮಾನನಿಗೆ ಸಾಧ್ಯವಾಗದು. ಆರ್ಥಿಕ ಹೊರೆ ತಗ್ಗಿಸಲು ಜನಸಂಖ್ಯೆ ನಿಯಂತ್ರಣ ಒಂದೇ ಮಾರ್ಗ ಎಂದು ಸ್ತ್ರೀರೋಗ ತಜ್ಞ ಡಾ| ಬಸವರಾಜ ಕೇಲಗಾರ ಹೇಳಿದರು.
ಗುರುವಾರ ನಗರದ ಸಮುದಾಯ ಆರೋಗ್ಯ ಮತ್ತು ಕುಟುಂಬ ಯೋಜನಾ ಕೇಂದ್ರದಲ್ಲಿ ಏರ್ಪಡಿಸಿದ್ದ ವಿಶ್ವಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಸಂಖ್ಯೆ ಹೆಚ್ಚಾದಂತೆ ಪ್ರತಿ ನಗರ ಮತ್ತು ಹಳ್ಳಿಗಳಲ್ಲಿ ಹೊಸ ಹೊಸ ಬಡವಾಣೆಗಳು ನಿರ್ಮಾಣವಾಗುತ್ತಿವೆ. ಇದರಿಂದ ಕೃಷಿ ಭೂಮಿ ಕ್ಷೀಣಿಸುತ್ತಿದ್ದು, ಆಹಾರ ಉತ್ಪಾದನೆ ಕಡಿಮೆಯಾಗುತ್ತಿದೆ ಎಂದರು.
ಪ್ರತಿಯೊಬ್ಬರಿಗೂ ಒಳ್ಳೆಯ ಬದುಕು ನಡೆಸಲು ಹಲವು ಸೌಲಭ್ಯಗಳು ಅಗತ್ಯ. ಸಮಾಜದಲ್ಲಿರುವ ಎಲ್ಲರಿಗೂ ಉತ್ತಮ ಸೌಲಭ್ಯಗಳು ದೊರೆಯಲು ಜನಸಂಖ್ಯಾ ಮಿತಿಯಲ್ಲಿರಬೇಕು. ಜನಸಂಖ್ಯೆಯ ಹೆಚ್ಚಳವನ್ನು ನಿಯಂತ್ರಣ ಮಾಡದಿದ್ದರೆ, ಪ್ರಕೃತಿಯೇ ಅದರ ನಿಯಂತ್ರಣಕ್ಕೆ ಕೈಹಾಕುತ್ತದೆ. ಇದರಿಂದ ದೊಡ್ಡ ದೊಡ್ಡ ಅನಾಹುತಗಳು ಸಂಭವಿಸುತ್ತವೆ ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ 30 ಕೋಟಿ ಇದ್ದ ನಮ್ಮ ದೇಶದ ಜನಸಂಖ್ಯೆ 136 ಕೋಟಿಗೆ ಬಂದು ತಲುಪಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ಶಿಶು ಮರಣ, ಬಾಣಂತಿ ಮರಣ ಇತ್ಯಾದಿಗಳನ್ನು ವಿಜ್ಞಾನ ಬೆಳವಣಿಗೆಯಿಂದ ನಿಯಂತ್ರಣ ಮಾಡಲಾಗಿದೆ ಎಂದರು.
ಕೇವಲ ಸಂತಾನ ನಿಯಂತ್ರಣ ಕ್ರಮಗಳಿಂದ ನಮ್ಮ ದೇಶದ ಜನಸಂಖ್ಯೆ ನಿಯಂತ್ರಣ ಅಸಾಧ್ಯ. ಜನಸಂಖ್ಯೆ ಹತೋಟಿಯಲ್ಲಿಡಲು ಜನರ ಮನಸ್ಸು ಬದಲಾಗಬೇಕು. ಜತೆಗೆ ಬಾಲ್ಯವಿವಾಹ ಆಗದಂತೆ ತಡೆದು ಗಂಡಿಗೆ 21 ಹೆಣ್ಣಿಗೆ 18 ತುಂಬಿದ ನಂತರ ಮದುವೆ ಮಾಡಿದಲ್ಲಿ ಸ್ವಲ್ಪ ಮಟ್ಟಿಗಾದರೂ ಜನಸಂಖ್ಯೆ ನಿಯಂತ್ರಣಕ್ಕೆ ತರಲು ಸಾಧ್ಯ ಎಂದರು.
ಸಮುದಾಯ ಆರೋಗ್ಯ ಕೇಂದ್ರದ ಅಧ್ಯಕ್ಷೆ ಡಾ| ರಂಜನಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಗೀತಾ ಜಂಬಗಿ, ಮಲ್ಲಪ್ಪ ದೇಶಗತ್ತಿ, ಸೀತಾ ಸಾವುಕಾರ, ಸಾವಿತ್ರಬಾಯಿ ಮೈಲಾರ, ನಾಗರಾಜ ಬುಳ್ಳಾಪುರ, ಉಮೇಶ ಸೇರಿದಂತೆ ವಿದ್ಯಾರ್ಥಿಗಳು ಮತ್ತಿತರರು ಇದ್ದರು.