Advertisement
ವಿಂಬಲ್ಡನ್ ಫೈನಲಿಸ್ಟ್ ಆಗಿರುವ ನಿಕ್ ಕಿರ್ಗಿಯೋಸ್, ಕಳೆದ ರಾತ್ರಿ ನಡೆದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಡ್ಯಾನಿಲ್ ಮೆಡ್ವೆಡೇವ್ ಅವರನ್ನು 7-6 (13-11), 3-6, 6-3, 6-2 ಅಂತರದಿಂದ ಮಣಿಸಿದರು. ಇದು ಮೆಡ್ವೆಡೇವ್ ವಿರುದ್ಧ ಆಡಿದ 5 ಪಂದ್ಯಗಳಲ್ಲಿ ಆಸೀಸ್ ಆಟಗಾರನಿಗೆ ಒಲಿದ ಎರಡನೇ ಗೆಲುವು. ಈ ಸೋಲಿನಿಂದ ಮೆಡ್ವೆಡೇವ್ ಅವರ ನಂ.1 ಪಟ್ಟ ಬಹುತೇಕ ಜಾರಲಿದೆ.
ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಕ್ಯಾಸ್ಪರ್ ರೂಡ್ ಮತ್ತು ಮ್ಯಾಟಿಯೊ ಬರೆಟಿನಿ ಮುಖಾಮುಖೀ ಆಗಲಿದ್ದಾರೆ. ನಾರ್ವೆಯ ಕ್ಯಾಸ್ಪರ್ ರೂಡ್ ಫ್ರಾನ್ಸ್‌ನ ಕೊರೆಂಟಿನ್ ಮೌಟೆಟ್ ವಿರುದ್ಧ 6-1, 6-2, 6-7 (4-7), 6-2 ಅಂತರದ ಗೆಲುವು ಸಾಧಿಸಿದರು. ರೂಡ್ ಅವರಿಗೆ ಇದು ಮೊದಲ ಯುಎಸ್ ಓಪನ್ ಕ್ವಾರ್ಟರ್ ಫೈನಲ್. ಇನ್ಮೊಂದೆಡೆ ಮೌಟೆಟ್ “ಲಕ್ಕಿ ಲಾಸರ್’ ಆಗಿ ಪ್ರಧಾನ ಸುತ್ತಿಗೆ ಏರಿದ್ದರು.
Related Articles
ನಿಕ್ ಕಿರ್ಗಿಯೋಸ್ ಪುರುಷರ ವಿಭಾಗದಲ್ಲಿ ಆಸ್ಟ್ರೇಲಿಯದ ಸಂಭ್ರಮ ಹೆಚ್ಚಿಸಿದರೆ, ಅಜ್ಲಾ ಟೊಮ್ಜಾನೋವಿಕ್ ವನಿತಾ ವಿಭಾಗದಲ್ಲಿ ಕಾಂಗರೂ ಟೆನಿಸ್ ಅಭಿಮಾನಿಗಳ ಖುಷಿಯನ್ನು ಇಮ್ಮಡಿಗೊಳಿಸಿದರು. ಸರೆನಾ ವಿಲಿಯಮ್ಸನ್ ಅವರನ್ನು ಸೋಲಿಸಿ ಸುದ್ದಿಯಾಗಿದ್ದ ಅಜ್ಲಾ ಟೊಮ್ಜಾನೋವಿಕ್, ಈ ಗೆಲುವು ಆಕಸ್ಮಿಕವಲ್ಲ ಎಂಬುದನ್ನು ನಿರೂಪಿಸಿದರು. ರಷ್ಯದ ಲಿಯುದ್ಮಿಲಾ ಸಮೊÕನೋವಾ ಅವರನ್ನು 7-6 (10-8), 6-1ರಿಂದ ಹಿಮ್ಮೆಟ್ಟಿಸಿ ಮೊದಲ ಸಲ ಯುಎಸ್ ಓಪನ್ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
Advertisement
ಇದರೊಂದಿಗೆ ಸಮೊÕನೋವಾ ಅವರ ಸತತ 13 ಗೆಲುವಿನ ಓಟ ಕೊನೆಗೊಂಡಿತು. ಯುಎಸ್ ಓಪನ್‌ಗೂ ಮುನ್ನ ನಡೆದ ಕ್ಲೇವ್‌ಲ್ಯಾಂಡ್ ಮತ್ತು ವಾಷಿಂಗ್ಟನ್ ಡಿಸಿ ಟೂರ್ನಿಗಳಲ್ಲಿ ಅವರು ಪ್ರಶಸ್ತಿ ಎತ್ತಿದ್ದರು.
ಅಜ್ಲಾ ಟೊಮ್ಜಾನೋವಿಕ್ ಅವರಿನ್ನು ಟ್ಯುನಿಶಿಯಾದ ಓನ್ಸ್ ಜೆಬ್ಯೂರ್ ವಿರುದ್ಧ ಆಡುವರು. ಅವರು ರಷ್ಯದ ವೆರೋನಿಕಾ ಕುಡೆರ್ಮಟೋವಾಗೆ 7-6 (7-1), 6-4ರಿಂದ ಆಘಾತವಿಕ್ಕಿದರು.
ಕೊಕೊ ಗಾಫ್ ಭರವಸೆ18 ವರ್ಷದ ಯುವ ಆಟಗಾರ್ತಿ ಕೊಕೊ ಗಾಫ್ ಆತಿಥೇಯ ನಾಡಿನ ಭರವಸೆಯಾಗಿ ಉಳಿದಿದ್ದಾರೆ. ಅವರು ಭಾರೀ ಹೋರಾಟದ ಬಳಿಕ ಚೀನದ 33 ವರ್ಷದ ಅನುಭವಿ ಜಾಂಗ್ ಶುಯಿ ವಿರುದ್ಧ 7-5, 7-5 ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ಫ್ರಾನ್ಸ್‌ನ ಕ್ಯಾರೋಲಿನ್ ಗಾರ್ಸಿಯಾ ವಿರುದ್ಧ ಕೊಕೊ ಗಾಫ್ ಕ್ವಾರ್ಟರ್ ಫೈನಲ್‌ನಲ್ಲಿ ಕಾದಾಡಬೇಕಿದೆ. ಗಾರ್ಸಿಯಾ ಅಮೆರಿಕದ ಅಲಿಸನ್ ರಿಸ್ಕೆ ಅವರನ್ನು 6-4, 6-1 ನೇರ ಸೆಟ್‌ಗಳಲ್ಲಿ ಕೆಡವಿದರು.