Advertisement

ವಡ್ಡರದೊಡ್ಡಿ ಗ್ರಾಮದಲ್ಲಿ ಸಮರ್ಪಕ ಮೂಲಭೂತ ಸೌಕರ್ಯ ಕೊರತೆ ಸಮಸ್ಯೆ

04:25 PM Jul 11, 2020 | keerthan |

ಹನೂರು(ಚಾಮರಾಜನಗರ): ತಾಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಹೆಗ್ಗಳಿಕೆ ಹೊಂದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡರದೊಡ್ಡಿ ಗ್ರಾಮಕ್ಕೆ ಸಮರ್ಪಕ ಮೂಲಭೂತ ಸೌಕರ್ಯ ಲಭಿಸದೆ ಗ್ರಾಮದ ವಾಸಿಗಳು ಪರಿತಪಿಸುವಂತಾಗಿದೆ.

Advertisement

ಮಾರ್ಟಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ವಡ್ಡರದೊಡ್ಡಿ ಗ್ರಾಮದ ಮೇಲುನತ್ತ ಎಂಬುವಲ್ಲಿ 7 ಬೀದಿಗಳಿದ್ದು ಕೇವಲ 3 ಬೀದಿಗಳಿಗೆ ಮಾತ್ರ ಕಾಂಕ್ರೀಟ್ ರಸ್ತೆ ಸೌಲಭ್ಯ ಕಲ್ಪಿಸಲಾಗಿದೆ. ಈ ಬಡಾವಣೆಗಳಲ್ಲಿ ಅಲ್ಪಸಂಖ್ಯಾತರೇ ಹೆಚ್ಚು ವಾಸಿಸುತ್ತಿದ್ದು ಸುಮಾರು 100 ಕುಟುಂಬಗಳಿದ್ದು 500ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಈ ಬಡಾವಣೆಗಳಿಗೆ ಮೂಲಸೌಕರ್ಯ ಮರೀಚಿಕೆಯಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸಆರ್ವಜನಿಕರು ಆಗ್ರಹಿಸಿದ್ದಾರೆ.

ಮಣ್ಣಿನ ರಸ್ತೆಯಲ್ಲಿಯೇ ಸಂಚಾರ: ಈ ಗ್ರಾಮದಲ್ಲಿ ಬೀದಿಗಳಿದ್ದು ಕೇವಲ 2 ಬೀದಿಗಳಿಗೆ ಮಾತ್ರ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲಾಗಿದೆ. ಇನ್ನುಳಿದ 5 ಬೀದಿಗಳಿಗೆ ಇನ್ನು ಕಾಂಕ್ರೀಟ್ ರಸ್ತೆಗಳೂ ಸಹ ನಿರ್ಮಾಣವಾಗಿಲ್ಲದ್ದರಿಂದ ಮಣ್ಣಿನ ರಸ್ತೆಯಲ್ಲಿಯೇ ಸಂಚರಿಸಬೇಕಿದೆ. ಅಲ್ಲದೆ ಕೆಲ ಬೀದಿಗಳಿಗೆ ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೆ ಮನೆಯ ಮುಂಭಾಗದಲ್ಲಿಯೇ ಕೊಳಚೆ ನೀರು ಹರಿಯುವಂತಾಗಿದೆ. ಈ ಬೀದಿಗಳು ಮುಖ್ಯ ರಸ್ತೆಯಿಂದ ಇಳಿಜಾರಾದ ಪ್ರದೇಶದಲ್ಲಿರುವುದರಿಂದ ಮಳೆಗಾಲದ ಸಂದರ್ಭದಲ್ಲಿ ಮಳೆಯ ನೀರು ಮನೆಯ ಅಂಗಳದವರೆಗೂ ಬಂದು ನಿಲ್ಲುವಂತಹ ಪರಿಸ್ಥಿತಿಯಿದೆ.

ಸಮರ್ಪಕ ವಿದ್ಯುತ್, ಬೀದಿ ದೀಪಗಳಿಲ್ಲ: ಈ ಬಡಾವಣೆಯ ಎಲ್ಲಾ ಮನೆಗಳಿಗೂ ಮಾರ್ಟಳ್ಳಿ- ವಡಕೆಹಳ್ಳ ಮುಖ್ಯ ರಸ್ತೆಯಲ್ಲಿ ಹಾದು ಹೋಗಿರುವ ವಿದ್ಯುತ್ ಕಂಬಗಳಿಂದ ಸಂಪರ್ಕ ನೀಡಲಾಗಿದೆ. ಆದರೆ ಮುಖ್ಯ ರಸ್ತೆಯ ಕಂಬದಿಂದ ಮನೆಗಳು ಸುಮಾರು 300-400 ಮೀಟರ್ ಅಂತರದಲ್ಲಿರುವುದರಿಂದ ವಿದ್ಯುತ್ ತಂತಿಗಳು ಮನೆಯ ಮೇಲೆ, ರಸ್ತೆಗೆ ಅಡ್ಡಲಾಗಿ ನೇತಾಡುತ್ತಿದ್ದು ಪ್ರಾಣ ಭಯದಿಂದಲೇ ರಸ್ತೆಯಲ್ಲಿ ಓಡಾಡಬೇಕಾದ ಪರಿಸ್ಥಿತಿಯಿದೆ. ಅಲ್ಲದೆ ಸಂಜೆಯಾಗುತ್ತಲೇ ವಿದ್ಯುತ್ ದೀಪಗಳು ಚಿಮಣಿಯಂತೆ ಉರಿಯುತ್ತಿದ್ದು ಸಮರ್ಪಕ ವೋಲ್ಟೇಜ್ ವ್ಯವಸ್ಥೆಯೂ ಇಲ್ಲ. ಇನ್ನು ಬೀದಿ ದೀಪಗಳಂತು ಕನಸಿನ ಮಾತಾಗಿದ್ದು ರಾತ್ರಿಯಾಗುತ್ತಲೇ ವಿಷಜಂತುಗಳ ಹಾವಳಿಯಿಂದಾಗಿ ಪ್ರಾಣಭಯದಿಂದಲೇ ಸಂಚರಿಸಬೇಕಿದೆ. ಅಲ್ಲದೆ ಈ ಬಡಾವಣೆಗಳಲ್ಲಿ ವಿಷಜಂತುಗಳ ಹಾವಳಿಗೂ ಕೆಲವರು ಸಿಲುಕಿ ಸಮಸ್ಯೆಗಳಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ.

Advertisement

ಆದುದರಿಂದ ಸಂಬಂಧಪಟ್ಟ ಸೆಸ್ಕ್ ಇಲಾಖಾ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಈ ಬಗ್ಗೆ ಕೂಡಲೇ ಗಮನಹರಿಸಿ ಬಡಾವಣೆಗೆ ಸುಸಜ್ಜಿತ ರಸ್ತೆ, ಚರಂಡಿ ನಿರ್ಮಾಣ ಮಆಡಿಕೊಟ್ಟು ಅಗತ್ಯತೆಗನುಗುಣವಾಗಿ ವಿದ್ಯುತ್ ಕಂಬಗಳನ್ನು ಅಳವಡಿಸಿ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸಿ ಬೀದಿದೀಪ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಈ ಬಡಾವಣೆಗೆ ವಿದ್ಯುತ್ ಕಂಬ ಅಳವಡಿಸಿ ಬೀದಿ ದೀಪಗಳನ್ನು ಹಾಕಲು 12 ಲಕ್ಷ ಅನುದಾನವನ್ನು ಮೀಸಲಿರಿಸಲಾಗಿತ್ತು. ಆದರೆ ಗ್ರಾಮ ಪಂಚಾಯಿತಿ ಅನುದಾನದಲ್ಲಿ ವಿದ್ಯುತ್ ಕಂಬಗಳನ್ನು ಹಾಕಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಕಾಮಗಾರಿಯನ್ನು ಕೈಬಿಟ್ಟಿದ್ದಾರೆ. ಆದರೆ ಆ ಹಣ ಯಾವುದಕ್ಕೆ ಬಳಕೆಯಾಗಿದೆ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಇನ್ನು ನರೇಗಾ ಯೋಜನೆಯಡಿ ಚರಂಡಿ, ರಸ್ತೆ ನಿರ್ಮಾಣ ಮಾಡಲು ಕಾನೂನು ತೊಡಕುಗಳಿದ್ದು ಕೂಡಲೇ ಈ ಸಂಬಂಧ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ಗ್ರಾ.ಪಂ ಸದಸ್ಯ ಶಿವು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next