Advertisement

 ಕ್ಯಾತ್ಸಂದ್ರ ವೇಣುಗೋಪಾಲ ಕೃಷ್ಣ ದೇವಸ್ಥಾನ

03:20 AM Feb 03, 2018 | |

ತುಮಕೂರು ಜಿಲ್ಲೆಯಲ್ಲಿ ಕ್ಯಾತ್ಸಂದ್ರ ಒಂದು ಪಾವನ ಪುಣ್ಯ ಕ್ಷೇತ್ರ. ಇಲ್ಲಿ ವೇಣುಗೋಪಾಲಸ್ವಾಮಿ ನೆಲೆಸಿದ್ದಾನೆ. ಈ ದೇವಾಲಯ ಅತ್ಯಂತ ಸುಂದರವಾಗಿದೆ. ಏಕ ಶಿಲಾ ಗೋಪಾಲ ಕೃಷ್ಣ ವಿಗ್ರಹವು ಸುಮಾರು 6 ಅಡಿ ಎತ್ತರದ್ದು ಚೋಳರ ಕಾಲದ್ದಾಗಿದ್ದು, 800 ವರ್ಷಗಳ ಇತಿಹಾಸವನ್ನು ಹೊಂದಿದ ಈ ದೇವಸ್ಥಾನದ ವಿಶೇಷವೆಂಬಂತೆ ಈ ವಿಗ್ರಹದಲ್ಲಿ ಕೃಷ್ಣನನ್ನು ಒಳಗೊಂಡು ರುಕ್ಮಿಣಿ, ಸತ್ಯಭಾಮ, ವಿಶೇಷ, ಹಸು ಕರುವನ್ನು ಕಾಣಬಹುದು.

Advertisement

ಇನ್ನು ಸ್ಥಳಪುರಾಣದಂತೆ ಸುಮಾರು 800 ವರ್ಷಗಳ  ಹಿಂದೆ ಕ್ಯಾತ್ಸಂದ್ರ ಗ್ರಾಮದ ಒಬ್ಬ ಹರಿ ಭಕ್ತರ ಸ್ವಪ್ನದಲ್ಲಿ ಬಂದ ವೇಣುಗೋಪಾಲಸ್ವಾಮಿ, ನಾನು ಒಂದು ಹುತ್ತದಲ್ಲಿ ಇಲ್ಲೇ  ಇದ್ದೇನೆ. ನನ್ನನ್ನು ತಂದು ಪ್ರತಿಷ್ಠಾಪಿಸಿ ಎಂಬ ಅಶರೀರವಾಣಿ ಕೇಳಿಸುತ್ತದೆ. ಹುತ್ತದ ಚಿತ್ರಣವು ಅವರಿಗೆ ಗೋಚರವಾಗುತ್ತದೆ. ಊರಿನ ಕೆಲವು ಹಿರಿಯರು  ಹುತ್ತಕ್ಕಾಗಿ ಹುಡುಕಾಟ ನಡೆಸಿ, ಕೊನೆಗೆ ಕ್ಯಾತ್ಸಂದ್ರದಿಂದ 2 3 ಕಿಮೀ ಅಂತರದಲ್ಲಿರುವ ಬಡ್ಡಿ ಹಳ್ಳಿ ಎಂಬ ಗ್ರಾಮದಲ್ಲಿ  ಒಂದು ದೊಡ್ಡ ಹುತ್ತವನ್ನು ಕಂಡು ಅದನ್ನು ಪರಿಶೀಲಿಸಲೇಬೇಕೆಂದು ಸಂಕಲ್ಪಿಸಿ ಸುಮಾರು 8 ಅಡಿ ಹುತ್ತಕ್ಕೆ ಪೂಜಾ ಕೈಂಕರ್ಯಗಳನ್ನು ಮುಗಿಸಿ ಶ್ರೀಹರಿಯನ್ನು ನೆನೆಯುತ್ತಾ ಹುತ್ತವನ್ನು ಅಗೆಯಲು ಆರಂಭಿಸುತ್ತಾರೆ. ಅಚ್ಚರಿ ಎಂಬಂತೆ ಒಂದು ಸುಂದರ ಗೋಪಾಲ ಕೃಷ್ಣ ಮೂರ್ತಿಯನ್ನು ಕಂಡು ಎಲ್ಲರೂ ಕೃತಾರ್ಥರಾಗುತ್ತಾರೆ. ಈ ವೇಳೆಗಾಗಲೇ ಕೃಷ್ಣನನ್ನು ಒಯ್ಯಲು ತಯಾರಿ ಮಾಡಿಕೊಳ್ಳುತ್ತಾರೆ. ಎಷ್ಟೇ ಪ್ರಯತ್ನಿಸಿದರೂ ಪ್ರತಿಮೆಯ ಪೀಠವು ಅಲುಗಾಡುವುದಿಲ್ಲ ಅದು ನೆಲದಲ್ಲಿ ಗಟ್ಟಿಯಾಗಿ ಉಳಿದುಕೊಂಡುಬಿಡುತ್ತದೆ. ಹಾಗಾಗಿ ಕೃಷ್ಣನನ್ನು ಮಾತ್ರ ತಂದು ಕ್ಯಾತ್ಸಂದ್ರದಲ್ಲಿ ಪ್ರತಿಷ್ಟಾಪಿಸುತ್ತಾರೆ.  ಈ ವಿಷಯವು ಬಡ್ಡಿಹಳ್ಳಿ ಗ್ರಾಮಸ್ಥರಿಗೂ ತಲುಪುತ್ತದೆ. ಎಲ್ಲರೂ ಒಟ್ಟುಗೂಡಿ ಕೃಷ್ಣನನ್ನು ಪುನಃ ಸ್ವಸ್ಥಾನಕ್ಕೆ ತರಲು ಹೊರಡುತ್ತಾರೆ.  ಮಾರ್ಗ ಮಧ್ಯದಲ್ಲಿ ಶೇಷ ಅಡ್ಡ ಬಂದ ಕಾರಣ ಎಲ್ಲರೂ ವಾಪಸಾಗುತ್ತಾರೆ. ಈ ಇದೇ ರೀತಿಯಾಗಿ 3 4 ಬಾರಿ ಆಗಿದ್ದು, ಗ್ರಾಮಸ್ಥರು ಕೃಷ್ಣನನ್ನು ಪುನಃ ಸ್ವಸ್ಥಾನಕ್ಕೆ ತರುವುದು ಬೇಡವೆಂದು ನಿರ್ಧರಿಸುತ್ತಾರೆ. ನಂತರ ಕ್ಯಾತ್ಸಂದ್ರಕ್ಕೆ ಭಕ್ತಿಯಿಂದ ಕೃಷ್ಣನ ದರುಶನಕ್ಕೆ ಹೋಗುತ್ತಾರೆ. ಇಂದಿಗೂ ಮೂಲ ವಿಗ್ರಹದ ಪೀಠವು ಬಡ್ಡಿಹಳ್ಳಿ ಗ್ರಾಮದಲ್ಲೇ  ಇದ್ದು, ಗ್ರಾಮದ ಜನತೆ ಅಲ್ಲೇ  ಆ ಪೀಠಕ್ಕೆ ಪೂಜೆಯನ್ನು ಸಲ್ಲಿಸುತ್ತಿದ್ದಾರೆ. 

ಶ್ರೀವೇಣುಗೋಪಾಲ ಸ್ವಾಮಿ ಪ್ರತಿಷ್ಠಾಪನೆ ಆದ ಹಲವು ವರ್ಷಗಳ ನಂತರ ಪ್ರಾಕಾರದ ಒಂದು ಕಂಬದಲ್ಲಿ ಚಿಟಿಕೆ ರೂಪದ ಸದ್ದು ಕೇಳಲಾರಂಭಿಸಿತಂತೆ. ನಂತರ ಆ ಕಂಬದಲ್ಲಿ ನರಸಿಂಹ ದೇವರ ವಿಗ್ರಹವಿರುವುದು  ಅರ್ಚಕರಿಗೆ ಸ್ವಪ್ನದಲ್ಲಿ ಕಾಣಿಸಿಕೊಳ್ಳುತ್ತದೆ. ಅಂದಿನಿಂದ ಕೃಷ್ಣನ ಜತೆಗೆ ಈ ಕಂಬಕ್ಕೂ ಪೂಜೆ ನಡೆಯುತ್ತಾ ಬಂದಿದೆ.  ಈ ರೀತಿಯಾಗಿ ಹಲವು ವಿಸ್ಮಯ ಸಂಗತಿಗಳನ್ನು ಒಳಗೊಂಡಿರುವಂತಹ ದೇವಾಲಯವು ಇದಾಗಿದೆ.  ಇನ್ನು ಕಂಚಿಯಲ್ಲಿ ಇರುವಂತಹ ಲೋಹದ ಹಲ್ಲಿಯಂತೆ ಇಲ್ಲೂ ಕೂಡ ಗೋಡೆಯ ಮೇಲೆ ಒಂದು ಹಲ್ಲಿಯನ್ನು ಕಾಣಬಹುದು. 
ಗರ್ಭಗುಡಿಯ ಹಿಂಬದಿಯಲ್ಲಿ ಸೂರ್ಯ ಚಂದ್ರರ ಕೆತ್ತನೆ ಇದೆ.

ತಲುಪುವ ಮಾರ್ಗ 
ಬೆಂಗಳೂರಿಂದ ತುಮಕೂರಿಗೆ ಸಾಕಷ್ಟು ಬಸ್‌ ಸೌಕರ್ಯವಿದ್ದು ಅಲ್ಲಿಂದ ಕ್ಯಾತ್ಸಂದ್ರಕ್ಕೆ ಬಸ್ಸು ಅಥವಾ ರೈಲಿನಲ್ಲಿ ಸುಮಾರು 1ಗಂಟೆ ಪ್ರಯಾಣ ಬೆಳೆಸಿ ದೇವಾಲಯವನ್ನು ತಲುಪಬಹುದು. 

ಆಶಾ ಎಸ್‌. ಕುಲಕರ್ಣಿ

Advertisement
Advertisement

Udayavani is now on Telegram. Click here to join our channel and stay updated with the latest news.

Next