Advertisement

ಕುವೈಟ್‌ ಕನ್ನಡಿಗರ ಅನುಕೂಲಕ್ಕೆ 10 ದಿನದಲ್ಲಿ ವಿಮಾನ ವ್ಯವಸ್ಥೆ: ಡಿ.ವಿ.ಸದಾನಂದಗೌಡ

08:30 AM May 18, 2020 | Sriram |

ಬೆಂಗಳೂರು: ಕುವೈಟ್‌ನಲ್ಲಿ 600ಕ್ಕೂ ಹೆಚ್ಚು ಕನ್ನಡಿಗರು ಭಾರತೀಯ ರಾಯಭಾರ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡಿದ್ದು, ಕುವೈಟ್‌ನಿಂದ 10 ದಿನದೊಳಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಇಲ್ಲವೇ ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಒಂದು ವಿಮಾನ ಹಾರಾಟ ವ್ಯವಸ್ಥೆ ಕಲ್ಪಿಸುವುದಾಗಿ ಕೇಂದ್ರ ಸಚಿವ ಡಿ.ವಿಸದಾನಂದಗೌಡ ಭರವಸೆ ನೀಡಿದರು.

Advertisement

“ತುಳು ಕೂಟ ಕುವೈಟ್‌”ನ ಅಧ್ಯಕ್ಷ ರಮೇಶ್‌ ಎಸ್‌. ಭಂಡಾರಿ ಸೇರಿದಂತೆ ಇತರೆ ಪ್ರಮುಖರೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ನಾನಾ ದೇಶಗಳಿಂದ ಹಲವು ವಿಮಾನ ಹಾರಾಟ ವ್ಯವಸ್ಥೆ ಕಲ್ಪಿಸಿ ಹಿರಿಯ ನಾಗರಿಕರು, ತುರ್ತು ವೈದ್ಯಕೀಯ ಚಿಕಿತ್ಸೆ ಬೇಕಾಗಿರುವವರು, ಗರ್ಭಿಣಿಯರ ಪಟ್ಟಿಯನ್ನು ಆದ್ಯತೆ ಮೇರೆಗೆ ಸಿದ್ಧಪಡಿಸಲಾಗಿದೆ.

ಕುವೈಟ್‌ನಿಂದ ಮೂರು ವಿಮಾನಗಳನ್ನು ಬೇರೆ ರಾಜ್ಯಗಳಿಗೆ ವ್ಯವಸ್ಥೆ ಮಾಡಿ ಅನಿವಾಸಿ ಭಾರತೀಯರನ್ನು ಕರೆತರಲಾಗಿದೆ. ಹಂತ ಹಂತವಾಗಿ ವಿಮಾನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

ಕುವೈಟ್‌ನಿಂದ ಕನ್ನಡಿಗರನ್ನು ವಾಪಸ್‌ ಬೆಂಗಳೂರು ಮತ್ತು ಮಂಗಳೂರಿಗೆ ಕರೆತರಲು ವಿಮಾನ ವ್ಯವಸ್ಥೆ ಮಾಡುವಂತೆ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಎರಡು ದಿನದಲ್ಲಿ ವೇಳಾಪಟ್ಟಿಯ ವಿವರ ಒದಗಿಸಲಾಗುವುದು. ನಿರಂತರ ಸಂಪರ್ಕದಲ್ಲಿದ್ದು, ಹಂತ ಹಂತವಾಗಿ ವಿಮಾನ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೂ ಮೊದಲು ಕುವೈಟ್‌ನಲ್ಲಿ ಕನ್ನಡಿಗರ ಸ್ಥಿತಿ ಬಗ್ಗೆ ಮಾಹಿತಿ ನೀಡಿದ ರಮೇಶ್‌ ಎಸ್‌. ಭಂಡಾರಿ, ಕುವೈಟ್‌ನಲ್ಲಿ 11 ಲಕ್ಷಕ್ಕೂ ಹೆಚ್ಚು ಅನಿವಾಸಿ ಭಾರತೀಯರಿದ್ದು, ಅದರಲ್ಲಿ 50,000 ಮಂದಿ ಕನ್ನಡಿಗರಿದ್ದಾರೆ. ಕೋವಿಡ್‌- 19 ಸೋಂಕಿನ ಮಹಾಮಾರಿಗೆ ಸಿಲುಕಿ ಸಂಕಷ್ಟದಲ್ಲಿದ್ದಾರೆ. ತುರ್ತು ಆರೋಗ್ಯ ಸಮಸ್ಯೆ, ಗರ್ಭಿಣಿಯರು, ವೀಸಾ ಅವಧ ಮುಗಿದವರು, ಉದ್ಯೋಗ ಕಳೆದುಕೊಂಡವರ ಜೀವನ ನಿರ್ವಹಣೆ ಕಷ್ಟಕರವಾಗಿದೆ ಎಂದು ಮಾಹಿತಿ ನೀಡಿದರು.

Advertisement

ರಮೇಶ್‌ ಎಸ್‌. ಭಂಡಾರಿ, ಈ ಮೊದಲೇ ಇತರೆ ಸಂಘ- ಸಂಸ್ಥಗಳ ಗಣ್ಯರೊಂದಿಗೆ ಸಮಾಲೋಚಿಸಿದಂತೆ ಕುವೈತ್‌ನಲ್ಲಿ 50,000ಕ್ಕೂ ಹೆಚ್ಚು ಕನ್ನಡಿಗರಿದ್ದು, ಈ ಅನಿವಾಸಿ ಕನ್ನಡಿಗರಿಗಾಗಿ ಸರ್ಕಾರದ ವತಿಯಿಂದ “ಕುವೈಟ್‌ ಕರ್ನಾಟಕ ಅನಿವಾಸಿ ಭಾರತೀಯ ಸಂಸ್ಥೆ’ ಸ್ಥಾಪಿಸಬೇಕು. ಅದಕ್ಕೊಂದು ಸಮಿತಿ ನೇಮಿಸಿ ಅದರಲ್ಲಿ ಎಲ್ಲ ಕನ್ನಡಿಗರು ಕೇಂದ್ರ ಸರ್ಕಾರದಡಿ ಅಧಕೃತ ನೋಂದಣಿ ಮಾಡುವಂತಹ ವ್ಯವಸ್ಥೆ ಮಾಡಬೇಕು. ಹಾಗೆಯೇ ಈ ಸಂಸ್ಥೆ ಕೇಂದ್ರ ಸರ್ಕಾರದ ಅಧಕೃತ ಸಂಸ್ಥೆಯಾಗಿರಬೇಕು ಎಂದು ಕೋರಿದರು.ಇದಕ್ಕೆ ಸ್ಪಂದಿಸಿದ ಡಿ.ವಿ.ಸದಾನಂದಗೌಡ, ರಾಜ್ಯ ಹಾಗೂ ರಾಷ್ಟ್ರಕ್ಕೆ ಅನಿವಾಸಿ ಭಾರತೀಯ ಕೊಡುಗೆ ಅಪಾರವಾಗಿದ್ದು, ಸಲಹೆ ಉತ್ತಮವಾಗಿದೆ. ಕೋವಿಡ್‌- 19 ವೈರಸ್‌ ನಿಯಂತ್ರಣಕ್ಕೆ ಬಂದ ಬಳಿಕ ಈ ಮನವಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ವಿಡಿಯೋ ಸಂವಾದದಲ್ಲಿ ಕುವೈಟ್‌ ಕನ್ನಡ ಕೂಟದ ರಾಜೇಶ್‌ ವಿಠಲ್‌, ಕುವೈಟ್‌ ಕೆನರಾ ವೆಲ್‌ಫೇರ್‌ ಅಸೋಸಿಯೇನ್‌ನ ಸ್ಟೀವನ್‌ ರೇಗೋ, ಕರ್ನಾಟಕ ಮುಸ್ಲಿಂ ವೆಲ್‌ಫೇರ್‌ ಅಸೋಸಿಯೇಷನ್‌ನ ಅಬ್ದುಲ್‌ ನಾಸಿರ್‌ ಖಾನ್‌, ಕುವೈಟ್‌ ಬಂಟರ ಸಂಘದ ಗುರು ಹೆಗ್ಡೆ, ಕುವೈಟ್‌ ಬಿಲ್ಲವ ಸಂಘದ ಕೃಷ್ಣ ಎಸ್‌. ಪೂಜಾರಿ, ಇಂಟಿಯನ್‌ ಮುಸ್ಲಿಂ ಅಸೋಸಿಯೇಷನ್‌ನ ಜಾಫರ್‌ ಸಾದಿಕ್‌ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next