Advertisement

ಪ್ರತಿ ತಾಲೂಕಲ್ಲೂ ಕಾರ್ಮಿಕ ಕಚೇರಿ

10:55 AM Feb 21, 2019 | Team Udayavani |

ದಾವಣಗೆರೆ: ಮುಂದಿನ ದಿನಗಳಲ್ಲಿ ಪ್ರತಿ ತಾಲೂಕು ಕೇಂದ್ರದಲ್ಲಿ ಕಾರ್ಮಿಕ ಇಲಾಖೆ ಕಚೇರಿ ಪ್ರಾರಂಭಿಸಲಾಗುವುದು ಎಂದು ಕಾರ್ಮಿಕ ಸಚಿವ ಪಿ. ವೆಂಕಟರಮಣಪ್ಪ ತಿಳಿಸಿದ್ದಾರೆ. ಬುಧವಾರ ದಾವಣಗೆರೆಯ ಇಎಸ್‌ಐ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಯೋಜನೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ತಾಲೂಕು ಕೇಂದ್ರ ಮತ್ತು ಸುತ್ತಮುತ್ತಲಿನ ಕಾರ್ಮಿಕರು ಸೌಲಭ್ಯಕ್ಕೆ ಜಿಲ್ಲಾ ಕೇಂದ್ರಗಳಿಗೆ ಬರುವುದಕ್ಕೆ ತೊಂದರೆ ಅನುಭವಿಸುವುದನ್ನು ಮನಗಂಡು ಇತರೆ ಸರ್ಕಾರಿ ಕಚೇರಿಗಳ ಮಾದರಿಯಲ್ಲಿ ರಾಜ್ಯದ ಎಲ್ಲಾ ತಾಲೂಕು ಕೇಂದ್ರದಲ್ಲಿ ಕಾರ್ಮಿಕ ಇಲಾಖಾ ಕಚೇರಿ
ಪ್ರಾರಂಭಿಸುವ ಮೂಲಕ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.

Advertisement

ಕಳೆದ 1 ವರ್ಷದಲ್ಲಿ 13 ಲಕ್ಷದಷ್ಟಿದ್ದ ಕಾರ್ಮಿಕರ ನೋಂದಣಿ ಪ್ರಮಾಣ 20 ಲಕ್ಷಕ್ಕೆ ಹೆಚ್ಚಳವಾಗಿದೆ. ಮೊದಲು ಕಾರ್ಮಿಕರು ಇಲಾಖೆಯಲ್ಲಿ ನೋಂದಣಿಯಾದ 3 ವರ್ಷ ಯಾವುದೇ ಸೌಲಭ್ಯ ದೊರೆಯುತ್ತಿರಲಿಲ್ಲ. ಈಗ ಅದನ್ನು 1 ವರ್ಷಕ್ಕೆ ಇಳಿಸಲಾಗಿದೆ. 1 ರಿಂದ ಪಿಎಚ್‌ಡಿಯವರೆಗೆ ವ್ಯಾಸಂಗ ಮಾಡುವ ಕಾರ್ಮಿಕರ ಮಕ್ಕಳ ಶುಲ್ಕವನ್ನು ಕಾರ್ಮಿಕ ಇಲಾಖೆಯಿಂದ ಭರಿಸಲಾಗುವುದು. ಮದುವೆಯಾಗುವಂತಹ ಕಾರ್ಮಿಕರ ಮಕ್ಕಳ ಮದುವೆಗೆ 50 ಸಾವಿರ ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು.

ಬೇರೆ ಬೇರೆ ಕಡೆಯಿಂದ ಬಂದು ಬೆಂಗಳೂರಲ್ಲಿ ಕೆಲಸ ಮಾಡುವಂತಹ ಕಾರ್ಮಿಕರಿಗೆ ಅನುಕೂಲವಾಗುವಂತೆ ಬೆಂಗಳೂರಿನ ಪೀಣ್ಯ-ಬಾಗಲಗುಂಟೆಯಲ್ಲಿ 20 ಕೋಟಿ ಅನುದಾನದಲ್ಲಿ ಡಾರ್ಮೆಟರಿ ನಿರ್ಮಾಣ ಮಾಡಲಾಗುತ್ತಿದೆ. ಕುಟುಂಬದ ಸದಸ್ಯರು ಇದ್ದವರಿಗೆ ಸಿಂಗಲ್‌ ಬೆಡ್‌ ರೂಂ ಮನೆ ಕಟ್ಟಿಸಿಕೊಡಲಾಗುವುದು. ಬಿಡದಿ, ಹುಬ್ಬಳ್ಳಿ, ಮೈಸೂರು, ಕೆಂಗೇರಿಯಲ್ಲಿ ತಲಾ 5 ಕೋಟಿಯಲ್ಲಿ ಡಾರ್ಮೆಟರಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಮಿಕರು ಮತ್ತವರ ಕುಟುಂಬದವರು ಸಭೆ, ಸಮಾರಂಭ ಮಾಡಿಕೊಳ್ಳಲು ಅನುಕೂಲ ಆಗುವಂತೆ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಕಾರ್ಮಿಕ ಭವನ ನಿರ್ಮಾಣ ಮಾಡಲಾಗುವುದು. ಈಗಾಗಲೇ ಪೀಣ್ಯದಲ್ಲಿ ಸುಸಜ್ಜಿತ ಕಾರ್ಮಿಕ ಭವನ ನಿರ್ಮಾಣವಾಗಿದೆ. ಎಲ್ಲಿ ಜಾಗ ಲಭ್ಯವಿದೆಯೋ ಅಲ್ಲಿ ಕಾರ್ಮಿಕ ಭವನ ಕಟ್ಟಿಸಿಕೊಡಲಾಗುವುದು.

ಬಳ್ಳಾರಿ, ಕೋಲಾರ, ನರಸಾಪುರ, ರಾಮನಗರಗಳಲ್ಲಿ ಇಎಸ್‌ಐ ಆಸ್ಪತ್ರೆ ಕಟ್ಟಲಾಗುವುದು. ಬೆಂಗಳೂರಿನ ಬೊಮ್ಮಸಂದ್ರದಲ್ಲಿರುವ ಇಎಸ್‌ಐ ಆಸ್ಪತ್ರೆಯನ್ನು 200 ಹಾಸಿಗೆ ಆಸ್ಪತ್ರೆಯನ್ನಾಗಿ, ಶಿವಮೊಗ್ಗ ಇಎಸ್‌ಐ ಆಸ್ಪತ್ರೆಯನ್ನು 50 ರಿಂದ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಇಂದಿರಾನಗರ ಆಸ್ಪತ್ರೆಯನ್ನು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.

Advertisement

ಕಳೆದ ಮೂರು ತಿಂಗಳ ಹಿಂದೆ ದಾವಣಗೆರೆಗೆ ಬಂದು 50 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಉದ್ಘಾಟಿಸಿದ್ದ ಸಂದರ್ಭದಲ್ಲಿ 100 ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚಿಸಬೇಕು ಎಂದು ಅನೇಕರು ಒತ್ತಾಯಿಸಿದ್ದರು. ಅಂದೇ ಹುಬ್ಬಳ್ಳಿಯಲ್ಲಿ ನಡೆದಿದ್ದ ಸಮಾರಂಭದಲ್ಲಿ ಭಾಗವಹಿಸಿದ್ದ ಕೇಂದ್ರದ ಕಾರ್ಮಿಕ ಸಚಿವರಿಗೆ ಸಂಸದ ಜಿ.ಎಂ. ಸಿದ್ದೇಶ್ವರ್‌ ಪತ್ರ ನೀಡಿದ್ದಲ್ಲದೆ ಹಠ ಮಾಡಿ ದಾವಣಗೆರೆಯ ಇಎಸ್‌ಐ ಆಸ್ಪತ್ರೆಯನ್ನು 50 ರಿಂದ 100 ಸಾಮರ್ಥ್ಯದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರುವಲ್ಲಿ ಅವರ ಪಾತ್ರ ಇದೆ.

ಇದು ಇಲ್ಲಿಗೆ ನಿಲ್ಲಬಾರದು. ಈ ಆಸ್ಪತ್ರೆಗೆ ಅತ್ಯಗತ್ಯವಾಗಿ ಬೇಕಾದ ವೈದ್ಯರು, ಒಳ್ಳೆಯ ಕಟ್ಟಡ ಮಾಡಿಸಬೇಕು. ಸಿದ್ದೇಶಣ್ಣ ಮನಸು ಮಾಡಿದರೆ ಚುನಾವಣೆ ಘೋಷಣೆಗೂ ಮುನ್ನವೇ ಎಲ್ಲವೂ ಮಂಜೂರಾಗುತ್ತದೆ. ರಾಜ್ಯ ಸರ್ಕಾರವೂ ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಿದೆ ಎಂದು
ತಿಳಿಸಿದರು. 

ಸಂಸದ ಜಿ.ಎಂ. ಸಿದ್ದೇಶ್ವರ್‌ ಮಾತನಾಡಿ, ಕೇಂದ್ರದ ಕಾರ್ಮಿಕ ಇಲಾಖೆ ಸಚಿವ ಸಂತೋಷ್‌ಕುಮಾರ್‌ ಗಂಗ್ವಾರ್‌ ಅವರೊಂದಿಗೆ ಸಾಕಷ್ಟು ಚರ್ಚೆ ನಡೆಸಿ, ಪ್ರಯತ್ನ ನಡೆಸಿ 100 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಶಂಕುಸ್ಥಾಪನೆಯನ್ನೂ ನೆರವೇರಿಸಲಾಗಿದೆ.

ಟೆಂಡರ್‌ ಮುಗಿದಿದೆ. ಆದಷ್ಟು ಬೇಗ ವೈದ್ಯರ ಕೊರತೆ ನೀಗಿಸುವ ಜೊತೆಗೆ ಒಳ್ಳೆಯ ಕಟ್ಟಡ, ಲೇಸರ್‌ ಶಸ್ತ್ರಚಿಕಿತ್ಸೆ ಒಳಗೊಂಡಂತೆ ಎಲ್ಲಾ ರೀತಿಯ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಕೇಂದ್ರ ಸರ್ಕಾರ ಕಾರ್ಮಿಕ ವಲಯಕ್ಕೆ ಸಾಕಷ್ಟು ಸೌಲಭ್ಯ ಒದಗಿಸುತ್ತಿದೆ ಎಂದು ತಿಳಿಸಿದರು.
 
ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌ ಮಾತನಾಡಿ, ನಗರ ಪ್ರದೇಶಗಳ ಕಾರ್ಮಿಕರಿಗೆ ನೀಡುವಂತೆ ಗ್ರಾಮೀಣ ಭಾಗದಲ್ಲಿ ಹೊಲ-ಗದ್ದೆಯಲ್ಲಿ ಕೆಲಸ ಮಾಡುವಂತಹವರಿಗೂ ಸೌಲಭ್ಯ ನೀಡುವಂತಾಗಬೇಕು ಎಂದು ಆಶಿಸಿದರು. ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ, ಮಹಾನಗರ ಪಾಲಿಕೆ ಸದಸ್ಯರಾದ ಡಿ.ಎನ್‌. ಕುಮಾರ್‌, ಪಿ.ಕೆ. ಲಿಂಗರಾಜ್‌, ಕಾರ್ಮಿಕ ಮುಖಂಡ ಎಚ್‌.ಕೆ. ರಾಮಚಂದ್ರಪ್ಪ, ದಾವಣಗೆರೆ ವಿಶ್ವವಿದ್ಯಾಲಯ ಸಿಂಡಿಕೇಟ್‌ ಸದಸ್ಯ ಕೊಂಡಜ್ಜಿ ಜಯಪ್ರಕಾಶ್‌, ಖ್ಯಾತ ಜವಳಿ ವರ್ತಕ ಬಿ.ಸಿ. ಉಮಾಪತಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಡಾ| ಕುಮಾರ್‌, ಆವರಗೆರೆ ಚಂದ್ರು ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next