ಪರ್ತ್: ಮಾರ್ನಸ್ ಲಬುಶೇನ್ ಬಾರಿಸಿದ ಹ್ಯಾಟ್ರಿಕ್ ಶತಕ ಸಾಹಸದಿಂದ ನ್ಯೂಜಿಲ್ಯಾಂಡ್ ವಿರುದ್ಧ ಪರ್ತ್‌ನಲ್ಲಿ ಆರಂಭಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯ ಉತ್ತಮ ಪ್ರದರ್ಶನ ನೀಡಿದೆ. ಮೊದಲ ದಿನ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿ 4 ವಿಕೆಟಿಗೆ 248 ರನ್ ಗಳಿಸಿದೆ. ಇದರಲ್ಲಿ ಲಬುಶೇನ್ ಪಾಲು ಅಜೇಯ 110.
ಇದು ಬಲಗೈ ಬ್ಯಾಟ್ಸ್‌ಮನ್ ಲಬುಶೇನ್ ಬಾರಿಸಿದ ಸತತ 3ನೇ ಟೆಸ್ಟ್ ಶತಕ. ಇದಕ್ಕೂ ಹಿಂದಿನ ಪಾಕಿಸ್ಥಾನ ವಿರುದ್ಧದ ಸರಣಿಯ ವೇಳೆ ಅವರು ಬ್ರಿಸ್ಬೇನ್‌ನಲ್ಲಿ 185 ಹಾಗೂ ಅಡಿಲೇಡ್‌ನಲ್ಲಿ 162 ರನ್ ಬಾರಿಸಿ ಮಿಂಚಿದ್ದರು. ಇದೇ ಫಾರ್ಮ್ ಮುಂದುವರಿಸಿದ ಲಬುಶೇನ್ ಈಗಾಗಲೇ 202 ಎಸೆತ ಎದುರಿಸಿದ್ದು, 14 ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದ್ದಾರೆ.
ಆಸೀಸ್ ಸರದಿಯ ಉಳಿದ ಪ್ರಮುಖ ಸ್ಕೋರರ್‌ಗಳೆಂದರೆ ಡೇವಿಡ್ ವಾರ್ನರ್ ಮತ್ತು ಸ್ಟೀವನ್ ಸ್ಮಿತ್. ಇಬ್ಬರೂ ತಲಾ 43 ರನ್ ಹೊಡೆದರು. ಇವರಿಬ್ಬರ ವಿಕೆಟ್ ನೀಲ್ ವ್ಯಾಗ್ನರ್ ಪಾಲಾಯಿತು.
ಆರಂಭಕಾರ ಜೋ ಬರ್ನ್ಸ್ (9) ಮತ್ತು ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದ ಮ್ಯಾಥ್ಯೂ ವೇಡ್ (12) ಬೇಗನೇ ಪೆವಿಲಿಯನ್ ಸೇರಿಕೊಂಡರು. ಲಬುಶೇನ್ ಜತೆ 20 ರನ್ ಮಾಡಿರುವ ಟ್ರ್ಯಾವಿಸ್ ಹೆಡ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.ಆಸ್ಟ್ರೇಲಿಯ ಬ್ಯಾಟಿಂಗ್ ಹಿಡಿತ ಸಾಧಿಸುವ ಸೂಚನೆ ನೀಡಿದರೂ ನ್ಯೂಜಿಲ್ಯಾಂಡ್ ಅಷ್ಟೇ ಬಿಗಿಯಾದ ಬೌಲಿಂಗ್ ಮೂಲಕ ಹೋರಾಟ ಸಂಘಟಿಸಿದೆ. ಟಿಮ್ ಸೌಥಿ, ನೀಲ್ ವ್ಯಾಗ್ನರ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮಿಚೆಲ್ ಸ್ಯಾಂಟ್ನರ್ ಪರ್ತ್ ಪಿಚ್‌ನ ಲಾಭವೆತ್ತುವಲ್ಲಿ ಯಶಸ್ಸು ಕಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್-4 ವಿಕೆಟಿಗೆ 248 (ಲಬುಶೇನ್ ಬ್ಯಾಟಿಂಗ್ 110, ವಾರ್ನರ್ 43, ಸ್ಮಿತ್ 43, ಹೆಡ್ ಬ್ಯಾಟಿಂಗ್ 20, ವ್ಯಾಗ್ನರ್ 52ಕ್ಕೆ 2).