ಹರಪನಹಳ್ಳಿ: ದುಡಿಯುವ ವರ್ಗ ವಿಶ್ವಾದ್ಯಂತ ಮೇ 1ರಂದು 132ನೇ ಕಾರ್ಮಿಕ ದಿನವನ್ನು ಆಚರಣೆ ನಡೆಸಲಾಗುತ್ತಿದೆ. ಆದರೆ ತಾಲೂಕು ಕೇಂದ್ರದಲ್ಲಿರುವ ಕಾರ್ಮಿಕ ಇಲಾಖೆ ಮಾತ್ರ ಕಾರ್ಮಿಕರನ್ನೇ ಮರೆತಿದೆ. ಕಾರ್ಮಿಕ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಂಡು ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯ ಕುರಿತು ಅರಿವು ಮೂಡಿಸುವ ಅವಕಾಶವಿದ್ದರೂ ಇಲಾಖೆಯ ಅಧಿಕಾರಿಗಳು ಇಲ್ಲಸಲ್ಲದ ಸಾಬೂಬು ಹೇಳುತ್ತಿದ್ದಾರೆ.
ಸೋಮವಾರ ದಿನಾಚರಣೆ ಆಚರಿಸುವ ಬದಲು ಕಾರ್ಮಿಕ ಇಲಾಖೆಗೆ ಬೀಗ ಜಡಿದು ಕಾರ್ಮಿಕರಿಗೆ ಅವಮಾನ ಮಾಡಲಾಗಿದೆ. ತಾಲೂಕಿನಲ್ಲಿ ಕಟ್ಟಡ ಕಾರ್ಮಿಕರು, ಕೃಷಿ ಕೂಲಿ ಕಾರ್ಮಿಕರು, ಒಂಟೆತ್ತಿನ ಬಂಡಿ ಕಾರ್ಮಿಕರು, ಮನೆಗೆಲಸದವರು ಸೇರಿದಂತೆ ಒಟ್ಟು ಅಂದಾಜು 50 ಸಾವಿರ ಅಸಂಘಟಿತ ಕಾರ್ಮಿಕರು ಇದ್ದಾರೆ.
ಅದರಲ್ಲಿ ಕಟ್ಟಡ ಕಾರ್ಮಿಕರಿಗೆ ಮಾತ್ರ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿದ್ದು, ತಾಲೂಕಿನ 5 ಸಾವಿರ ಕಟ್ಟಡ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿ ಮಾಡಿಸಿದ್ದಾರೆ ಹಾಗೂ ಎಐಟಿಯುಸಿ ಸಂಘಟನೆ ಪ್ರಯತ್ನದಿಂದ ಸೌಲಭ್ಯ ಪಡೆಯುತ್ತಿದ್ದಾರೆ. ಆದರೆ ಇತರ ಕಾರ್ಮಿಕರು ಇನ್ನೂ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ಸರ್ಕಾರ ಕಾರ್ಮಿಕರ ಜೀವನ ಸುಧಾರಣೆಗಾಗಿ ಹಲವಾರು ಕಲ್ಯಾಣ ಹಾಗೂ ಸಾಮಾಜಿಕ ಭದ್ರತೆಯ ಯೋಜನೆಗಳನ್ನು ರೂಪಿಸಿದೆ. ಆದರೆ ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು, ಜಾಗೃತಿ ಮೂಡಿಸುವುದು ಕಾರ್ಮಿಕ ಇಲಾಖೆಯ ಕೆಲಸ. ತಾಲೂಕಿನಲ್ಲಿ ಕೆಲವು ಕಾರ್ಯಕ್ರಮಗಳನ್ನು ತಾಲೂಕು ಆಡಳಿತ, ನ್ಯಾಯಾಂಗ ಇಲಾಖೆ ಕಾರ್ಮಿಕರಿಗಾಗಿ ಕೆಲವೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ.
ಆದರೆ ಕಾರ್ಮಿಕ ಇಲಾಖೆ ಕಾರ್ಯವೈಖರಿ ತೃಪ್ತಿದಾಯಕವಾಗಿಲ್ಲ ಎಂಬುವುದಾಗಿ ಕಾರ್ಮಿಕರು ದೂರುತ್ತಾರೆ. ಕಾರ್ಮಿಕರಿಗಾಗಿ ರಜೆ ಸಹಿತ ನಿಗದಿ ಮಾಡಿರುವ ಮೇ 1ರಂದು ಕಾರ್ಮಿಕ ದಿನಾಚರಣೆಯನ್ನು ಇಲಾಖೆ ಹಮ್ಮಿಕೊಳ್ಳಬೇಕಿತ್ತು. ಆದರೆ ಪಟ್ಟಣದ ತಾಯಮ್ಮನ ಹುಣಸೆಮರದ ಬಳಿ ಬಾಡಿಗೆ ಕಟ್ಟಡದಲ್ಲಿರುವ ಕಾರ್ಮಿಕ ನಿರೀಕ್ಷಕರ ಕಚೇರಿ ಸೋಮವಾರ ಬೀಗ ಹಾಕಲಾಗಿತ್ತು.
ಇಲ್ಲಿಯ ಕಾರ್ಮಿಕ ನಿರೀಕ್ಷಕರ ಹುದ್ದೆಗೆ ಕಾಯಂ ಅಧಿಕಾರಿ ಇಲ್ಲ. ಪ್ರಭಾರಿ ಕಾರ್ಮಿಕ ನಿರೀಕ್ಷಕರಾಗಿ ರಾಜಪ್ಪ ಕರ್ತವ್ಯದಲ್ಲಿದ್ದಾರೆ. ಈ ಕುರಿತು ಕಾರ್ಮಿಕ ನಿರೀಕ್ಷಕ ರಾಜಪ್ಪ ಅವರನ್ನು ಸಂಪರ್ಕಿಸಿದಾಗ “ನಾವು ಜಿಲ್ಲಾ ಕೇಂದ್ರದಲ್ಲಿ ಆಚರಿಸುತ್ತೇವೆ. ನನಗೆ ಆರೋಗ್ಯ ಸರಿಯಿಲ್ಲ. ಆಸ್ಪತ್ರೆಗೆ ಬೆಳಗಾವಿಗೆ ಬಂದಿ¨ªೇನೆ’ ಎಂದು ಪ್ರತಿಕ್ರಿಯಿಸಿದರು. ತಾಲೂಕಿನ ಕಾರ್ಮಿಕರ ಬಗ್ಗೆ ಸ್ಥಳೀಯ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ.
ಕಾರ್ಮಿಕರ ಬಗ್ಗೆ ಕನಿಷ್ಠ ಇಂದು ನೆನಪು ಮಾಡಿಕೊಳ್ಳದೆ ಇರುವುದು ದುರದೃಷ್ಟಕರ ಸಂಗತಿ. ಪಕ್ಕದ ಬಳ್ಳಾರಿ ಜಿಲ್ಲೆಯವರಾದ ಕಾರ್ಮಿಕ ಸಚಿವ ಸಂತೋಷಲಾಡ್ ಅವರು ಇತ್ತ ಗಮನಹರಿಸಿ ಖಾಯಂ ಅಧಿಕಾರಿ ನೇಮಕ ಮಾಡಬೇಕು. ಕಡ್ಡಾಯವಾಗಿ ಕಾರ್ಮಿಕರ ದಿನಾಚರಣೆ ಆಚರಿಸುವಂತೆ ಸೂಚನೆ ನೀಡಬೇಕೆಂದು ಎಐಟಿಯುಸಿ ಸಂಘಟನೆ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ಒತ್ತಾಯಿಸಿದ್ದಾರೆ.