ಧಾರವಾಡ : ಸತತ ಐದು ವರ್ಷದ ಬರಗಾಲದ ಮಧ್ಯೆಯೂ 9 ಜಿಲ್ಲೆಗಳಲ್ಲಿ 636 ಶಾಖೆ ಹೊಂದಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ 2018-19ನೇ ಸಾಲಿನಲ್ಲಿ ಶೇ.7.79 ಪ್ರಗತಿ ದರದಲ್ಲಿ 25,257 ಕೋಟಿ ರೂ. ವಹಿವಾಟು ದಾಖಲಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಎಸ್.ರವೀಂದ್ರನ್ ಹೇಳಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 2017-18 ಸಾಲಿನಲ್ಲಿ ಒಟ್ಟು 23,432 ಕೋಟಿ ರೂ.ಗಳ ಮೇಲೆ 1825 ನಿವ್ವಳ ಹೆಚ್ಚಳ ಸಾಧಿಸಿತ್ತು. ಈ ವರ್ಷ ಬ್ಯಾಂಕಿನ ಕಾರ್ಯ ನಿರ್ವಹಣಾ ಲಾಭ 203.26 ಕೋಟಿ ರೂ.ಗಳಾಗಿದ್ದು, ಈ ಪೈಕಿ ಉಪಬಂಧ ಹಾಗೂ ಆದಾಯ ತೆರಿಗೆಯನ್ನೂ ಪಾವತಿಸಿ ಬ್ಯಾಂಕ್ 50.12 ಕೋಟಿ ರೂ. ನಿಕ್ಕಿ ಲಾಭ ಗಳಿಸಿದೆ. ಈ ಮೂಲಕ ಬ್ಯಾಂಕಿನ ನಿವ್ವಳ ಸಂಪತ್ತು 1693 ಕೋಟಿ ರೂ.ಗಳಿಂದ 1743 ಕೋಟಿ ರೂ.ಗಳಿಗೆ ವೃದ್ಧಿಸಿದೆ ಎಂದರು.
ಠೇವಣಿ ಸಂಗ್ರಹಣೆಯಲ್ಲಿ ಶೇ.7.34 ಪ್ರಗತಿ ದರದಲ್ಲಿ 13,895 ಕೋಟಿ ರೂ.ಮಟ್ಟವನ್ನು ತಲುಪುವುದರ ಜತೆಗೆ ಗ್ರಾಹಕರ ಸಂಖ್ಯೆಯನ್ನೂ ಹೆಚ್ಚಿಸಿಕೊಂಡಿದೆ. ಅದು ಈಗ 79 ಲಕ್ಷ ಮೀರಿದೆ. ಬ್ಯಾಂಕ್ ಸಾಲ ಹಾಗೂ ಮುಂಗಡಗಳು ಶೇ.8.34 ಪ್ರಗತಿ ದರದಲ್ಲಿ 11,362 ಕೋಟಿ ರೂ.ಮಟ್ಟ ತಲುಪಿದೆ. ಕಳೆದ ಐದು ವರ್ಷದಿಂದ ಸತತ ಬರ ಬ್ಯಾಂಕಿನ ಸಾಲ ವಸೂಲಾತಿಯ ಮೇಲೆ ಪರಿಣಾಮ ಬೀರಿದ್ದರೂ ಅನುತ್ಪಾದಕ ಸಾಲದ ಮೇಲೆ ಬ್ಯಾಂಕ್ ಉತ್ತಮ ನಿಯಂತ್ರಣ ಸಾಧಿಸಿದೆ ಎಂದರು.
ಕಳೆದ ಸಾಲಿನಲ್ಲಿ ಬ್ಯಾಂಕ್ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 1,18,867 ರೈತರಿಗೆ 2021 ಕೋಟಿ ರೂ. ಸಾಲ ವಿತರಿಸಿದ್ದು, ಪ್ರಧಾನ ಮಂತ್ರಿ ಮುದ್ರಾ ಯೋಜನೆಯಲ್ಲಿ ಬ್ಯಾಂಕ್ 65,000 ಉದ್ಯೋಗಾಕಾಂಕ್ಷಿಗಳಿಗೆ 951 ಕೋಟಿ ರೂ. ಸಾಲ ವಿತರಿಸಿದೆ. ಪ್ರಧಾನ ಮಂತ್ರಿ ಆವಾಸ ಯೋಜನೆಯಡಿಯಲ್ಲಿ 709 ಫಲಾನುಭವಿಗಳಿಗೆ 64.18 ಕೋಟಿ ರೂ. ಸಾಲ ವಿತರಿಸಿದೆ. ಇನ್ನೂ ಅಟಲ್ ಪೆನ್ಷನ್ ಯೋಜನೆಯಡಿ ಪಿಂಚಣಿಗಾಗಿ ಇಲ್ಲಿಯವರೆಗೆ 53,862 ಜನರನ್ನು ನೋಂದಣಿಗೆ ಒಳಪಡಿಸಲಾಗಿದೆ. ಬ್ಯಾಂಕಿನ ಈ ಕಾರ್ಯ ಪರಿಗಣಿಸಿ ಭಾರತೀಯ ಪಿಂಚಣಿ ಪ್ರಾಧಿಕಾರ ಬ್ಯಾಂಕಿಗೆ ರಾಷ್ಟ್ರಮಟ್ಟದ ನಾಲ್ಕು ಪ್ರಶಸ್ತಿಗಳನ್ನು ನೀಡಿದೆ ಎಂದರು.
ಸಾಲದ ಬಡ್ಡಿಯನ್ನು ಸಾಕಷ್ಟು ತಗ್ಗಿಸಲಾಗಿದ್ದು, ಹೊಸ ಆರ್ಥಿಕ ವರ್ಷದ ಸಾಲಿನಲ್ಲಿ ಕೃಷಿ ಪ್ರವಾಸೋದ್ಯಮ ಒಳಗೊಂಡು 10 ನೂತನ ಸಾಲ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅವುಗಳ ಜತೆಗೆ ಗೃಹಸಾಲ, ಸಣ್ಣ ಮತ್ತು ಮಧ್ಯಮ ತರಗತಿಯ ಕೈಗಾರಿಕೆ, ಕೃಷಿ ರಂಗದಲ್ಲಿ ಹೂಡಿಕೆ ಸಾಲ ಸೇರಿ ಸಮಗ್ರ ಕೃಷಿ ಪದ್ಧತಿಗೆ ಈ ಆರ್ಥಿಕ ವರ್ಷದಲ್ಲಿ ಆದ್ಯತೆ ನೀಡಲಾಗುವುದು ಎಂದರು.
ಬ್ಯಾಂಕಿನ ಮಹಾ ಪ್ರಬಂಧಕ ಐ.ಜಿ.ಕುಮಾರ ಗೌಡ, ಸಹಾಯಕ ಮಹಾ ಪ್ರಬಂಧಕ ಶ್ರೀಕಾಂತ ಹೆಗಡೆ, ಮುಖ್ಯ ಪ್ರಬಂಧಕ ಕೆ.ಟಿ.ಭಟ್, ಹಿರಿಯ ವ್ಯವಸ್ಥಾಪಕ ಉಲ್ಲಾಸ ಗುನಗಾ ಪತ್ರಿಕಾಗೋಷ್ಠಿಯಲ್ಲಿ ಇದ್ದರು.