Advertisement

ಸ್ಥಳೀಯರಿಂದ ಶ್ರಮದಾನ ; ನೆಕ್ಕರೆಕೆರೆಯಲ್ಲಿದೆ 8 ಅಡಿ ನೀರು!

11:48 PM May 19, 2019 | Team Udayavani |

ಉಡುಪಿ: ಈ ಬಾರಿಯ ಬೇಸಗೆಯಲ್ಲಿ ನೀರಿಲ್ಲ ಎಂದು ಅಲವತ್ತು ಕೊಳ್ಳುವುದೇ ಆಯಿತು. ಲಭ್ಯ ಇರುವ ನೀರಿನ ಮೂಲವನ್ನು ಹುಡುಕುವ ಕೆಲಸ ಮಾಡದಿರುವುದೇ ಈ ಎಲ್ಲ ಸಮಸ್ಯೆಗೆ ಕಾರಣವಾಗಿದೆ.

Advertisement

ಗುಂಡಿಬೈಲು ವಾರ್ಡ್‌ನಲ್ಲಿರುವ 50 ಅಡಿ ಅಗಲ, 100 ಅಡಿ ಉದ್ದವಿರುವ ನೆಕ್ಕರೆಕೆರೆಯಲ್ಲಿ ಈ ಬೇಸಗೆಯಲ್ಲೂ ಸುಮಾರು 8 ಅಡಿಗಳಷ್ಟು ನೀರಿರುವುದು ವಿಶೇಷ. ಆದರೆ ಸೂಕ್ತ ನಿರ್ವಹಣೆ ಮಾಡದೆ ಇರುವುದರಿಂದ ಇದನ್ನು ಕುಡಿಯಲು ಉಪಯೋಗಿಸುತ್ತಿಲ್ಲ. 5 ವರ್ಷದ ಹಿಂದೆ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಈ ಕೆರೆಯನ್ನು ಅಭಿವೃದ್ಧಿ ಮಾಡಲಾಗಿತ್ತು.

ಕುಡಿಯಲು ಬಳಕೆಯಾದರೆ ಉತ್ತಮ ನೀರಿಗೆ ಬರಗಾಲ ಉಂಟಾಗಿರುವ ಈ ಸಮಯದಲ್ಲಿ ಈ ನೀರನ್ನು ಕುಡಿಯಲು ಯೋಗ್ಯವಾಗುವಂತೆ ಮಾಡಿದರೆ ನೀರಿನ ಸಮಸ್ಯೆ ಸ್ಥಳೀಯ ಕೆಲ ವಾರ್ಡ್‌ಗಳಲ್ಲಾದರೂ ಕಡಿಮೆ ಯಾಗಬಹುದು. ಈ ಬಗ್ಗೆ ನಗರಸಭೆ ಅಧಿಕಾರಿಗಳು ಗಮನಹರಿಸಿದರೆ ಉತ್ತಮ ಎಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ.

ಸ್ಥಳೀಯರಿಂದ ಶ್ರಮದಾನ
ಈ ನೀರನ್ನು ಇತರ ಚಟುವಟಿಕೆ ಗಳಾದರೂ ಬಳಸುವಂತೆ ಮಾಡುವ ನಿಟ್ಟಿನಲ್ಲಿ ಇಲ್ಲಿನ ಸ್ಥಳೀಯ ಸುಮಾರು 30 ಮಂದಿಯ ತಂಡ ರವಿವಾರ ಸ್ವತ್ಛತಾ ಕಾರ್ಯ ನಡೆಸಿದರು. ನೀರಿನಲ್ಲಿರುವ ತ್ಯಾಜ್ಯ ತೆಗೆದು ಶುಚಿಗೊಳಿಸಲಾಯಿತು.

ಕೆರೆಅಭಿವೃದ್ಧಿಯಾಗಲಿ
ನಗರಸಭಾ ವ್ಯಾಪ್ತಿಯಲ್ಲಿ ಸುಮಾರು 50ರಷ್ಟು ಖಾಸಗಿ ಹಾಗೂ ಸರಕಾರಿ ಕೆರೆಗಳಿದ್ದು ಇದರ ಸೂಕ್ತ ನಿರ್ವಹಣೆ ಆಗಬೇಕಿದೆ. ನೀರಿನ ಸಮಸ್ಯೆ ಅಂದಾಕ್ಷಣ ಸ್ವರ್ಣಾ ನದಿಯ ಬಜೆ ಅಣೆಕಟ್ಟಿನತ್ತ ಬೊಟ್ಟು ಮಾಡುವ ಪ್ರಮೇಯ ಕಡಿಮೆಯಾಗಲಿದೆ. ಈ ಬಗ್ಗೆ ನಗರಸಭೆ ಮುಂದಿನ ಬೇಸಗೆ ಕಾಲಕ್ಕೂ ಮುನ್ನ ಎಚ್ಚೆತ್ತುಕೊಂಡರೆ ಈ ವರ್ಷ ಸಂಭವಿಸಿದಂತಹ ಘಟನೆಗಳು ಮರುಕಳಿಸುವ ಸಾಧ್ಯತೆಯೂ ಕಡಿಮೆಯಾಗಬಹುದು. ಪ್ರತೀ ವಾರ್ಡ್‌ಗಳಲ್ಲಿರುವ ಸರಕಾರಿ ಬಾವಿಗಳನ್ನು ಗುರುತಿಸಿ ಕಾಯಕಲ್ಪ ನೀಡಿದರೆ ನೀರಿನ ಲಭ್ಯತೆಯೂ ಹೆಚ್ಚಾಗಲಿದೆ. ಕುಡಿಯಲು ಅಲ್ಲದಿದ್ದರೂ ಇನ್ನಿತರ ಕೆಲಸಕಾರ್ಯಗಳಿಗಾದರೂ ಬಳಸಿಕೊಳ್ಳಬಹುದು.

Advertisement

ನಗರಸಭೆ ಅಧಿಕಾರಿಗಳು ಗಮನಿಸಲಿ
ನೆಕ್ಕರೆಕೆರೆಯಲ್ಲಿ ಸುಮಾರು 8 ಅಡಿಗಳಷ್ಟು ನೀರಿದೆ. ಈ ಬಾರಿ ಅಲ್ಲದಿದ್ದರೂ ಮಂದಿನ ವರ್ಷಕ್ಕೆ ಈ ಕೆರೆಯ ನೀರನ್ನು ಕುಡಿಯಲು ಯೋಗ್ಯ ಮಾಡುವಂತೆ ನಗರಸಭೆ ಅಧಿಕಾರಿಗಳು ಗಮನಹರಿಸಬೇಕು.
-ಪ್ರಭಾಕರ ಪೂಜಾರಿ
ಗುಂಡಿಬೈಲು ವಾರ್ಡ್‌ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next