ಗುಡಿಬಂಡೆ: ತಿಂಗಳಿಂದ ಪಟ್ಟಣದ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಿಲ್ಲದೇ, ಪಾಠ ಪ್ರವಚ ನಗಳುನಡೆಯದೇ ವಿದ್ಯಾರ್ಥಿಗಳಿಗೆ ಅತಂತ್ರ ಸ್ಥಿತಿಗೆ ತಲುಪಿದ್ದಾರೆ. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ. ಮತ್ತು ಬಿ.ಕಾಂ ಕೋರ್ಸ್‌ಗಳಲ್ಲಿ ಒಟ್ಟು 153 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕಾಯಂ ಉಪನ್ಯಾಸಕರು ಇರುವುದು ಕೇವಲ 6ಮಂದಿ ಮಾತ್ರ. ಬಿಕಾಂ ಕೋರ್ಸ್‌ನಲ್ಲಿನ 5 ವಿಷಯಗಳ ಪೈಕಿ ಇಂಗ್ಲಿಷ್ ಉಪನ್ಯಾಸಕರು ಒಬ್ಬರುಹೊರತುಪಡಿಸಿ, ಉಳಿದ ವಿಷಯಗಳಿಗೆ ಅತಿಥಿ ಉಪನ್ಯಾಸಕರೇ ಅಧಾರವಾಗಿದ್ದರು.
ಬೋಧನೆ ಮಾಡುವವರಿಲ್ಲ: ಪದವಿ ಸೆಮಿಸ್ಟರ್ ಪರೀಕ್ಷೆಗಳು ಮುಂಬರುವ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ನಡೆಯುವ ಸಾಧ್ಯತೆಗಳಿವೆ ಎಂದು ಹೇಳುತ್ತಿದ್ದು, ಈಗ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಿರತರಾಗಿರುವುದರಿಂದ, ಉಜ್ವಲಭವಿಷ್ಯದ ಕನಸುಹೊತ್ತು ಕಾಲೇಜಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ, ಸರಿಯಾದ ಬೋಧನೆ ಇಲ್ಲದೆ, ಹೋದ ಪುಟ್ಟ ಬಂದ ಪುಟ್ಟ ಎಂಬಾತಾಗಿದೆ.
ಕಾಲೇಜು ತೊರೆಯುವ ಯೋಚನೆ: ಪ್ರತಿ ದಿನ ಕಾಲೇಜಿಗೆ ಹೋಗಿ, ನಾಲ್ಕು ಗೋಡೆಗಳ ಮಧ್ಯೆಕುಳಿತು ವಿದ್ಯಾರ್ಥಿಗಳು ಹರಟೆ ಹೊಡೆದು ಮನೆಗೆ ವಾಪಾಸ್ಸಾಗಬೇಕಾದ ಪರಿಸ್ಥಿತಿ ಬಂದೊದಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಪೋಷಕರು, ವಿದ್ಯಾರ್ಥಿಗಳನ್ನು ಕಾಲೇಜು ಬಿಡಿಸುವ ಯೋಚನೆ ಮಾಡುತ್ತಿದ್ದಾರೆ.
ಕಾಲೇಜಿನಲ್ಲಿ ಬಡ ವಿದ್ಯಾರ್ಥಿಗಳು: ತಾಲೂಕಿನಲ್ಲಿ ಸರ್ಕಾರಿ ಪದವಿ ಕಾಲೇಜು ಬಿಟ್ಟರೆ, ಖಾಸಗಿ ಕಾಲೇಜುಗಳು ಇಲ್ಲ, ಹಲವು ದಶಕಗಳಿಂದಲೂ ಸರ್ಕಾರಿ ಪದವಿ ಕಾಲೇಜಿನಲ್ಲಿ ಕಾಯಂ ಉಪನ್ಯಾಸಕರು ಇಲ್ಲ, ಫಲಿತಾಂಶ ಕುಸಿಯುತ್ತಿದೆ. ಕೆಲವರು ದೂರದ ಪ್ರಯಾಣವಾದ್ರೂ ಸರಿ ಎಂದು ಬೇರೆ ತಾಲೂಕುಗಳ ಖಾಸಗಿ, ಸರ್ಕಾರಿ ಕಾಲೇಜಿಗೆ ದಾಖಲು ಮಾಡಿದ್ದಾರೆ. ತೀರಾ ಬಡವರಿಗೆ ಈ ಕಾಲೇಜೇ ಗತಿಯಾಗಿದೆ. ನಮ್ಮ ಮಕ್ಕಳು ಪದವಿ ಓದಿದ್ದಾನೆ ಎಂದೆನಿಸಿಕೊಳ್ಳಲಿ ಎಂದು ಇಲ್ಲಿ ಸೇರಿಸಿದರೆ, ಇಲ್ಲಿ ಉಪನ್ಯಾಸಕರಿಲ್ಲದೆ ವಿದ್ಯಾರ್ಥಿಗಳ ಬದುಕು ಬೀದಿಗೆ ಬರುವಂತಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಕಿವಿಗೆ ಹಾಕಿಕೊಳ್ಳದ ಶಾಸಕರು: ತಾಲೂಕಿನಲ್ಲಿ ಇರುವ ಏಕೈಕ ಸರ್ಕಾರಿ ಪದವಿ ಕಾಲೇಜಿನಲ್ಲಿ ಉಪ ನ್ಯಾಸಕರಿಲ್ಲದೆ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ನಡೆಯದೇ, ವಿದ್ಯಾರ್ಥಿಗಳು ಗೋಳಾಡುತ್ತಿದ್ದಾರೆ. ಆದರೆ, ಶಾಸಕರು ಮಾತ್ರ ಕಾಲೇಜಿಗೆ ಕಾಯಂ ಉಪನ್ಯಾಸಕರನ್ನು ಕರೆತರುವಲ್ಲಿ, ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಸುವಲ್ಲಿ ವಿಫಲರಾಗಿ, ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದರು.
ಇಬ್ಬರು ಬೇರೆಡೆಗೆ ನಿಯೋಜನೆ: ಕಾಲೇಜಿನಲ್ಲಿ ಹಾಲಿ ಕಾಯಂ ಇರುವ ಆರು ಉಪನ್ಯಾಸಕರ ಪೈಕಿ 2 ಇಬ್ಬರನ್ನು ಬೇರೆಡೆಗೆ ನಿಯೋಜಿಸಲಾಗಿದ್ದು, ಉಳಿದ ನಾಲ್ಕು ಉಪನ್ಯಾಸಕರು ಮಾತ್ರ ಇದ್ದೇವೆ ಎಂದು ಪ್ರಾಂಶುಪಾಲ ಕೃಷ್ಣಪ್ಪ ತಿಳಿಸಿದರು.
ಮುಚ್ಚುವ ಸ್ಥಿತಿಯಲ್ಲಿ ಕಾಲೇಜು: ಬಿಎ ಮತ್ತು ಬಿಕಾಂ ಕೋರ್ಸ್‌ಗಳಿಗೆ ಕಾಯಂ ಉಪನ್ಯಾಸಕರಿಲ್ಲದೆ, ವರ್ಷದಿಂದ ವರ್ಷಕ್ಕೆ ದಾಖಲಾತಿ ಸಂಖ್ಯೆ ಕಡಿಮೆ ಆಗುತ್ತಿದ್ದು, ಈಗ ಅತಿಥಿ ಉಪನ್ಯಾಸಕರು ಹೋರಾಟದಲ್ಲಿ ಭಾಗಿಯಾಗಿದ್ದು, ತರಗತಿ ಸರಿಯಾಗಿ ನಡೆಯದೇ, ಪರೀಕ್ಷೆ ಬರೆಯುವುದಾದರೂ ಹೇಗೆ,ನಾವು ಟಿ.ಸಿ. ಪಡೆಯುತ್ತೇವೆ ಎಂದು ನೊಂದ ವಿದ್ಯಾರ್ಥಿಯೊಬ್ಬ ಕಣ್ಣೀರು ಹಾಕಿದ್ದಾರೆ.