ಬೆಂಗಳೂರು : ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಇಂದು (ಜುಲೈ 09) ವಿಕಾಸಸೌಧದ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಭದ್ರತಾ ಮಂಡಳಿಯ ಸಭೆಯನ್ನು ಅಧಿಕಾರಿಗಳೊಂದಿಗೆ ನಡೆಸಿದರು.
ಇಂದಿನ ಸಭೆಯಲ್ಲಿ ರಾಜ್ಯದ ಅಸಂಘಟಿತ ಕಾರ್ಮಿಕರ ಆರ್ಥಿಕ ಭದ್ರತೆಗಾಗಿ ನೀಡಬಹುದಾಂತಹ ಕಾರ್ಯಕ್ರಮಗಳ ಬಗ್ಗೆ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿದರು. ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ನೂತನವಾಗಿ ಪ್ರಾರಂಭಿಸಬಹುದಾದಂತಹ ಮಂಡಳಿ ಮತ್ತು ಅವುಗಳ ನಿರ್ವಹಣೆ ಬಗ್ಗೆ ವಿಸ್ತೃತವಾಗಿ ಚರ್ಚಿಸಿದರು.
ಇಂದಿನ ಸಭೆಯಲ್ಲಿ ವಿಶೇಷವಾಗಿ ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕ ಅಪಘಾತ ಪರಿಹಾರ ಯೋಜನೆಯ ಬಗ್ಗೆ ಮಾನ್ಯ ಸಚಿವರು ಗಂಭೀರವಾಗಿ ಪ್ರಗತಿ ಪರಿಶೀಲನೆ ನಡೆಸಿದರು, ಚಾಲಕರು ಪರಿಹಾರ ಪಡೆಯುವುದಕ್ಕೆ ಇರುವಂತಹ ಷರತ್ತುಗಳನ್ನು ಸಡಿಲಗೊಳಿಸುವಂತೆ ಸೂಚಿಸಿದರು. ಈ ಕುರಿತು ಮಾಹಿತಿ ನೀಡುವುದಕ್ಕೆ ವಿಶೇಷ ಪ್ರಚಾರ ಕಾರ್ಯವನ್ನು ಕೈಗೊಳ್ಳುವಂತೆ ಸೂಚಿಸಿದರು.
ಅಸಂಘಟಿತ ಕಾರ್ಮಿಕರಿಗೆ ನೀಡುತ್ತಿರುವ ಪ್ರಶಸ್ತಿ ಮೊತ್ತವನ್ನು 15,000 ರಿಂದ 20000 ರೂಪಾಯಿಗಳಿಗೆ ಹೆಚ್ಚಿಸಲಾಯಿತು ದ್ವಿತೀಯ ಬಹುಮಾನವನ್ನು 15000 ಮೂರನೇ ಪ್ರಶಸ್ತಿ ಮೊತ್ತವನ್ನು 10,000 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಹಾಗೂ ಸಮಾಧಾನಕರ ಮೊತ್ತವನ್ನು 1 ಸಾವಿರದಿಂದ 5 ಸಾವಿರಗಳಿಗೆ ಹೆಚ್ಚಿಸಲಾಯಿತು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅಸಂಘಟಿತ ಕಾರ್ಮಿಕರಿಗೆ ಇಲಾಖೆಯಿಂದ ನೀಡಲಾಗುತ್ತಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದಕ್ಕೆ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸುವಂತೆ ಹಾಯ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವುದರ ಕುರಿತು ಪೂರ್ವ ಸಿದ್ದತೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ.ಜಿ.ಕಲ್ಪನಾ ಹಾಗೂ ಕಾರ್ಮಿಕ ಆಯುಕ್ತರಾದ ಅಕ್ರಂ ಪಾಷಾ ಹಾಗೂ ಅಸಂಘಟಿತ ಕಾರ್ಮಿಕರ ಭದ್ರತಾ ಮಂಡಳಿಯ ನಿರ್ದೇಶಕರು ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.