Advertisement

ಸಮರ್ಪಕ ಚರಂಡಿ ವ್ಯವಸ್ಥೆ, ಬೀದಿದೀಪ, ಡ್ರೈನೇಜ್‌ ಕೊರತೆ

12:00 PM Oct 19, 2019 | sudhir |

ಕಾರ್ಕಳ: ಪುರಸಭೆಯ ಸಣ್ಣ ವಾರ್ಡ್‌ಗಳಲ್ಲಿ ಒಂದಾಗಿರುವ ಬಂಡಿಮಠ ಕಲ್ಲೊಟ್ಟೆ 4ನೇ ವಾರ್ಡ್‌ನಲ್ಲಿ ಭತ್ತ ಬೇಸಾಯಗಾರರು ಹೆಚ್ಚಾಗಿ ಕಂಡುಬರುತ್ತಾರೆ. ಸುಮಾರು 150 ಮನೆಗಳು ಈ ವಾರ್ಡ್‌ನಲ್ಲಿದೆ.

Advertisement

ಬ್ರಹ್ಮಸ್ಥಾನ ರಕ್ತೇಶ್ವರೀ ಸನ್ನಿಧಾನ 
ಕೊಡಮಣಿತ್ತಾಯ, ಕುಕ್ಕಿನಂತಾಯ ದೈವಗಳ ಗರಡಿ ಹಾಗೂ ಕಲ್ಲೊಟ್ಟೆ ಬಯಲು ಗದ್ದೆಯ ಪಕ್ಕದಲ್ಲಿ ಸಪರಿವಾರ ಶ್ರೀ ಕ್ಷೇತ್ರ ಬ್ರಹ್ಮಸ್ಥಾನ ರಕ್ತೇಶ್ವರಿ ಸನ್ನಿಧಾನ ಹಾಗೂ ನಾಗಾಲಯಗಳ ಪವಿತ್ರ ಸಾನ್ನಿಧ್ಯ ಈ ಪರಿಸರದಲ್ಲಿದೆ.

ಚರಂಡಿ ವ್ಯವಸ್ಥೆಯಿಲ್ಲ
ವಾರ್ಡ್‌ನಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆಯಿಲ್ಲ. ಇದೇ ಈ ವಾರ್ಡ್‌ನ ಬಹುದೊಡ್ಡ ಸಮಸ್ಯೆಯಾಗಿದೆ. ಉಳಿದಂತೆ ಬೀದಿ ದೀಪದ ಸಮಸ್ಯೆ, ಡ್ರೈನೇಜ್‌ ಸಮಸ್ಯೆಯೂ ಇಲ್ಲಿದೆ. ರಂಗಮಂದಿರವೊಂದಿದ್ದರೂ ಮೂಲಸೌಕರ್ಯ ದಿಂದ ವಂಚಿತವಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ತೋಡಿಗೆ ತಡೆಗೋಡೆಯಾಗಬೇಕು
ಇಲ್ಲಿರುವ ತೋಡಿಗೆ ತಡೆಗೋಡೆಯಿಲ್ಲ. ಮಳೆಗಾಲದಲ್ಲಿ ತೋಡಿನಲ್ಲಿ ಬೃಹತ್‌ ಪ್ರಮಾಣದಲ್ಲಿ ನೀರು ಹರಿಯುತ್ತಿ ರುವುದರಿಂದ ಅನೇಕ ಮನೆಗಳಿಗೆ ತೊಂದರೆಯಾಗುತ್ತಿದೆ. ತೋಡಿಗೆ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯರು ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ. ಇದೇ ತೋಡಿಗೆ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಿದಲ್ಲಿ ನೀರಿಂಗಿಸುವ ಕಾರ್ಯವೂ ಆದೀತು ಎನ್ನುವುದು ಸ್ಥಳೀಯರ ಸಲಹೆ.

ಐತಕಟ್ಟೆ ಎಂಬಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಮೋರಿ ನಿರ್ಮಾಣ ಮಾಡಲಾಗಿದ್ದು, ಎಸ್‌ಟಿ ಕಾಲನಿ ಇತ್ತೀಚೆಗೆ ಡಾಮರುಗೊಂಡಿದೆ.

Advertisement

ಆಟದ ಮೈದಾನವಿಲ್ಲ
ವಾರ್ಡ್‌ನಲ್ಲಿ ಆಟದ ಮೈದಾನವಿಲ್ಲ. ಇದಕ್ಕೆ ಜಾಗವೂ ಇಲ್ಲಿಲ್ಲ. ಇದರಿಂದ ಮಕ್ಕಳು ಆಟವಾಡಲು ದೂರದ ಬಂಡಿಮಠ ಮೈದಾನವನ್ನೇ ಅವಲಂಬಿಸಿದ್ದಾರೆ.

ಪಾಳುಬಿದ್ದಿದೆ ಕಟ್ಟಡ
2009ರಲ್ಲಿ ಕಾರ್ಕಳ ಪುರಸಭೆ ಮುಂದುವರಿಕೆ ಶಿಕ್ಷಣ ಕೇಂದ್ರ ತೆರೆಯುವ ಉದ್ದೇಶದಿಂದ ಪುರಸಭಾ ವ್ಯಾಪ್ತಿಯ ಕಲ್ಲೊಟ್ಟೆ ಎಂಬಲ್ಲಿ ಸುಸಜ್ಜಿತ ಕಟ್ಟಡವೊಂದನ್ನು ನಿರ್ಮಿಸಿತ್ತು. ಆದರೆ, ಕಟ್ಟಡ ನಿರ್ಮಾಣವಾಗಿ ಉದ್ಘಾಟನೆಗೊಂಡು ಹತ್ತು ವರ್ಷ ಸಂದರೂ ಕಟ್ಟಡ ಉಪಯೋಗವಿಲ್ಲದೇ ಅನಾಥವಾಗಿದೆ. ಕಟ್ಟಡ ಪೂರ್ತಿ ಪೊದೆಗಳಿಂದ ಆವೃತ್ತವಾಗಿದೆ. ಪಾಳು ಬಿದ್ದಿರುವ ಕಟ್ಟಡವನ್ನು ಸ್ಥಳೀಯ ಯುವಕ ಮಂಡಲದ ಕಾರ್ಯಚಟುವಟಿಕೆಗಳಿಗಾಗಿ ಒದಗಿಸಿದರೆ ಒಳಿತು ಎಂಬುದು ಯುವಕ ಮಂಡಲದವರ ಅಂಬೋಣ.

ವಾರ್ಡ್‌ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ
ಪುರಸಭೆಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ವಿಳಂಬವಾದ ಪರಿಣಾಮ ಅಭಿವೃದ್ಧಿ ಕಾರ್ಯಗಳಿಗೆ ಅಡಚಣೆಯಾಗಿದೆ. ತನ್ನ ವಾರ್ಡ್‌ನ ಸಮಗ್ರ ಅಭಿವೃದ್ಧಿ ಕುರಿತಂತೆ ಪ್ರಾಮಾಣಿಕ ಪ್ರಯತ್ನ ಮಾಡುವೆ.
– ಶಶಿಕಲಾ ಪಿ. ಶೆಟ್ಟಿ , ವಾರ್ಡ್‌ ಸದಸ್ಯೆ

ಬಂಡಿಮಠಕ್ಕೆ ಬಸ್‌ ಸ್ಟಾಂಡ್‌ ಬರುವಂತಾಗಲಿ
ಇಕ್ಕಟ್ಟಾಗಿರುವ ಕಾರ್ಕಳ ನಗರದ ಬಸ್‌ ಸ್ಟಾಂಡ್‌ ವಿಸ್ತಾರವಾಗಿರುವ ಬಂಡಿಮಠಕ್ಕೆ ಬರುವಂತಾಗಬೇಕು. ತಾಲೂಕು ಕಚೇರಿ ಸೇರಿದಂತೆ ಸರಕಾರಿ ಕಚೇರಿಗಳು ಬಂಡಿಮಠದ ಬಳಿಯೇ ಇರುವುದರಿಂದ ಬಸ್‌ ಸ್ಟಾಂಡ್‌ ಇಲ್ಲಿರುವುದು ಹೆಚ್ಚು ಸೂಕ್ತ ಮತ್ತು ಅನುಕೂಲ. ಇದರಿಂದ ನಗರದಲ್ಲಿನ ಟ್ರಾಫಿಕ್‌ ಸಮಸ್ಯೆಯನ್ನೂ ಹೋಗಲಾಡಿಸಬಹುದಾಗಿದೆ.
-ಸುಂದರ ಶೆಟ್ಟಿಗಾರ್‌, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next