ನರೇಗಲ್ಲ: ನಿಡಗುಂದಿ ಗ್ರಾಪಂ ಆಡಳಿತದ ನಿರ್ಲಕ್ಷ್ಯದಿಂದಾಗಿ ಗ್ರಾಮಸ್ಥರು ಮೂಲ ಸೌಕರ್ಯಗಳ ಸಮಸ್ಯೆ ಎದುರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.
ಸಿಸಿ ರಸ್ತೆ, ಚರಂಡಿಗಳು ಸೇರಿದಂತೆ ಅನೇಕ ಸೌಲಭ್ಯ ಇಲ್ಲದೇ ಜನರು ಪರದಾಡುವಾಂತಗಿದೆ. ಗ್ರಾಮದ ಅಯ್ಯಪ್ಪ ಸ್ವಾಮಿ ಓಣಿ, ಸರ್ಕಾರಿ ಶಾಲೆಯಿಂದ ಸೂಡಿ ಪ್ಲಾಟ್ ರಸ್ತೆ ಮಳೆ ಬಂತ ಎಂದರೆ ಸಾಕು ಜನರ ಗೋಳು ಹೇಳ ತೀರದಾಗಿದೆ.
ಗ್ರಾಮದ ಅನೇಕ ಕಡೆಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿಲ್ಲ. ಮಳೆ ಸುರಿದ ಪರಿಣಾಮ ಸಮಸ್ಯೆ ಉದ್ಭಬಿಸಲು ಕಾರಣವಾಗಿದೆ. ಸುಮಾರು 8 ಸಾವಿರ ಜನಸಂಖ್ಯೆ ಹೊಂದಿದ್ದು, 16 ಜನ ಸದಸ್ಯರಿದ್ದಾರೆ. ಚರಂಡಿಗಳನ್ನು ಸ್ವಚ್ಛಗೊಳಿಸದೇ ಇರುವುದರಿಂದ ಕೊಳಕು ನಾರುತ್ತಿವೆ. ಇದರಿಂದ ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಶನಿವಾರ ಸುರಿದ ಮಳೆಯಿಂದ ಗ್ರಾಮದ ಅಯ್ಯಪ್ಪ ಸ್ವಾಮಿ ಓಣಿ, ಸೂಡಿ, ಪ್ಲಾಟ್, ಗ್ರಾಪಂ ಹಿಂಭಾಗ, ಮುಂಭಾಗ ಸೇರಿದಂತೆ ಅನೇಕ ಭಾಗಗಳಲ್ಲಿನ ಮನೆಗೆ ಕೊಳಚೆ ನೀರು ನುಗ್ಗಿದೆ. ಗ್ರಾಮದಲ್ಲಿ ಸೊಳ್ಳೆ ಕಾಟದಿಂದ ಮುಕ್ತಿಗೊಳಿಸಲು ರಾಸಾಯನಿಕ ಸಿಂಪಡಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಹಲವು ಬಾರಿ ಮೌಖೀಕ ಹಾಗೂ ಲಿಖೀತವಾಗಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿಗಳು ಇಲ್ಲದಿರುವುದರಿಂದ ಮಳೆ ಬಂದ ಸಮಯದಲ್ಲಿ ನೀರು ಮನೆಯೊಳಗೆ ನುಗ್ಗಿ ಸಾಕಷ್ಟು ತೊಂದರೆಯಾಗುತ್ತಿದೆ. ಇದರಿಂದ ಮಳೆ ನೀರು ಹರಿದು ಹೋಗಲು ಅವಕಾಶ ಇಲ್ಲದೇ, ನೇರವಾಗಿ ಜನರ ಮನೆ, ಬಣವೆಗಳಿಗೆ ನುಗ್ಗುತ್ತದೆ. ಮಳೆ ನೀರು ಮನೆಯೊಳಗೆ ಪ್ರವೇಶಿಸದಂತೆ ಸಲಕೆಯಿಂದ ಬೇರೆಡೆ ಹರಿದು ಹೋಗಲು ದಾರಿ ಮಾಡಿಕೊಡುವುದೇ ದಿನನಿತ್ಯದ ಕೆಲಸವಾಗಿ ಬಿಟ್ಟಿದೆ.
ಗಜೇಂದ್ರಗಡ-ಗದಗ ರಾಜ್ಯ ಹೆದ್ದಾರಿಯಲ್ಲಿ ಕಸದ ರಾಶಿಯಲ್ಲಿಯೇ ನಿತ್ಯ ವಿದ್ಯಾರ್ಥಿಗಳು, ಕಾರ್ಮಿಕರು, ಸಾರ್ವಜನಿಕರು ಓಡಾಡುತ್ತಾರೆ. ಆಹಾರದ ಆಸೆಯಿಂದ ತ್ಯಾಜ್ಯ ಚೀಲಗಳನ್ನು ಪ್ರಾಣಿಗಳು ಎಳೆದಾಡುವುದರಿಂದ ದುರ್ವಾಸನೆಗೆ ಕಾರಣವಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ಯಾವುದನ್ನು ಗಮನಿಸುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಗ್ರಾಮದ ಅಯ್ಯಪ್ಪ ಸ್ವಾಮಿ ಓಣಿಯಲ್ಲಿರುವ ವಿದ್ಯುತ್ ಟಿಸಿ ಮಳೆಗಾಲದಲ್ಲಿ ನೀರಲ್ಲಿ ನಿಂತಿರುತ್ತದೆ. ಇದಕ್ಕೆ ಯಾವುದೇ ಭದ್ರತೆ ಇಲ್ಲ. ಹೆಸ್ಕಾಂ ಅಧಿಕಾರಿಗಳು ಇತ್ತ ಗಮನಹರಿಸಿ ಕೂಡಲೇ ಅದಕ್ಕೆ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನಾವು ವಾಸಿಸುವ ಮನೆಗೆ ಮಳೆ ನೀರು ಮತ್ತು ಚರಂಡಿ ನೀರು ನುಗ್ಗಿರುವುದರಿಂದ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ. ಹಲವಾರು ಭಾರಿ ಗ್ರಾಪಂ ಸದಸ್ಯರಿಗೆ ಹಾಗೂ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸಿಲ್ಲ. ನಿವು ವಾಸಿಸುವ ಮನೆ ಪಂಚಾಯಿತಿ ದಾಖಲೆಯಲ್ಲಿಲ್ಲ. ಅದಕ್ಕೆ ಯಾವುದೇ ರೀತಿಯ ಸೌಲಭ್ಯ ಕಲ್ಪಿಸಲು ಆಗುವುದಿಲ್ಲ ಎಂದು ಹೇಳಿ ಕಳುಹಿಸುತ್ತಿದ್ದಾರೆ. ಆದರೆ, ನಾವು ಮನೆ ಕಂದಾಯ ಹಾಗೂ ವಿದ್ಯುತ್ ಬಿಲ್ ನಿರಂತರವಾಗಿ ಕಟ್ಟುತ್ತ ಬಂದಿದ್ದೇವೆ. ಮೇಲಾಧಿಕಾರಿಗಳು ಕೂಡಲೇ ಸೌಲಭ್ಯ ಒದಗಿಸಬೇಕು ಎಂದು ವಿ.ಎಸ್. ಅರಮನಿ, ಎಸ್.ಎಲ್. ಪಾಟೀಲ ಆಗ್ರಹಿಸಿದ್ದಾರೆ.
•ಸಿಕಂದರ ಎಂ. ಆರಿ