Advertisement

ನಕಲಿ ಬ್ಯಾಂಕ್‌ ಅಧಿಕಾರಿಗಳ “KYC ಅಪ್‌ಡೇಟ್‌” ಖೆಡ್ಡಾ !

12:29 AM Jun 07, 2023 | Team Udayavani |

ಮಂಗಳೂರು: “ನಾನು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದಿಂದ ಕರೆ ಮಾಡುತ್ತಿದ್ದು ನಿಮ್ಮ ಬ್ಯಾಂಕ್‌ ಖಾತೆಯ ಕೆವೈಸಿ (ದಾಖಲೆಗಳ ದೃಢೀಕರಣ) ಆಗಿಲ್ಲ. ಕೂಡಲೇ ಬ್ಯಾಂಕ್‌ ಮಾಹಿತಿ, ನಾವು ಕಳುಹಿಸುವ ಒಟಿಪಿ ವಿವರ ನೀಡಿ. ಇಲ್ಲದಿದ್ದರೆ ಖಾತೆ ಬ್ಲಾಕ್‌ ಆಗುತ್ತದೆ’. “ಕೆನರಾ ಬ್ಯಾಂಕ್‌ನಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ಎಟಿಎಂ ಕಾರ್ಡಿನ ಅವಧಿ ಮುಗಿದಿದ್ದು ಅದನ್ನು ನವೀಕರಿಸಲು ಅದರ ನಂಬರ್‌, ಬ್ಯಾಂಕ್‌ ಖಾತೆಯ ಮಾಹಿತಿಗಳನ್ನು ನೀಡಿ’. “ಬ್ಯಾಂಕ್‌ ಆಫ್ ಬರೋಡಾದ ಅಧಿಕಾರಿ ಮಾತನಾಡುತ್ತಿದ್ದು ನಿಮ್ಮ ಹೊಸ ಕ್ರೆಡಿಟ್‌ ಕಾರ್ಡ್‌ ಆ್ಯಕ್ಟಿವೇಷನ್‌ಗಾಗಿ ಅದರ ನಂಬರ್‌, ಮೊಬೈಲ್‌ಗೆ ಬರುವ ಒಟಿಪಿ ತಿಳಿಸಿ’.

Advertisement

ಹೀಗೆ ನಾನಾ ರೀತಿಯಲ್ಲಿ ಬ್ಯಾಂಕ್‌ನವರೆಂದು ಕರೆ ಮಾಡಿ ವಂಚಿಸುವ ಘಟನೆಗಳು ವ್ಯಾಪಕವಾಗಿ ನಡೆಯುತ್ತಿದ್ದು ಹಿರಿಯ ನಾಗರಿಕರು, ಮಹಿಳೆಯರು ಸೇರಿದಂತೆ ದಿನನಿತ್ಯ ಹತ್ತಾರು ಮಂದಿ ಖಾತೆಯಿಂದ ಹಣ ಕಳೆದುಕೊಳ್ಳುತ್ತಿದ್ದಾರೆ. ವಿದ್ಯಾವಂತರು ಕೂಡ ವಂಚಕರ ಖೆಡ್ಡಾಕ್ಕೆ ಬೀಳುತ್ತಿದ್ದಾರೆ. ಈ ಕೃತ್ಯಗಳು ದಿನಕ್ಕೊಂದು ರೂಪದಲ್ಲಿ ನಡೆಯುತ್ತಿದ್ದು ಇದನ್ನು ಭೇದಿಸುವುದು ಸೈಬರ್‌ ಪೊಲೀಸರಿಗೆ ಸವಾಲಾಗುತ್ತಿದೆ.

ಪತ್ನಿಯ ಮೂಲಕ ಪತಿಗೆ ವಂಚನೆ

ಇತ್ತೀಚೆಗೆ ನಡೆದಿರುವ ಒಂದು ಪ್ರಕರಣದಲ್ಲಿ 73 ವರ್ಷದಹಿರಿಯ ನಾಗರಿಕರೋರ್ವರಿಗೆ ಎಟಿಎಂ ಕಾರ್ಡ್‌ ನವೀಕರಣದ ನೆಪದಲ್ಲಿ 1 ಲ.ರೂ. ವಂಚಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಮಹಿಳೆ ಯೋರ್ವರಿಂದ ಆಕೆಯ ಪತಿಯ ಡೆಬಿಟ್‌ ಕಾರ್ಡ್‌, ಬ್ಯಾಂಕ್‌ ಖಾತೆಯ ಮಾಹಿತಿ ಪಡೆದು ಎರಡು ಖಾತೆಗಳಿಂದ ಒಟ್ಟು 1.21 ಲ.ರೂ. ಲಪಟಾಯಿಸಲಾಗಿದೆ.

ವಿದ್ಯಾವಂತರಿಗೆ “ಲಿಂಕ್‌’ !

Advertisement

ಕೆಲವರಿಗೆ ಕರೆ ಮಾಡಿ ಮಾಹಿತಿ ಪಡೆಯುವ ವಂಚಕರು, ಸ್ವಲ್ಪ ಹೆಚ್ಚು ಶಿಕ್ಷಣ ಪಡೆದವರಿಗೆ ಲಿಂಕ್‌ ಕಳುಹಿಸಿ ವಂಚಿಸುತ್ತಾರೆ. ಪಾನ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌ ಮರುನೋಂದಣಿ,

ಹೊಸ ಕ್ರೆಡಿಟ್‌
ಕಾರ್ಡ್‌ ಆ್ಯಕ್ಟಿವೇಷನ್‌, ಪಾನ್‌ಕಾರ್ಡ್‌ ಅಪ್‌ಡೇಟ್‌ ಮಾಡುವ ನೆಪದಲ್ಲಿ ವಾಟ್ಸ್‌ಆ್ಯಪ್‌, ಇ-ಮೇಲ್‌, ಟೆಕ್ಸ್ಟ್ ಮೆಸೇಜ್‌ ಮೂಲಕ ಕಳುಹಿಸುತ್ತಾರೆ. ಲಿಂಕ್‌ ಕ್ಲಿಕ್‌ ಮಾಡಿದಾಗ ತೆರೆದುಕೊಳ್ಳುವ ಪೇಜ್‌ನಲ್ಲಿ ವಿವರಗಳನ್ನು ನಮೂದಿಸಲು ಸೂಚಿಸುತ್ತಾರೆ. ಅದೇ ಪೇಜ್‌ನಲ್ಲಿ ಒಟಿಪಿಯನ್ನು ಕೂಡ ನಮೂದಿಸುವಂತೆ ಹೇಳುತ್ತಾರೆ. ಅನಂತರ ಹಣ ವರ್ಗಾಯಿಸಿಕೊಂಡು ವಂಚಿಸುತ್ತಾರೆ.

ವಂಚನೆಯ ಮೇಲೆ ವಂಚನೆ !
ಓರ್ವರಿಗೆ ಇತ್ತೀಚೆಗೆ ಐಸಿಐಸಿಐ ಬ್ಯಾಂಕ್‌ನ ಅಧಿಕಾರಿ ಪ್ರಿಯದರ್ಶಿನಿ ಎಂದು ಪರಿಚಯಿಸಿಕೊಂಡ ಮಹಿಳೆ ಕರೆ ಮಾಡಿ ತನ್ನ ಎಂಪ್ಲಾಯಿ ಐಡಿಯನ್ನು ಕೂಡ ಹೇಳಿದ್ದಳು. “ನಿಮಗೆ ಕ್ರೆಡಿಟ್‌ ಕಾರ್ಡ್‌ಗೆ ಸಂಬಂಧಿಸಿ ಸಮಸ್ಯೆ ಇದೆಯೇ?’ ಎಂದು ಪ್ರಶ್ನಿಸಿದಳು. ಕರೆ ಸ್ವೀಕರಿಸಿದವರು “ಯಾವುದೇ ಸಮಸ್ಯೆ ಇಲ್ಲ’ ಎಂದಾಗ “ಪರ್ಸನಲ್‌ ಲೋನ್‌ ಬೇಕಾ’ ಎಂದು ಕೇಳಿದ್ದಳು. ಅದಕ್ಕೆ ಬೇಡ ಎಂದಾಗ “ಲೋನ್‌ ಬೇಡ ಎಂಬುದನ್ನು ಕನ್‌ಫ‌ರ್ಮ್ ಮಾಡಲು ಡೆಬಿಟ್‌ ಕಾರ್ಡ್‌ ನಂಬರ್‌ ನೀಡಿ’ ಎಂದಿದ್ದಳು. ಅದನ್ನು ನಂಬಿ ನಂಬರ್‌ ನೀಡಿದ್ದ ವ್ಯಕ್ತಿಯ ಖಾತೆಯಿಂದ 4,61,681 ರೂ. ವರ್ಗಾಯಿಸಿಕೊಂಡಿದ್ದಳು. ಇದನ್ನು ಪ್ರಶ್ನಿಸಿದಾಗ ಅದು ತಪ್ಪಿ ಕ್ರೆಡಿಟ್‌ ಆಗಿದ್ದು ಅದನ್ನು ರಿವರ್ಟ್‌ ಮಾಡುತ್ತೇವೆ. ಮೊಬೈಲ್‌ಗೆ ಬರುವ ಒಟಿಪಿ ನೀಡಿ ಎಂದಿದ್ದಳು. ಆ ಒಟಿಪಿ ಪಡೆದು ಮತ್ತಷ್ಟು ಹಣ ಸೇರಿದಂತೆ ಒಟ್ಟು 7.93 ಲ.ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿದ್ದಳು.
2 ತಿಂಗಳಲ್ಲಿ 23 ಲ.ರೂ.ಗಳಿಗೂ ಅಧಿಕ ವಂಚನೆ

ಬ್ಯಾಂಕ್‌ನವರೆಂದು ಹೇಳಿ ವಂಚಿಸಿರುವ ಬಗ್ಗೆ ಕಳೆದ ಎರಡು ತಿಂಗಳಲ್ಲಿ ಮಂಗಳೂರಿನ ಸೆನ್‌ ಪೊಲೀಸ್‌ ಠಾಣೆಯಲ್ಲಿ 15ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 23 ಲ.ರೂ.ಗಳಿಗೂ ಅಧಿಕ ಮೊತ್ತ ವಂಚನೆಯಾಗಿದೆ.

ಯಾರದ್ದೋ ಖಾತೆ ಯಾರಿಗೋ ದುಡ್ಡು
ನಾನಾ ರೀತಿಯಲ್ಲಿ ಸಾರ್ವಜನಿಕರನ್ನು ವಂಚಿಸಿ ವರ್ಗಾಯಿಸಿ ಕೊಳ್ಳುವ ಹಣ ವಂಚಕರ ನಿಜವಾದ ಖಾತೆಗೆ ಸೇರುವುದಿಲ್ಲ. ಹಣ ವರ್ಗಾವಣೆಗೊಂಡ ಖಾತೆಯನ್ನು ಪರಿಶೀಲಿಸಿ ವಿಳಾಸ ಬೆನ್ನತ್ತಿ ಹೋಗುವ ಪೊಲೀಸರಿಗೆ ಖಾತೆದಾರರು ಪತ್ತೆಯಾಗುವುದಿಲ್ಲ. ಯಾರಧ್ದೋ ಬಡ ಕಾರ್ಮಿಕರ ಹೆಸರಿನಲ್ಲಿ ಖಾತೆ ತೆರೆದು ಅದಕ್ಕೆ ಹಣ ವರ್ಗಾಯಿಸಿಕೊಂಡಿರುವುದು ಕಂಡುಬಂದಿದೆ. ಸರಕಾರದ ಸವಲತ್ತು ನೀಡುತ್ತೇವೆ ಎಂಬಿತ್ಯಾದಿ ಸುಳ್ಳು ಹೇಳಿ ಸ್ವಲ್ಪ ಹಣ ಕೊಟ್ಟು ಬ್ಯಾಂಕ್‌ ಖಾತೆ ತೆರೆಯಿಸಿ ಆ ಖಾತೆಯ ದಾಖಲೆ, ಎಟಿಎಂ ಕಾರ್ಡ್‌ ಮೊದಲಾದವುಗಳನ್ನು ತಾವೇ ಪಡೆದು ವಂಚಿಸುವ ಜಾಲವೂ ಇದೆ ಎನ್ನುತ್ತಾರೆ ಸೈಬರ್‌ ಪೊಲೀಸರು.

ಯಾವುದೇ ಬ್ಯಾಂಕ್‌ನವರು ಏಕಾಏಕಿ ಬ್ಯಾಂಕ್‌ ಖಾತೆ, ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ಗಳನ್ನು ಬ್ಲಾಕ್‌ ಮಾಡುವುದಿಲ್ಲ. ಹಾಗಾಗಿ ಯಾರಾದರೂ ಬ್ಯಾಂಕ್‌ನವರೆಂದು ಹೇಳಿಕೊಂಡು ಕರೆ ಮಾಡಿದರೆ ಅವರು ಹೇಳಿದಂತೆ ಕೂಡಲೇ ಕೆವೈಸಿ ಅಪ್‌ಡೇಟ್‌ಗೆ ಮಾಹಿತಿ ನೀಡಬೇಡಿ. ಒಟಿಪಿಯನ್ನು ಯಾವ ಬ್ಯಾಂಕ್‌ನವರೂ ಫೋನ್‌ ಮಾಡಿ ಕೇಳುವುದಿಲ್ಲ. ವಂಚಕರು ಉದ್ದೇಶಪೂರ್ವಕವಾಗಿಯೇ ಆತಂಕದ ಸನ್ನಿವೇಶ ಸೃಷ್ಟಿಸುತ್ತಾರೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಪರಿಶೀಲಿಸಿ ದೃಢಪಡಿಸಿಕೊಂಡ ಅನಂತರವೇ ಮಾಹಿತಿ ನೀಡಬೇಕು. ಬ್ಯಾಂಕ್‌ಗೆ ಕರೆ ಮಾಡಿ ವಿಚಾರಿಸಲೂಬಹುದು. ಇವೆಲ್ಲವುಗಳಿಗಿಂತಲೂ ಬಿಡುವು ಮಾಡಿ ಕೊಂಡು ಖುದ್ದಾಗಿ ಬ್ಯಾಂಕ್‌ಗೆ ತೆರಳಿ ಪರಿಶೀಲಿ ಸುವುದು ಸುರಕ್ಷಿತ. ನಕಲಿ ಕಸ್ಟಮರ್‌ ಕೇರ್‌ ಸಂಖ್ಯೆಗಳ ಬಗ್ಗೆ ಎಚ್ಚರವಿರಬೇಕು.
– ಡಾ| ಅನಂತ ಪ್ರಭು ಜಿ.,  ಸೈಬರ್‌ ಭದ್ರತಾ ತಜ್ಞರು, ಮಂಗಳೂರು

ಬ್ಯಾಂಕ್‌ನವರೆಂದು ಹೇಳಿ ಕರೆ ಮಾಡಿ ವಂಚಿಸಿರುವ ಬಗ್ಗೆ ಹಲವರು ದೂರು ನೀಡಿದ್ದಾರೆ. ಕೆಲವು ಪ್ರಕರಣಗಳಲ್ಲಿ ಹಣ ವಾಪಸ್‌ ಕೊಡಿಸಲಾಗಿದೆ. ಯಾವುದೇ ಕಾರಣಕ್ಕೂ ಸಾರ್ವಜನಿಕರು ಇತರರೊಂದಿಗೆ ಬ್ಯಾಂಕ್‌ ಖಾತೆ ವಿವರ, ಒಟಿಪಿ ಮೊದಲಾದ ಮಾಹಿತಿಯನ್ನು ಹಂಚಿಕೊಳ್ಳಬಾರದು. ವಂಚನೆಗೊಳಗಾದರೆ ತತ್‌ಕ್ಷಣ 1930 ಹೆಲ್ಪ್ಲೈನ್‌ಗೆ ಕರೆ ಮಾಡಿ ಅನಂತರ ಪೊಲೀಸರಿಗೆ ದೂರು ನೀಡಬೇಕು.
– ಕುಲದೀಪ್‌ ಕುಮಾರ್‌ ಆರ್‌. ಜೈನ್‌, ಪೊಲೀಸ್‌ ಆಯುಕ್ತರು, ಮಂಗಳೂರು

 ಸಂತೋಷ್‌ ಬೊಳ್ಳೆಟ್ಟು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next