Advertisement

ತಂಗಿಗೆ ರಕ್ತನೀಡುವುದನ್ನು ತಡೆದ ಕುವೈಟ್‌ ಕಾನೂನು

03:30 AM Jun 15, 2018 | Karthik A |

ಉಡುಪಿ: ನನ್ನ ತಂಗಿಯ ಹೆರಿಗೆ ಸಮಯದಲ್ಲಿ ರಕ್ತ ಬೇಕಿತ್ತು. ಅದು ಅಪರೂಪವಾದ ಬಾಂಬೆ ಬ್ಲಡ್‌ ಗ್ರೂಪ್‌ ನದ್ದು. ನನ್ನದು ಕೂಡ ಅದೇ ಗ್ರೂಪ್‌. ಆದರೆ ಆಕೆ ಕುವೈಟ್‌ ನಲ್ಲಿದ್ದಳು. ನಾನು ಉಡುಪಿಯಲ್ಲಿದ್ದೆ. ಕುವೈತ್‌ ನ ಕಾನೂನಿನಿಂದಾಗಿ ನಾನು ರಕ್ತ ನೀಡಲು ಸಾಧ್ಯವಾಗಲಿಲ್ಲ. ಕೊನೆಗೂ ಕುವೈಟ್‌ ನಲ್ಲಿದ್ದ ಕೇರಳದ ವ್ಯಕ್ತಿ ಕತಾರ್‌ ಗೆ ತೆರಳಿ ರಕ್ತ ನೀಡಿದರು. ಇದು ಅಪರೂಪದಲ್ಲಿ ಅಪರೂಪ ವೆನಿಸಿದ ಬಾಂಬೆ ಬ್ಲಡ್‌ ಗ್ರೂಪ್‌ ಹೊಂದಿರುವ ಉಡುಪಿಯ ರಕ್ತದಾನಿ ಗುರುಪ್ರಸಾದ್‌ ಅವರ ನೋವಿನ ನುಡಿ.

Advertisement

ರಕ್ತದಾನ ಮಾಡುವಾಗ ಪತ್ತೆ
ಉಡುಪಿ ಸಂತೆಕಟ್ಟೆಯ ನಿವಾಸಿಯಾಗಿರುವ ಗುರುಪ್ರಸಾದ್‌ ಕಳೆದ ವರ್ಷ ರಕ್ತದಾನಕ್ಕೆಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ತೆರಳಿದಾಗ ಅವರಿಗೆ ಅಚ್ಚರಿ ಉಂಟಾಗಿತ್ತು. ‘ನೀವು ಅಪರೂಪದ ರಕ್ತದ ಗುಂಪು ಹೊಂದಿದ್ದೀರಿ. ಬೇರೆ ಕ್ಯಾಂಪ್‌ ಗಳಲ್ಲಿ ರಕ್ತ ನೀಡಬೇಡಿ. ಇದಕ್ಕೆ ಬೇಡಿಕೆ ಇದ್ದಾಗ ನಾವೇ ಕರೆಯುತ್ತೇವೆ’ ಎಂದು ವೈದ್ಯರು ಹೇಳಿದರು. ತನಗೆ ಬಾಂಬೆ ಬ್ಲಡ್‌ ಗ್ರೂಪ್‌ ರಕ್ತ ಇರುವುದು ಗುರುಪ್ರಸಾದ್‌ಗೆ ಆಗಲೇ ತಿಳಿಯಿತು.

ಮೂರು ಬಾರಿ ರಕ್ತದಾನ
‘ವೈದ್ಯರ ಕೋರಿಕೆಯ ಮೇರೆಗೆ ನಾನು ಮೂರು ಬಾರಿ ರಕ್ತ ನೀಡಿದ್ದೇನೆ. ಒಬ್ಬರು ಶಿವಮೊಗ್ಗದ ರೋಗಿ. ಉಳಿದವರು ಯಾರೆಂದು ಗೊತ್ತಿಲ್ಲ. ಯಾವ ಹೊತ್ತಿನಲ್ಲಿ ಕರೆದರೂ ನಾನು ರಕ್ತದಾನಕ್ಕೆ ಸಿದ್ಧನಿದ್ದೇನೆ. ಇದುವರೆಗೆ ಕೆಎಂಸಿಯಲ್ಲಿ ಮಾತ್ರ ರಕ್ತದಾನ ಮಾಡಿದ್ದೇನೆ’ ಎನ್ನುತ್ತಾರೆ ಗುರುಪ್ರಸಾದ್‌.

ಕುವೈತ್‌ ನ ಕಾನೂನು ತಡೆಯಿತು
ಕುವೈಟ್‌ನಲ್ಲಿರುವ ತಂಗಿಗೆ ಇತ್ತೀಚೆಗೆ ಹೆರಿಗೆ ಸಂದರ್ಭದಲ್ಲಿ ಬಾಂಬೆ ಬ್ಲಡ್‌ ಗ್ರೂಪ್‌ ನ ರಕ್ತ ಬೇಕಾಯಿತು. ಆದರೆ ಇಡೀ ಕುವೈಟ್‌ ನಲ್ಲಿ ಎಲ್ಲಿಯೂ ಸಿಗಲೇ ಇಲ್ಲ. ಕೊನೆಗೆ ಕತಾರ್‌ ನಲ್ಲಿ ದೊರೆಯಿತು. ಕೇರಳದ ವ್ಯಕ್ತಿಯೋರ್ವರು ಕತಾರ್‌ ನಿಂದ ಕುವೈತ್‌ ಗೆ ಬಂದು ನೀಡಿದರು. ನಾನು ಇಲ್ಲಿಂದ ಕುವೈತ್‌ ಗೆ ಹೋಗಿ ರಕ್ತ ನೀಡಲು ನಿರ್ಧರಿಸಿ ಚಡಪಡಿಸುತ್ತಿದ್ದೆ. ಆದರೆ ಕುವೈತ್‌ ನ ಕಾನೂನು ಪ್ರಕಾರ ಅಲ್ಲಿಯೇ ಕನಿಷ್ಠ 3 ತಿಂಗಳುಗಳ ಕಾಲ ನೆಲೆಸಿದ್ದವರು ಮಾತ್ರವೇ ರಕ್ತ ನೀಡಲು ಅವಕಾಶವಂತೆ. ಹಾಗಾಗಿ ನಾನು ನೋವಿನಲ್ಲೇ ಇಲ್ಲಿ ಉಳಿದುಕೊಳ್ಳಬೇಕಾಯಿತು ಎಂದು ಹೇಳುತ್ತಾರೆ ಗುರುಪ್ರಸಾದ್‌. ಗುರುಪ್ರಸಾದ್‌ ವೃತ್ತಿಯಲ್ಲಿ ವೆಲ್ಡಿಂಗ್‌ ಉದ್ಯಮ ನಡೆಸುತ್ತಿದ್ದಾರೆ. ಕಾರ್ಕಳದಲ್ಲಿ ಸುಹಾಸ್‌ ಹೆಗ್ಡೆ ಅವರು ಕೂಡ ಬಾಂಬೆ ಬ್ಲಡ್‌ ಗ್ರೂಪ್‌ ಹೊಂದಿದ್ದು ಇವರು ಪರರಾಜ್ಯದವರಿಗೂ ಸೇರಿದಂತೆ ಅನೇಕರಿಗೆ ರಕ್ತದಾನ ಮಾಡಿ ಜೀವ ಉಳಿಸಿದ್ದಾರೆ.

ಇಡೀ ವಿಶ್ವದಲ್ಲಿ ಕೇವಲ ಸುಮಾರು 40 ಲಕ್ಷ ಮಂದಿ ಮಾತ್ರವೇ ಬಾಂಬೆ ಬ್ಲಿಡ್‌ ಗ್ರೂಪ್‌ ಹೊಂದಿದವರಿದ್ದಾರೆ. ಭಾರತದಲ್ಲಿ 10,000 ಮಂದಿಗೆ ಓರ್ವರು ಮಾತ್ರ ಇದ್ದಾರೆ ಎಂದು ಅಂದಾಜಿಸಲಾಗಿದೆ. ಮೊದಲು ಈ ಗ್ರೂಪ್‌ನ ವ್ಯಕ್ತಿ ಮುಂಬಯಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಇದಕ್ಕೆ ಬಾಂಬೆ ಬ್ಲಡ್‌ ಎಂದು ಹೆಸರಿಡಲಾಗಿದೆ.

Advertisement

ಉಡುಪಿ ಜಿಲ್ಲೆ: ಶೇ.225ರಷ್ಟು ಅಧಿಕ ರಕ್ತ ಸಂಗ್ರಹ !
ಉಡುಪಿ ಜಿಲ್ಲೆಯಲ್ಲಿ ಸರಕಾರದ ನಿಗದಿತ ಕನಿಷ್ಠ ಮಿತಿಗಿಂತ ಶೇ.225ರಷ್ಟು ರಕ್ತ ಸಂಗ್ರಹವಾಗುತ್ತಿದೆ. ಅತ್ಯಧಿಕ ರಕ್ತಸಂಗ್ರಹವನ್ನು ಹೊಂದಿರುವ ಜಿಲ್ಲೆ ಎಂದು ಅಧಿಕೃತವಾಗಿ ಘೋಷಣೆಯಾಗಲು ಮಾತ್ರವೇ ಬಾಕಿ ಇದೆ. ಉಡುಪಿ ಜಿಲ್ಲೆಯಲ್ಲಿ ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರ, ಮಣಿಪಾಲ ಕೆಎಂಸಿ ರಕ್ತನಿಧಿ ಕೇಂದ್ರ, ಕುಂದಾಪುರದಲ್ಲಿರುವ ರೆಡ್‌ ಕ್ರಾಸ್‌ ನ ಬ್ಲಡ್‌ ಬ್ಯಾಂಕ್‌ಗಳಲ್ಲಿ 2015-16ನೇ ಸಾಲಿನಲ್ಲಿ ಒಟ್ಟು 27, 294 ಯುನಿಟ್‌ ರಕ್ತ ಸಂಗ್ರಹವಾಗಿದೆ. ಸಾಮಾನ್ಯವಾಗಿ ಸರಕಾರವು ಜನಸಂಖ್ಯೆಯ ಶೇ.1ರಷ್ಟು ಅಂದರೆ 100 ಮಂದಿಯಲ್ಲಿ ಒಬ್ಬನಿಗೆ (ಒಂದು ಯುನಿಟ್‌) ರಕ್ತಸಂಗ್ರಹದ ಕನಿಷ್ಠ ಮಿತಿ ನಿಗದಿಗೊಳಿಸಿದೆ. ಈ ಪ್ರಕಾರವಾಗಿ ಲೆಕ್ಕಾಚಾರ ಮಾಡಿದರೆ ಕನಿಷ್ಠ ಮಿತಿಗಿಂತ ಶೇ. 225ರಷ್ಟು ಹೆಚ್ಚಿನ ರಕ್ತ ಸಂಗ್ರಹವಿದೆ.

2014-15ರ ಎಪ್ರಿಲ್‌ನಿಂದ ಮಾರ್ಚ್‌ವರೆಗೆ 25,372 ಯುನಿಟ್‌, 2016-17ರ ಎಪ್ರಿಲ್‌ನಿಂದ ಮಾರ್ಚ್‌ವರೆಗೆ 28,044 ಯುನಿಟ್‌, 2017-18ರ ಎಪ್ರಿಲ್‌ನಿಂದ ಮಾರ್ಚ್‌ವರೆಗೆ 27,092 ಯುನಿಟ್‌ ಹಾಗೂ 2018ರಲ್ಲಿ ಎಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ 4,500 ಯುನಿಟ್‌ ರಕ್ತ ಸಂಗ್ರಹವಾಗಿದೆ.

34 ಕಾಲೇಜುಗಳು ಭಾಗಿ
ಉಡುಪಿ ಜಿಲ್ಲಾ ರಕ್ತನಿಧಿ ಕೇಂದ್ರದೊಂದಿಗೆ ಸುಮಾರು 200ಕ್ಕೂ ಅಧಿಕ ಸಂಘಟನೆಗಳು ರಕ್ತದಾನ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ನಿರಂತರವಾಗಿ ಪಾಲ್ಗೊಂಡಿವೆ. ಇದರ ಜತೆಗೆ 34 ಪದವಿ ಕಾಲೇಜುಗಳಲ್ಲಿ ರೆಡ್‌ ರಿಬ್ಬನ್‌ ತಂಡ ರಚಿಸಲಾಗದ್ದು ಈ ಕಾಲೇಜುಗಳಲ್ಲಿ ಪ್ರತಿ ವರ್ಷ ಕೂಡ ರಕ್ತದಾನ ಶಿಬಿರವನ್ನು ಆಯೋಜಿಸುತ್ತವೆ. ಇದರ ಜತೆಗೆ 18 ಪ.ಪೂ. ಕಾಲೇಜುಗಳಲ್ಲಿ ರಕ್ತದಾನದ ಕುರಿತು ಮಾಹಿತಿ ನೀಡಲಾಗುತ್ತದೆ.

— ಸಂತೋಷ್‌ ಬೊಳ್ಳೆಟ್ಟು 

Advertisement

Udayavani is now on Telegram. Click here to join our channel and stay updated with the latest news.

Next