ಕುಳಗೇರಿ ಕ್ರಾಸ್: ಗ್ರಾಹಕರ ಖಾತೆಯಲ್ಲಿ ದೊಡ್ಡ ಮೊತ್ತದ ಸಾಲ ಹೇರಿ ವ್ಯವಸ್ಥಾಪಕ ಪರಾರಿಯಾಗಿದ್ದಾನೆಂದು ಆರೋಪಿಸಿದ ಗ್ರಾಹಕರು ನೀಲಗುಂದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಹೊರಹಾಕಿ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಜರುಗಿದೆ.
ಗ್ರಾಹಕರು ಕೈಯಲ್ಲಿ ಕ್ರಿಮಿನಾಶಕ ಬಾಟಲಿ ಹಿಡಿದು ಬ್ಯಾಂಕ್ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು. ಬ್ಯಾಂಕ್ ಮುಖ್ಯಸ್ಥರು ಬರುವವರೆಗೂ ಬೀಗ ತೆಗೆಯಲ್ಲ ಎಂದು ಪಟ್ಟು ಹಿಡಿದರು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಬಾಗಲಕೋಟೆ ಸೀನಿಯರ್ ಮ್ಯಾನೇಜರ್ ರಾಜು ಜಿ. ಅವರು ಗ್ರಾಹಕರಲ್ಲಿ ಮತ್ತೆ ಕಾಲಾವಕಾಶ ಕೇಳಿದರು.
ಮಾತುಕತೆ ನಡೆಸಿದ ಗ್ರಾಹಕರು ಇನ್ನು ಕಾಲಾವಕಾಶ ಕೊಡಲು ಸಾದ್ಯವಿಲ್ಲ ಎಂದು ಪಟ್ಟು ಹಿಡಿದು ಸೀನಿಯರ್ ಮ್ಯಾನೇಜರ್ ಅವರನ್ನೂ ಒಳಹಾಕಿ ಮತ್ತೆ ಬೀಗ ಜಡಿದರು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬಾದಾಮಿ ಕ್ರೈಂ ಪಿಎಸ್‌ಐ ವಿಠ್ಠಲ್ ನಾಯಕ್ ಪರಿಸ್ಥಿತಿ ತಿಳಿಗೊಳಿಸಿ ಮ್ಯಾನೇಜರ್-ಗ್ರಾಹಕರ ಮಾತುಕತೆ ನಡೆಸಿ ಗ್ರಾಹಕರ ಹಣ ವಾಪಸ್ ನಿಡಲು ಮಾ.30ರವರೆಗೆ ಗಡುವು ನೀಡಿದರು.
ಮ್ಯಾನೇಜರ್ ಗ್ರಾಹಕರ ಹೆಸರಲ್ಲಿ ಹಣ ದುರುಪಯೋಗ ಮಾಡಿಕೊಂಡಿದ್ದಾನೆ. ಈ ವಿಷಯ ಮೇಲಾಧಿಕಾರಿಗಳ ಗಮನಕ್ಕೂ ತಂದಿದ್ದೇವೆ, ಲಿಖಿತ ಮನವಿ ಸಹ ಕೊಟ್ಟಿದ್ದೇವೆ. ಆದರೆ ಕ್ರಮ ಕೈಗೊಂಡಿಲ್ಲ. ಮ್ಯಾನೇಜರ್ ವಿರುದ್ಧ ಒಂದು ದೂರೂ ದಾಖಲಿಸಿಲ್ಲ. ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಿ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಭಾಗಿಯಾದವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.
ಈರಪ್ಪ ಉಳ್ಳಾಗಡ್ಡಿ, ಶಿವುಕುಮಾರ ಓಜುಗ, ರಮೇಶಗೌಡ ಪಾಟೀಲ, ರಂಗಪ್ಪ ಚಂದಪ್ಪನವರ, ಚಂದಪ್ಪ ಹಟ್ಟಿ, ಮಾದೇವಪ್ಪ ಕುಮ್ಮಿ, ಶಿವಯ್ಯ ಹಿರೇಮಠ ಸೇರಿದಂತೆ ನೂರಾರು ಗ್ರಾಹಕರು, ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಉದಯವಾಣಿ ಸಮಾಚಾರ