Advertisement

ಬೆಳ್ತಂಗಡಿ ತಾಲೂಕು: ಇಂದು ಉಣ್ಣಿ ಮಾದರಿ ಸಂಗ್ರಹ

04:46 AM Jan 14, 2019 | |

ಬೆಳ್ತಂಗಡಿ: ತಾಲೂಕಿನ ಮೂರು ಕಡೆ ಕೋತಿಗಳ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ಅಸಾಧ್ಯವಾಗಿದ್ದು, ಜ. 14ರಂದು ಆರೋಗ್ಯ ಇಲಾಖೆಯ ವಿಶೇಷ ತಂಡದಿಂದ ಉಣ್ಣಿಗಳ ಮಾದರಿ ಸಂಗ್ರಹ ನಡೆಯಲಿದೆ.

Advertisement

ತಾಲೂಕಿನಲ್ಲಿ ಜ. 10ರಂದು ಕನ್ನಾಜೆಬೈಲು, ಜ. 11ರಂದು ಉಜಿರೆ ಪೇಟೆಯ ಪಕ್ಕ ಹಾಗೂ ಜ. 12ರಂದು ಉಜಿರೆ ಗ್ರಾಮದ ಅತ್ತಾಜೆ ಪಾರಾದಲ್ಲಿ ಹೀಗೆ 3 ಕೋತಿಗಳ ಮೃತದೇಹಗಳು ಪತ್ತೆಯಾಗಿವೆ. ಈ ನಡುವೆ ಜ. 12ರಂದು ಮುಂಡಾಜೆ ಸೀಟು ಅರಣ್ಯ ಪ್ರದೇಶದ ಹೆದ್ದಾರಿಯಲ್ಲಿ ಬಸ್ಸು ಢಿಕ್ಕಿ ಹೊಡೆದು ಕೋತಿ ಮೃತಪಟ್ಟಿತ್ತು. ಪ್ರಸ್ತುತ ಮಂಗನ ಕಾಯಿಲೆ ಭೀತಿ ಆವರಿಸಿರುವುದರಿಂದ ಉಣ್ಣಿ ಮಾದರಿ ಸಂಗ್ರಹಿಸಲಾಗುತ್ತಿದೆ. ಮಂಗಳೂರಿನಿಂದ ಉಪಕರಣ ತರಿಸಿಕೊಂಡಿರುವ ಇಲಾಖೆ, ಕೋತಿಗಳು ಓಡಾಡಿರುವ ಪ್ರದೇಶದಲ್ಲಿ  ಸಂಗ್ರಹ ನಡೆಸಲಿದೆ. ಜತೆಗೆ ಜ. 12ರಿಂದ ಉಜಿರೆ ವ್ಯಾಪ್ತಿಯಲ್ಲಿ ಸರ್ವೇ ಆರಂಭಗೊಂಡಿದ್ದು, ಟಿ.ಬಿ. ಕ್ರಾಸ್‌ನಿಂದ ಚಾರ್ಮಾಡಿ ರಸ್ತೆಯ ಅಶ್ವತ್ಥ
ಕಟ್ಟೆಯವರೆಗೆ ನಡೆಯಲಿದೆ. ಈ ತನಕ ಯಾವುದೇ ಜ್ವರದ ಪ್ರಕರಣಗಳು ಕಂಡುಬಂದಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

 ಇನ್ನೊಂದು ಮೃತದೇಹ ಪತ್ತೆ
ಕುಂದಾಪುರ: ಆರ್ಡಿ ಸಮೀಪ ರವಿವಾರ ಮಂಗವೊಂದರ ಮೃತ ದೇಹ ಪತ್ತೆಯಾಗಿದೆ. ಬೆಳ್ವೆ ಪ್ರಾ.ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ರಾಜೇಶ್ವರಿ ಹಾಗೂ ಪಶು ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿ ದೇಹದ ಅಂಶಗಳ ಸ್ಯಾಂಪಲನ್ನುಪರೀಕ್ಷೆಗಾಗಿ ಶಿವಮೊಗ್ಗಕ್ಕೆ ಕಳುಹಿಸಿ ದ್ದಾರೆ. ತಾಲೂಕಿನ ಬೇರೆ ಕಡೆ ಮಂಗಗಳ ಸಾವಿನ ಕುರಿತು ವರಿದಿಯಾಗಿಲ್ಲ ಎಂದು ತಾ| ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ ತಿಳಿಸಿದ್ದಾರೆ.

ಏನಿದು ಉಣ್ಣಿ  ಮಾದರಿ?
ಕೋತಿ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ಅಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದು, ಕೋತಿಗಳ ಮೃತದೇಹ ಪತ್ತೆಯಾದ ಪ್ರದೇಶದಲ್ಲಿ ಉಣ್ಣಿಗಳು ಕಂಡುಬಂದರೆ ಸಂಗ್ರಹಿಸಿ ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಿ, ಪರೀಕ್ಷೆ ನಡೆಸಲಾಗುತ್ತದೆ. 

ಸೂಕ್ತ ಕ್ರಮಕ್ಕೆ  ಸೂಚನೆ
ತಾಲೂಕಿನಲ್ಲಿ ಕೋತಿಗಳ ಮೃತದೇಹ ಪತ್ತೆಯಾಗುತ್ತಿದ್ದು, ಆರೋಗ್ಯ ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ. ಇಲಾಖೆಯು  ಸತ್ಯಾಸತ್ಯತೆಗಳನ್ನು ತಿಳಿಸಿ, ಜನರಲ್ಲಿ ಧೈರ್ಯ ತುಂಬಬೇಕಿದೆ.
ಹರೀಶ್‌ ಪೂಂಜ, ಶಾಸಕರು, ಬೆಳ್ತಂಗಡಿ 

Advertisement
Advertisement

Udayavani is now on Telegram. Click here to join our channel and stay updated with the latest news.

Next