Advertisement

ಸಾಧನೆ ಮಾಡದಿದ್ದರೂ ಪ್ರಶಸ್ತಿಗೆ ಲಾಬಿ

06:18 AM Feb 18, 2019 | |

ಬೆಂಗಳೂರು: ಸಮಾಜದಲ್ಲಿ ಯಾವುದೇ ಸಾಧನೆ ಮಾಡದಂತಹ ವ್ಯಕ್ತಿಗಳು ಕೂಡ ಪ್ರಶಸ್ತಿ ಪಡೆಯಲು ಲಾಬಿ ಮಾಡುತ್ತಿದ್ದು, ಇಂತಹ ನಡೆ ಅಸಹ್ಯ ಹುಟ್ಟಿಸುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಬಿಎಂಶ್ರೀ ಪ್ರತಿಷ್ಠಾನವು ಎನ್‌.ಆರ್‌.ಕಾಲೊನಿಯ ಎಂವಿಸೀ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿ.ನಾಗರಾಜರಾವ್‌ ಸಮೂಹ ಮಾಧ್ಯಮ ಪ್ರಶಸ್ತಿ, ಪ್ರೊ.ಎಲ್‌.ಎಸ್‌.ಶೇಷಗಿರಿರಾವ್‌ ವಿಮಶಾ ಪ್ರಶಸ್ತಿ ಹಾಗೂ ಸಾರಂಗಿ ವೆಂಕಟರಾಮಯ್ಯ ಪುಟ್ಟಚ್ಚಮ್ಮ ದತ್ತಿ ಪುಸ್ತಕ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

ಪ್ರಶಸ್ತಿ ಪಡೆಯಲು ಯಾವುದೇ ಅರ್ಹತೆ ಇಲ್ಲದಿದ್ದರೂ ಲಾಬಿ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಕೆಲವರು ಹಗಲು ರಾತ್ರಿ ಎನ್ನದೇ ನಮ್ಮ ಮನೆಗೆ ಭೇಟಿ ನೀಡಿ ಪ್ರಶಸ್ತಿ ನೀಡುವಂತೆ ಒತ್ತಾಯಿಸಿದ್ದರು. ಜತೆಗೆ ರಾಜಕೀಯ ಪ್ರಭಾವ ಬಳಸಿ ತಮಗೇ ಪ್ರಶಸ್ತಿ ನೀಡುವಂತೆ ಒತ್ತಡ ತಂದರು. ಆದರೆ, ಇಂತಹ ಮನಸ್ಥಿತಿ ಉಳ್ಳವರಿಗೆ ಯಾವುದೇ ಪ್ರಶಸ್ತಿ ಕೊಡಬಾರದು ಎಂದರು.

ಕನ್ನಡ ಹೋರಾಟಗಾರರ ಶ್ರಮದ ಫಲವಾಗಿ ಸರ್ಕಾರಿ ಶಾಲೆಗಳ ವಿಲೀನ ಕೈಬಿಟ್ಟಿರುವುದು ಹಾಗೂ ಕೈಗಾರಿಕಾ ಮತ್ತು ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಸರೋಜಿನಿ ಮಹಿಷಿ ವರದಿ ತಿದ್ದುಪಡಿಯಂತಹ ಮಹತ್ವದ ತೀರ್ಮಾನಕ್ಕೆ ಸರ್ಕಾರ ಮುಂದಾಗಿರುವುದು ಸಂತಸದ ವಿಚಾರ ಎಂದು ತಿಳಿಸಿದರು.

ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ರಾಜಕಾರಣಿಗಳು ಹಣ ಮತ್ತು ಅಧಿಕಾರದ ಬೆನ್ನತ್ತಿ ಹೊರಟಿದ್ದಾರೆ. ಇದರಿಂದ ಸಮಾಜದಲ್ಲಿ ಕ್ರೌರ್ಯ, ದ್ವೇಷ ಮತ್ತು ಅಸೂಯೆ ಹೆಚ್ಚಾಗುತ್ತಿದೆ. ನಾವೆಲ್ಲ ಬದುಕಿನಲ್ಲಿ ಸಂತೋಷ ಪಡುವ ಮನೋಭಾವವನ್ನು ಕಳೆದುಕೊಂಡಿದ್ದೇವೆ ಎಂದರು.

Advertisement

ಕಾರ್ಯಕ್ರಮದಲ್ಲಿ ಸಾಹಿತಿ ಜಾಣಗೆರೆ ವೆಂಟಕರಾಮಯ್ಯ ಅವರಿಗೆ ವಿ.ನಾಗರಾಜರಾವ್‌ ಸಮೂಹ ಮಾಧ್ಯಮ ಪ್ರಶಸ್ತಿ, ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಗೆ ಪ್ರೊ.ಎಲ್‌.ಎಸ್‌.ಶೇಷಗಿರಿರಾವ್‌ ವಿಮಶಾ ಪ್ರಶಸ್ತಿ ಮತ್ತು ಸಾಹಿತಿ ಸುರೇಖಾ ಕುಲಕರ್ಣಿ ಅವರಿಗೆ ಸಾರಂಗಿ ವೆಂಕಟರಾಮಯ್ಯ ಪುಟ್ಟಚ್ಚಮ್ಮ ದತ್ತಿ ಪುಸ್ತಕ ಬಹುಮಾನ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next