ಕಾರ್ಕಳ: ಯಾವುದೇ ಅಂಗ ಸ್ವಲ್ಪ ಊನವಾದರೂ ಬದುಕೇ ಮುಗಿಯಿತು ಎಂದುಕೊಳ್ಳುವವರೇ ಹೆಚ್ಚು. ಅಂಥವರ ಎದುರು ಒಂದು ಕಾಲೇ ಇಲ್ಲದಿದ್ದರೂ ಬದುಕಿನ ಗುರಿ ಮುಟ್ಟಲು ಛಲದಿಂದ ಬದುಕು ನಡೆಸುತ್ತಿರುವ ಸ್ವಾವಲಂಬಿಯ ಪರಿಚಯ ಇಲ್ಲಿದೆ. ಇದು ಮೇ ಒಂದು -ಕಾರ್ಮಿಕ ದಿನದ ವಿಶೇಷ.
ಅವರ ಹೆಸರು ನಾರಾಯಣ ನಾಯಕ್. ಹಿರ್ಗಾನ ಗ್ರಾಮದ ಶಿವನಗರ ಸ.ಹಿ.ಪ್ರಾ. ಶಾಲೆ ಬಳಿಯ 5 ಸೆಂಟ್ಸ್ ಕಾಲನಿಯಲ್ಲಿ ವಾಸ. ಕೂಲಿಯೇ ಜೀವನಕ್ಕೆ ಆಧಾರ.
ನಾರಾಯಣ ಅವರು ಪತ್ನಿ ನಳಿನಿ ನಾಯಕ್ ಜತೆಗೂಡಿ ಕೂಲಿ ಕೆಲಸ ಮಾಡುತ್ತ ಸ್ವಾವಲಂಬಿ ಜೀವನ ಕಟ್ಟಿಕೊಂಡಿದ್ದರು. ಬಡತನವಿದ್ದರೂ ಸಂತೃಪ್ತ ಕುಟುಂಬವಾಗಿತ್ತು. ಆದರೆ 20 ವರ್ಷಗಳ ಹಿಂದೆ ಸಂಭವಿಸಿದ ದುರಂತ ಅವರ ಅವರ ಬದುಕನ್ನೇ ಕಂಗೆಡಿಸಿತ್ತು. ನಾರಾಯಣ ಅವರು ಲಾರಿಗೆ ಮರದ ದಿಮ್ಮಿ ಪೇರಿಸಿಡುವ ಕೆಲಸ ಮಾಡುತ್ತಿದ್ದಾಗ ಬೃಹತ್ ದಿಮ್ಮಿ ಎಡಕಾಲಿನ ಮೇಲೆ ಬಿದ್ದು ಎಲುಬುಗಳು ಪುಡಿಯಾದವು. ಶಸ್ತ್ರಚಿಕಿತ್ಸೆ ಮಾಡಿಸಿದರೂ ಪ್ರಯೋಜನವಾಗಲಿಲ್ಲ. ತಿಂಗಳ ಬಳಿಕ ಊನ ಹೆಚ್ಚಾದಾಗ ವೈದ್ಯರು ಕಾಲನ್ನು ಕತ್ತರಿಸಬೇಕಾದ ಅನಿವಾರ್ಯದ ಬಗ್ಗೆ ತಿಳಿಸಿದರು. ಕಾಲನ್ನು ಕಳೆದುಕೊಂಡ ನಾರಾಯಣ ಶಾಶ್ವತ ಅಂಗವಿಕಲರಾದರು. ಬದುಕಿನ ಬಂಡಿಯೂ ಮಗುಚಿತು. ಹಾಗೆಂದು ಕೊರಗುತ್ತ ಕುಳಿತರೆ ಹೊಟ್ಟೆ ತುಂಬಬೇಕಲ್ಲ. ಕೆಲವೇ ದಿನಗಳಲ್ಲೇ ಖನ್ನತೆಯಿಂದ ಹೊರಬಂದು ಬದುಕುವ ಉತ್ಸಾಹ ತೋರಿದರು. ನಿಧಾನವಾಗಿ ಕೆಲಸ ಆರಂಭಿಸಿದರು.
ಅವರಿಗೀಗ 65ರ ವಯಸ್ಸು. ದೇಹದ ಶಕ್ತಿ ಕುಂದಿದೆ. ಆದರೆ ಉತ್ಸಾಹ ಕುಂದಿಲ್ಲ. ಎಷ್ಟೇ ಎತ್ತರದ ಮರವಿರಲಿ, ಕ್ಷಣಾರ್ಧದಲ್ಲಿ ಏರುವಷ್ಟು ನೈಪುಣ್ಯ ಸಾಧಿಸಿದ್ದಾರೆ. ಚಕಚಕನೆ ಮರವೇರಿ ತೆಂಗು, ಅಡಿಕೆ ಕೀಳಬಲ್ಲರು. ಸೌದೆ ಒಡೆಯುವುದು, ತೆಂಗು, ಅಡಿಕೆ ಕಾಯಿ ಕೀಳುವುದ, ಮರಗಳ ಬಿಡಿಸುವುದ, ಹಟ್ಟಿಯ ಗೊಬ್ಬರ ಬಿಡಿಸುವುದು, ನಳ್ಳಿ ನೀರಿನ ಪೈಪ್‌ಗ್ಳಿಗಾಗಿ ಹೊಂಡ ತೋಡುವುದು…ಹೀಗೆ ಎಲ್ಲ ಕೆಲಸವನ್ನೂ ನಿರ್ವಹಿಸತೊಡಗಿದ್ದಾರೆ. ಆ ಮೂಲಕ ಬದುಕಿನ ಬಂಡಿಯ ನಡೆಸುತ್ತಿದ್ದಾರೆ. ಹಾಗಾಗಿ ಇವರ ಬಂಡಿಗೆ ಆತ್ಮವಿಶ್ವಾಸ ಹಾಗೂ ಛಲವೇ ಚಕ್ರಗಳು. ಜೀವನಾಸಕ್ತಿ ಹಾಗೂ ಉತ್ಸಾಹ ಇನ್ನೆರಡು ಚಕ್ರಗಳಾಗಿ ಸೇರಿ ಎಲ್ಲರನ್ನೂ ನಿಬ್ಬೆರಗುಗೊಳಿಸುತ್ತಿದೆ. ಇರುವುದೊಂದೇ ಭೂಮಿ ಎಂಬಂತೆ ಇರುವುದೊಂದೇ ಬದುಕು. ಅದನ್ನು ಪ್ರೀತಿಸಬೇಕು, ಬದುಕಬೇಕು ಎನ್ನುತ್ತಾರೆ ನಾರಾಯಣ.
ಶ್ರಮಿಕ ಕುಟುಂಬ
ನಾರಾಯಣ ದಂಪತಿಗೆ ಪುತ್ರ, ಮೂವರು ಪುತ್ರಿಯರು ಸೇರಿ ನಾಲ್ವರು ಮಕ್ಕಳು. ಪತ್ನಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಪುತ್ರ ಕೂಡ ಅಟೋ ರಿಕ್ಷಾ ಓಡಿಸಿ ಮನೆಯ ಆರ್ಥಿಕ ಹೊರೆಯನ್ನು ತಗ್ಗಿಸಲು ನೆರವಾಗುತ್ತಿದ್ದಾರೆ. ಕುಟುಂಬವು ನಾರಾಯಣ ಅವರ ಚಿಕಿತ್ಸೆಗೆ ಸಾಕಷ್ಟು ಹಣ ವ್ಯಯಿಸಿದೆ. ಅಪಘಾತವಾಗಿದ್ದರೂ ಅವರಿಗೆ ಯಾವುದೇ ಪರಿಹಾರ ದೊರಕಿಲ್ಲ. ಸರಕಾರದಿಂದ ಮಾಸಾಶನ ಬಿಟ್ಟರೆ ಬೇರೆ ಯಾವುದೇ ಆರ್ಥಿಕ ನೆರವು ಈ ಕುಟುಂಬಕ್ಕೆ ಸಿಕ್ಕಿಲ್ಲ.
-ಬಾಲಕೃಷ್ಣ ಭೀಮಗುಳಿ