Advertisement

ರಾಜ್ಯ ಕಾರ್ಮಿಕರ ಕಲ್ಯಾಣಕ್ಕೆ ಕಾರ್ಮಿಕ ಇಲಾಖೆ ಮಂತ್ರ

11:40 PM Feb 02, 2020 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಸಂಘಟಿತ, ಅಸಂಘಟಿತ ಕಾರ್ಮಿಕರು, ಬಾಲ ಕಾರ್ಮಿಕರು, ವಲಸೆ ಕಾರ್ಮಿಕರ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಲು ಕಾರ್ಮಿಕ ಇಲಾಖೆ ಮುಂದಾಗಿದೆ. ರಾಜ್ಯದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ವಲಯ ಸೇರಿ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ಸಂಘಟಿತ, ಅಸಂಘಟಿತ ಕಾರ್ಮಿಕರು, ಬಾಲ ಕಾರ್ಮಿಕರು, ವಲಸೆ ಕಾರ್ಮಿಕರಲ್ಲಿ ಕರ್ನಾಟಕದವರು, ಹೊರ ರಾಜ್ಯದವರು ಎಷ್ಟೆಷ್ಟು ಎಂಬುದರ ಅಂಕಿ-ಅಂಶ ಸಂಗ್ರಹಿಸಿ “ಡಾಟಾ’ ಸಿದ್ಧಪಡಿಸುವುದು ಹಾಗೂ ಅರ್ಹರನ್ನು ಕಾರ್ಮಿಕ ಸವಲತ್ತು -ಸೌಲಭ್ಯ ವ್ಯಾಪ್ತಿಯಡಿ ತರುವುದು ಇದರ ಉದ್ದೇಶ.

Advertisement

ಜತೆಗೆ, ರಾಜ್ಯದಲ್ಲಿ 21 ಲಕ್ಷ ಕಾರ್ಮಿಕರು ನೋಂದಣಿಯಾಗಿದ್ದರೂ ಕಾರ್ಮಿಕ ಕಲ್ಯಾಣ ಮಂಡಳಿ ಮೂಲಕ ಸಂಗ್ರಹಿಸುವ 8500 ಕೋಟಿ ರೂ. (ಸೆಸ್‌) ಬಳಕೆಯಾಗಿಲ್ಲ. ಹೀಗಾಗಿ, ಆ ಮೊತ್ತ ದಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ವಿಶೇಷ ಕ್ಷೇಮಾಭಿ ವೃದ್ಧಿ ಯೋಜನೆ ರೂಪಿಸಲು ನಿರ್ಧರಿಸಿದೆ. ಈಗಾಗಲೇ ಕಟ್ಟಡ ಕಾರ್ಮಿಕರು, ಕಾರ್ಮಿಕ ಸಂಘಟನೆಗಳ ಮುಖಂಡರು, ಇಲಾಖೆಯ ಅಧಿಕಾರಿಗಳು, ಕಟ್ಟಡ ಕೈಗಾರಿಕಾ ಕ್ಷೇತ್ರದ ದಿಗ್ಗಜರು, ನಿರ್ಮಾಣ ಕ್ಷೇತ್ರದ ಭಾಗೀದಾರರ ಸಭೆ ನಡೆಸಿ ಈ ಕುರಿತು ಮಾಹಿತಿ ವಿನಿಯಮ ಮಾಡಿಕೊಂಡಿರುವ ಕಾರ್ಮಿಕ ಇಲಾಖೆ ಸಾವಿರಾರು ಕೋಟಿ ರೂ. ಸೆಸ್‌ ಹಣ ಕಾರ್ಮಿಕರಿಗೆ ಸೌಲಭ್ಯ-ಸವಲತ್ತು ರೂಪದಲ್ಲಿ ವಿನಿಯೋಗಿಸುವ ಸಂಬಂಧ ಕಾರ್ಯಯೋಜನೆ ಸಿದ್ಧಪಡಿಸಿದೆ.

ಆಶಾದೀಪ ಹೆಲ್ಪ್ಲೈನ್‌: ಈ ನಿಟ್ಟಿನಲ್ಲಿ ಕಾರ್ಮಿಕರ ದೂರು-ದುಮ್ಮಾನ ಆಲಿಸಲು “ಆಶಾದೀಪ’ ಸಹಾಯ ವಾಣಿ ಕೇಂದ್ರ ಸ್ಥಾಪಿಸಲಾಗಿದ್ದು ದಿನದ 24 ಗಂಟೆ ವರ್ಷದ 365 ದಿನವೂ ಇದು ಕೆಲಸ ಮಾಡ ಲಿದೆ. ರಾಜ್ಯದ ಯಾವುದೇ ಮೂಲೆಯಿಂದ ಕಾರ್ಮಿ ಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದಾಗಿದೆ. ದೂರು ನೀಡಿದವರ ಹೆಸರು, ವಿಳಾಸ ಸಹಿತಿ ದಾಖಲು ಮಾಡಿಕೊಂಡು ಅವರ ಸಮಸ್ಯೆಗೆ ಇಲಾಖಾ ಮಟ್ಟದಲ್ಲಿ ಕೈಗೊಂಡ ಪರಿಹಾರದ ಬಗ್ಗೆ ಎಸ್‌ಎಂಎಸ್‌ ಮೂಲಕ ಉತ್ತರವೂ ಸಿಗಲಿದೆ. ಸರ್ಕಾರದಿಂದ ಲಭ್ಯವಿರುವ ಯೋಜನೆಗಳಿಗೂ ಸಹಾಯವಾಣಿ ಮೂಲಕ ನೋಂದಣಿಯೂ ಆಗಬಹುದು.

ಜತೆಗೆ, ಕೆಲಸದ ಸ್ಥಳಗಳಲ್ಲಿ ನಡೆಯುವ ದೌರ್ಜನ್ಯ, ಮಾಲೀಕರು ಅಥವಾ ಗುತ್ತಿಗೆದಾರರಿಂದ ಶೋಷಣೆ, ಕಿರುಕುಳ, ನಿಯಮಾನುಸಾರ ವೇತನ ಪಾವತಿ , ಕನಿಷ್ಠ ವೇತನ ಸಿಗುತ್ತಿದೆಯೋ ಇಲ್ಲವೋ, ಮಹಿಳಾ ಕಾರ್ಮಿಕರಾದರೆ ಕೆಲಸದ ಸ್ಥಳದಲ್ಲಿ ನಡೆಯುವ ದೌರ್ಜರ್ನ ಕಿರುಕುಳದ ಬಗ್ಗೆಯೂ ಸಹಾಯವಾಣಿಗೆ ದೂರು ನೀಡಬಹುದು.  ಬೆಂಗಳೂರು ಸೇರಿ ರಾಜ್ಯದಲ್ಲಿ ಕಟ್ಟಡ ನಿರ್ಮಾಣ ಸೇರಿ ಇತರೆ ಕಾಮಗಾರಿಗಳಲ್ಲಿ ತೊಡಗಿರುವವರು ಬಹುತೇಕರು ಹೊರರಾಜ್ಯದವರು.

ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್‌, ಒಡಿಸ್ಸಾ, ಅಸ್ಸಾಂನವರು. ಅಷ್ಟೇ ಅಲ್ಲದೆ ಬಾಂಗ್ಲಾ ವಲಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಯಾರು ಎಲ್ಲಿ ಕೆಲಸ ಮಾಡುತ್ತಿದ್ದಾರೆ . ಯಾವ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುದರ ಬಗ್ಗೆ ನಿಖರ ಮಾಹಿತಿ ಸಂಗ್ರಹ ಮಾಡಿದರೆ ಸವಲತ್ತು ಕೊಡಲು ಅನುಕೂಲ ಜತೆಗೆ ಕಾರ್ಮಿಕ ಸಂಖ್ಯೆ ಅವರ ಪೂರ್ವಾಪರದ ಮಾಹಿತಿಯೂ ಸಿಗಲಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

Advertisement

ವಿಶೇಷ ವ್ಯವಸ್ಥೆ: ಮಹಿಳಾ ಕಾರ್ಮಿಕರು ರಾತ್ರಿ ವೇಳೆಯಲ್ಲಿ ಮನೆ ತಲುಪುವುದು ತಡವಾದರೆ ಕೆಲಸದ ಸ್ಥಳದಿಂದ ಮನೆವರೆಗಿನ ಅವರ ಚಲನವಲನ ಕುರಿತು ತಂದೆ-ತಾಯಿಗೆ ಮಾಹಿತಿ ನೀಡುವ ಹೊಸ ವ್ಯವಸ್ಥೆಯನ್ನೂ ಕಾರ್ಮಿಕ ಇಲಾಖೆ ಮಾಡುತ್ತಿದೆ. ಅದಕ್ಕಾಗಿಯೇ ವಿಶೇಷ ಆ್ಯಪ್‌ ಸಿದ್ಧಪಡಿಸಿದೆ. ಮಹಿಳಾ ಕಾರ್ಮಿಕರು ಹಾಗೂ ಅವರ ತಂದೆ ಅಥವಾ ತಾಯಿ ಅದರಡಿ ನೋಂದಣಿಯಾಗ ಬಹುದು. ತಮ್ಮ ಮಗಳು ಕೆಲಸ ಬಿಟ್ಟ ನಂತರ ಯಾವ ಮಾರ್ಗದಲ್ಲಿ ಬರುತ್ತಿದ್ದಾಳೆ, ಎಲ್ಲಿದ್ದಾಳೆ ಎಂಬುದರ ಮಾಹಿತಿಯೂ ಅದರಡಿ ಸಿಗುತ್ತದೆ. ಅಪಾಯ ಸಂದರ್ಭದಲ್ಲಿ ಇಲಾಖೆಗೆ ಮಾಹಿತಿ ರವಾನಿಸಬಹುದು. ಆ ಮಾಹಿತಿ ಸ್ಥಳೀಯ ಪೊಲೀಸ್‌ ಠಾಣೆಗೆ ತಲುಪುತ್ತದೆ ಎಂದು ತಿಳಿಸುತ್ತಾರೆ.

ಲಕ್ಷಾಂತರ ಕುಟುಂಬಗಳ ಸಮೂಹ ಹೊಂದಿ ರುವ ಕಾರ್ಮಿಕ ಇಲಾಖೆಗೆ ಕಾಯಕಲ್ಪ ನೀಡಲು ತೀರ್ಮಾನಿಸಲಾಗಿದೆ. ಎಲ್ಲ ವಲಯದ ಕಾರ್ಮಿಕರ ಬಗ್ಗೆ ಮಾಹಿತಿ ಸಂಗ್ರಹಿಸಿ ಅವರಿಗೆ ಸರ್ಕಾರದಿಂದ ಲಭ್ಯವಿರುವ ಸಾಮಾಜಿಕ ಭದ್ರತಾ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಿ ಅವರ ಹೆಸರು ನೋಂದಾಯಿಸಿ ಜತೆಗೆ ಅವರು ಕೆಲಸದ ಸ್ಥಗಳಲ್ಲಿ ಎದುರಿಸುತ್ತಿರುವ ಸಮಸ್ಯೆ-ಸವಾಲು ಅರಿತು ಪರಿಹಾರ ಕಲ್ಪಿಸಲು “ಆಶಾದೀಪ’ ಹೆಲ್ಫ್ಲೈನ್‌ ಪ್ರಾರಂಭಿಸಲಾಗುತ್ತಿದೆ. ಶುಲ್ಕ ರಹಿತ ಕರೆ ಮಾಡಬಹುದು, ವಾಟ್ಸ್‌ಅಪ್‌ ಮೂಲಕವೂ ತಮ್ಮ ದೂರು ದಾಖಲಿಸಬಹುದು. ಇದು ಕಾರ್ಮಿಕರ ಪಾಲಿಗೆ ವರದಾನವಾಗಲಿದೆ.
-ಎಸ್‌.ಸುರೇಶ್‌ಕುಮಾರ್‌, ಕಾರ್ಮಿಕ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

* ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next