Advertisement

108 ಬೇಡಿಕೆ ಹಿಡಿದು ಕಾಯುತ್ತಿರುವ ಜನತೆ

11:40 AM Oct 12, 2020 | Suhan S |

ಕುಂದಾಪುರ, ಅ. 11: ಉತ್ತಮ ಚಿಕಿತ್ಸೆ ದೊರೆಯುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು ತುರ್ತು ಚಿಕಿತ್ಸೆಗೆ ಹೋಗಬೇಕಾದ ಆ್ಯಂಬುಲೆನ್ಸ್‌ ಇಲ್ಲದೆ ಒದ್ದಾಡುತ್ತಿರುವ ಸ್ಥಿತಿ ಕಂಡ್ಲೂರು, ವಂಡ್ಸೆ ಜನತೆಯದ್ದು. ಅನೇಕ ವರ್ಷಗಳಿಂದ ಈ ಭಾಗಕ್ಕೆ  108 ಆ್ಯಂಬುಲೆನ್ಸ್‌ ಬೇಕೆಂಬ ಬೇಡಿಕೆ ಇದ್ದು ಭರವಸೆಗಳಷ್ಟೇ ದೊರೆಯುತ್ತಿವೆೆ. ಆ್ಯಂಬುಲೆನ್ಸ್‌ ದೊರೆತಿಲ್ಲ.

Advertisement

ವ್ಯಾಪ್ತಿ :  ಬಳ್ಕೂರು, ಜಪ್ತಿ, ಕಾವ್ರಾಡಿ, ಹಳ್ನಾಡು, ನೆಲ್ಲಿಕಟ್ಟೆ, ಮುಂಬಾರು, ಸೌಕೂರು, ಗುಲ್ವಾಡಿ, ನೇರಳಕಟ್ಟೆ, ಮಾವಿನಕಟ್ಟೆ, ವಾಲೂ¤ರು, ಅಂಪಾರು ಹೀಗೆ ಸುತ್ತಲಿನ ಹತ್ತಾರು ಗ್ರಾಮಗಳ ಜನರಿಗೆ ಇಲ್ಲೊಂದು 108 ಆ್ಯಂಬುಲೆನ್ಸ್‌ ಇದ್ದರೆ  ಅನುಕೂಲ  ಎನಿಸಲಿದೆ. ಸಾಕಷ್ಟು ಜನವಸತಿಯೂ ಇದ್ದು ತೀರಾ ಗ್ರಾಮಾಂತರ ಪ್ರದೇಶ‌ವಾದ ಕಾರಣ ದುಬಾರಿ ದರ ನೀಡಿ ಖಾಸಗಿ ಆ್ಯಂಬುಲೆನ್ಸ್‌ ತರಿಸುವುದು ಇವರ ಪಾಲಿಗೆ ಶಿಕ್ಷೆಯೇ ಸರಿ. ಸರಿಯಾದ ವಾಹನದ ವ್ಯವಸ್ಥೆಯೇ ಇಲ್ಲದ ಕಾಲಘಟ್ಟದಲ್ಲಿ  ತುರ್ತು ಚಿಕಿತ್ಸೆಗೆ ಪಟ್ಟಣದ ದೊಡ್ಡ ಆಸ್ಪತ್ರೆಗೆ ಬರಬೇಕಾದ ಸಂದರ್ಭದಲ್ಲಿ ಇಲ್ಲಿನ ಜನರ ಸಂಕಷ್ಟ ಹೇಳತೀರದು.

ಯಾಕೆ ಬೇಕು :  ಕುಂದಾಪುರ-ಸೊಲ್ಲಾಪುರ ಮತ್ತು ವಿರಾಜಪೇಟೆ ಬೈಂದೂರು ರಾಜ್ಯ ಹೆದ್ದಾರಿ ಮಧ್ಯ ಭಾಗದಲ್ಲಿ ಹಾದು ಹೋಗುವ ಕಾವ್ರಾಡಿ ಗ್ರಾಮದಲ್ಲಿ ಹೊರ ರಾಜ್ಯಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಾ ಇರುತ್ತವೆ. ಈ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಕೂಡಾ ಸ್ವಲ್ಪ ಹೆಚ್ಚೆನ್ನಬಹುದು. ಆಗ ತುರ್ತು ಚಿಕಿತ್ಸೆಗಾಗಿ ಆ್ಯಂಬುಲೆನ್ಸ್‌ಗಾಗಿ ಕಾಯಬೇಕಾಗುತ್ತದೆ. ತುರ್ತು ಚಿಕಿತ್ಸೆ ದೊರೆಯದೇ ಅಪಘಾತದಲ್ಲಿ ಮೃತಪಟ್ಟ ಘಟನೆಗಳು ಕೂಡಾ ಈ ಭಾಗದಲ್ಲಿ ಜರಗಿವೆ. 17ರಿಂದ 18 ಕಿ.ಮೀ. ದೂರದಿಂದ ಇಲ್ಲಿಗೆ 108 ಆ್ಯಂಬುಲೆನ್ಸ್‌ ಬರಬೇಕಾಗುತ್ತದೆ. ಕೆಲವು ಬಾರಿ 1 ಗಂಟೆ ಕಾಯಬೇಕಾಗಿಯೂ ಬರುತ್ತದೆ.  ಕಾವ್ರಾಡಿ ಸುತ್ತಮುತ್ತಲ ಸಾವಿರಾರು ಮನೆಗಳಿಗೆ ವಾಹನ ಸೌಕರ್ಯವೇ ಇಲ್ಲ. ಹಾಗಿರುವಾಗ ಕನಿಷ್ಠ ಪಕ್ಷ 108 ಆ್ಯಂಬುಲೆನ್ಸ್‌ ಆದರೂ ಇದ್ದರೆ ಆರೋಗ್ಯ ವನ್ನಾದರೂ ಸುಧಾರಿಸಿಕೊಳ್ಳಬಹುದು. ಈಗಂತೂ ಕೊರೊನಾ ಭೀತಿಯಿಂದ ಆರೋಗ್ಯದ ಕಾಳಜಿ ಹೆಚ್ಚಾಗಿದ್ದು ಜೀವ ಉಳಿಸಿಕೊಳ್ಳಲು ಸರಕಾರದ ವ್ಯವಸ್ಥೆ ಜನಸಾಮಾನ್ಯರಿಗೆ ತಲುಪಬೇಕಾದ್ದು ಅನಿವಾರ್ಯವೂ ಹೌದು.

ವಂಡ್ಸೆಯಲ್ಲೂ ಬೇಡಿಕೆ : ವಂಡ್ಸೆ ಭಾಗದಲ್ಲೂ 108 ಆ್ಯಂಬುಲೆನ್ಸ್‌ ಬೇಕೆಂಬ ಬೇಡಿಕೆ ಅನೇಕ ಸಮಯದಿಂದ ಕೇಳಿ ಬರುತ್ತಿದೆ. ಅಂತಾರಾಷ್ಟ್ರೀಯ ತೀರ್ಥಕ್ಷೇತ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಸನ್ನಿಧಾನಕ್ಕೆ ಪ್ರತಿನಿತ್ಯ ಸಾವಿರಾರು ಮಂದಿ, ನೂರಾರು ವಾಹನಗಳು ಈ ರಸ್ತೆ ಮೂಲಕ ಸಾಗುತ್ತವೆ. ಅಷ್ಟಲ್ಲದೇ ವಂಡ್ಸೆ ಸುತ್ತಮುತ್ತಲ ನೆಂಪು, ನೇರಳಕಟ್ಟೆ, ಆಲೂರು, ಹಕೂìರು, ಚಿತ್ತೂರು, ಮಾರಣಕಟ್ಟೆ, ಜಡ್ಕಲ್‌, ಹಟ್ಟಿಯಂಗಡಿ, ಮುದೂರು, ದೇವಲ್ಕುಂದ, ಕಟ್‌ಬೆಲ್ತೂರು, ಕೆಂಚನೂರು ಮೊದಲಾದ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ.

7 ಇವೆ :  ತಾಲೂಕಿನಲ್ಲಿ 7 ಕಡೆ 108 ಆ್ಯಂಬುಲೆನ್ಸ್‌ ಕಾರ್ಯನಿರ್ವಹಿಸುತ್ತಿವೆ. ಕುಂದಾಪುರ, ಕಿರಿ ಮಂಜೇಶ್ವರ, ಆಲೂರು, ಕೊಲ್ಲೂರು, ಸಿದ್ದಾಪುರ, ಹಾಲಾಡಿ, ಗಂಗೊಳ್ಳಿಯಲ್ಲಿವೆ.

Advertisement

ಆ್ಯಂಬುಲೆನ್ಸ್‌  ಸೌಲಭ್ಯ ಇಲ್ಲಿಲ್ಲ : ಕುಂದಾಪುರ ನಗರದಿಂದ ಅಂಪಾರು ಮಾರ್ಗ ಮತ್ತು ತಲ್ಲೂರು ನೇರಳಕಟ್ಟೆ ರಸ್ತೆಯಲ್ಲಿ 108 ಆ್ಯಂಬುಲೆನ್ಸ್‌ ಸೌಲಭ್ಯವೇ ಇಲ್ಲ. ಕಂಡ್ಲೂರು ಪರಿಸರದಲ್ಲಿ ಉತ್ತಮ ಆಸ್ಪತ್ರೆ, ಉತ್ತಮ ವೈದ್ಯಾಧಿಕಾರಿ, ಸಿಬಂದಿ ಇರುವ ಕಾರಣ ಇಲ್ಲೇ 108 ಆ್ಯಂಬುಲೆನ್ಸ್‌ ಇಟ್ಟರೆ ಈ ಭಾಗದ ಎಲ್ಲ ಜನರಿಗೆ ಇದರಿಂದ ಪ್ರಯೋಜನ ದೊರೆಯಲಿದೆ ಎನ್ನುತ್ತಾರೆ ಸ್ಥಳೀಯರು.

ಮನವಿ : ಆರೋಗ್ಯ ಸಚಿವರಾಗಿದ್ದ ಡಾ| ಶಿವಾನಂದ ಪಾಟೀಲ್‌, ಶ್ರೀರಾಮುಲು ಮೊದಲಾದವರಿಗೆ ಮನವಿ ನೀಡಲಾಗಿದೆ. ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಅವರು ವರ್ಷದ ಹಿಂದೆಯೇ 108 ಆ್ಯಂಬುಲೆನ್ಸ್‌ ಕೊಡಿಸುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ ಈವರೆಗೂ ಮಂಜೂರಾಗಿಲ್ಲ. ದೇಶದ 18 ರಾಜ್ಯಗಳಲ್ಲಿ ಜಿವಿಕೆ ಮೂಲಕ 7,387ರಷ್ಟು 108 ಅಂಬುಲೆನ್ಸ್‌ಗಳಿದ್ದು  ಕರ್ನಾಟಕದಲ್ಲಿ 711 ಇವೆ. 1 ಲಕ್ಷ ಜನಸಂಖ್ಯೆಗೆ ಒಂದು ಆ್ಯಂಬುಲೆನ್ಸ್‌ ಎಂದು ಮಿತಿಗೊಳಿಸಲಾಗಿತ್ತಾದರೂ ಇಲ್ಲಿನ ಗ್ರಾಮಾಂತರದ ರಸ್ತೆಗಳಿಂದಾಗಿ ನಿಗದಿತ ಸಮಯಕ್ಕೆ ತಲುಪಲಾಗುವುದಿಲ್ಲ  ಎಂಬ ಕಾರಣಕ್ಕಾಗಿ  ಈ ನಿಯಮವನ್ನು ಸರಳಗೊಳಿಸಲಾಗಿದೆ.

ಗಮನಕ್ಕೆ ಬಂದಿಲ್ಲ :  ಕಂಡ್ಲೂರು, ವಂಡ್ಸೆಯಲ್ಲಿ 108 ಆಂಬ್ಯುಲೆನ್ಸ್‌ಗೆ  ಬೇಡಿಕೆ ಇರುವ ಕುರಿತು ನಮ್ಮ ಗಮನಕ್ಕೆ ಬಂದಿಲ್ಲ. ಈಗಾಗಲೇ ತಾಲೂಕಿನ 7 ಕಡೆ 108 ಆ್ಯಂಬುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿವೆ. – ಡಾ| ನಾಗಭೂಷಣ್‌ ಉಡುಪ

ಮನವಿ ನೀಡಿದ್ದೇವೆ :  ಈ ಹಿಂದಿನ ಹಾಗೂ ಈಗಿನ ಆರೋಗ್ಯ ಸಚಿವರಿಗೆ ಮನವಿ ನೀಡಿದ್ದು ಈವರೆಗೆ ಯಾವುದೇ ಮಂಜೂರಾತಿ ಲಭಿಸಲಿಲ್ಲ.  – ಮುಂಬಾರು ದಿನಕರ ಶೆಟ್ಟಿ ಕಾವ್ರಾಡಿ ತಾಲೂಕು ಆರೋಗ್ಯಾಧಿಕಾರಿ, ಕುಂದಾಪುರ

ಶೀಘ್ರ ಮಂಜೂರು :  ವಂಡ್ಸೆ ಹಾಗೂ ಕಂಡ್ಲೂರಿಗೆ 108 ಆ್ಯಂಬುಲೆನ್ಸ್‌ ಬೇಕೆಂದು ಸರಕಾರಕ್ಕೆ ಮನವಿ ಮಾಡಲಾಗಿದೆ. ಶೀಘ್ರ ಮಂಜೂರಾಗುವ ಭರವಸೆ ಇದೆ.  – ಬಿ.ಎಂ. ಸುಕುಮಾರ್‌ ಶೆಟ್ಟಿ ಶಾಸಕರು, ಬೈಂದೂರು

 

– ಲಕ್ಷ್ಮೀಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next