Advertisement

ಗೊಂದಲಕ್ಕೆ ಪೂರ್ಣ ವಿರಾಮ: ಕುವೆಂಪು ವಿರಚಿತ ನಾಡಗೀತೆಗೆ ದಾಟಿ ಹಾಗೂ ಕಾಲಮಿತಿ ನಿಗದಿ

03:09 PM Sep 23, 2022 | Team Udayavani |

ಬೆಂಗಳೂರು : ನಾಡಗೀತೆಗೆ ನಿರ್ದಿಷ್ಟ ಸಮಯ ಹಾಗೂ ದಾಟಿ ನಿಗದಿ ಮಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ ದಶಕಗಳಿಂದ ಇದ್ದ ಗೊಂದಲಕ್ಕೆ ರಾಜ್ಯ ಸರಕಾರ ಇದೀಗ ಪೂರ್ಣ ವಿರಾಮ ಹಾಡಿದೆ.ಖ್ಯಾತ ರಾಗ ಸಂಯೋಜಕ ದಿ.ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ದಾಟಿಯಲ್ಲಿ ಕುವೆಂಪು ವಿರಚಿತ ನಾಡಗೀತೆಯ ಒಂದಕ್ಷರವನ್ನೂ ಬಿಡದಂತೆ ಹಾಡುವುದಕ್ಕೆ ಈಗ ರಾಜ್ಯ ಸರಕಾರ ಸಮ್ಮತಿ ಸೂಚಿಸಿದೆ.

Advertisement

ಇದನ್ನೂ ಓದಿ: ಗಂಗಾವತಿ: ಐತಿಹಾಸಿಕ ಸ್ಮಾರಕ ಸ್ಥಳದಲ್ಲಿ ಸ್ವಚ್ಛತೆಯ ಜಾಗೃತಿಗೆ ಚಾಲನೆ

ಯಾವುದೇ ಆಲಾಪ ಹಾಗೂ ಪುನರಾವರ್ತನೆ ಇಲ್ಲದಂತೆ ಎರಡು ನಿಮಿಷ ಮೂವತ್ತು ಸೆಕೆಂಡ್ ಗಳಲ್ಲಿ ನಾಡಗೀತೆಯನ್ನು ಹಾಡಲು ಸಾಧ್ಯ ಎಂದು ತಜ್ಞರು ನೀಡಿದ ವರದಿ ಆಧರಿಸಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಲ್ಲಿಸಿದ್ದ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅನುಮೋದನೆ ನೀಡಿದ್ದಾರೆ.

ಹೀಗಾಗಿ ಇನ್ನು ಮುಂದೆ ರಾಷ್ಟ್ರಕವಿ ಕುವೆಂಪು ರಚಿಸಿರುವ “ಜಯಭಾರತ ಜನನಿಯ ತನುಜಾತೆ” ಕವನವು ನಾಡಗೀತೆಯಾಗಿ ಅಂಗೀಕೃತಗೊಂಡ ರೂಪದಲ್ಲೇ ಹಿಂದಿನ ಒಂದಕ್ಷರವನ್ನೂ ಬಿಡದಂತೆ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆ ಮಾಡಿದ ದಾಟಿಯಲ್ಲೇ ಹಾಡಲಾಗುತ್ತದೆ ಎಂದು ಕನ್ನಡ – ಇಂಧನ ಮತ್ತು ಇಂಧನ ಸಚಿವ ವಿ ಸುನಿಲ್ ಕುಮಾರ್ ತಿಳಿಸಿದ್ದಾರೆ.

ದಶಕಗಳಿಂದ ಇದ್ದ ಗೊಂದಲಕ್ಕೆ ಕೊನೆಗೂ ತೆರೆ ಎಳೆದ ರಾಜ್ಯ ಸರಕಾರದ ದಿಟ್ಟ ನಡೆಗೆ ನಾಡಿನ ಸಾಂಸ್ಕೃತಿಕ ವಲಯದಿಂದ ಈಗ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

Advertisement

ಏನಿದು ವಿವಾದ 
ನಾಡಗೀತೆಗೆ ದಾಟಿ ಹಾಗೂ ಕಾಲಮಿತಿ ನಿಗದಿ ಮಾಡುವ ವಿಚಾರ 2005 ರಿಂದಲೂ ನನೆಗುದಿಗೆ ಬಿದ್ದಿತ್ತು ‌.  ಕೆಲವು ಕಾರ್ಯಕ್ರಮಗಳಲ್ಲಿ ಏಳರಿಂದು ಎಂಟು ನಿಮಿಷಗಳ ಕಾಲ ನಾಡಗೀತೆ ಹಾಡುತ್ತಿದ್ದರು. ಇದು ಅಶಕ್ತರು, ವಿಕಲಚೇತನರಿಗೆ ಅನನುಕೂಲವಾಗುತ್ತಿತ್ತು. ಹೀಗಾಗಿ ದಾಟಿ ಹಾಗೂ ಕಾಲ ಮಿತಿಯ ಬಗ್ಗೆ ಸ್ಪಷ್ಟತೆ ತರಬೇಕೆಂಬ ಒತ್ತಾಯ ಸರಕಾರದ ಮುಂದೆ ಇತ್ತು.

2006 ರಲ್ಲಿ ಸಾಹಿತಿ ವಸಂತ ಕನಕಾಪುರೆ ನೇತೃತ್ವದಲ್ಲಿ ಸರಕಾರ ಒಂದು ಸಮಿತಿ ರಚಿಸಿತ್ತು. ಆದರೆ ಅವರ ಅಕಾಲಿಕ ಮರಣ ಹಿನ್ನೆಲೆಯಲ್ಲಿ ಚನ್ನವೀರ ಕಣವಿ ಅಧ್ಯಕ್ಷತೆಯಲ್ಲಿ ಸರಕಾರ ಮತ್ತೊಂದು ಸಮಿತಿ ರಚನೆ ಮಾಡಿತ್ತು. ಆದರೆ ಈ ಸಮಿತಿಯ ಸದಸ್ಯರಲ್ಲೇ ಸ್ಪಷ್ಟತೆ ಇರಲಿಲ್ಲ.

ಈ ಹಿನ್ನೆಲೆಯಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ವಿ ಸುನೀಲ್ ಕುಮಾರ್ ನಾಡಗೀತೆಗೆ ದಾಟಿ ಹಾಗೂ ಕಾಲಮಿತಿ ನಿಗದಿ ಮಾಡುವಂತೆ ಹಿರಿಯ ಸಂಗೀತ ವಿದೂಷಿ ಎಸ್.ಆರ್.ಲೀಲಾವತಿ ಅಧ್ಯಕ್ಷತೆಯಲ್ಲಿ ಹದಿನೆಂಟು ಜನರ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಮೈಸೂರು ಅನಂತಸ್ವಾಮಿ ರಾಗಸಂಯೋಜನೆಯಲ್ಲಿ ಎರಡು ನಿಮಿಷ ಮೂವತ್ತು ಸೆಕೆಂಡ್ ಗಳಲ್ಲಿ ನಾಡಗೀತೆ ಹಾಡಬೇಕೆಂದು ನೀಡಿದ್ದ ಶಿಫಾರಸು ಇದೀಗ ಅಧಿಕೃತಗೊಂಡಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನಿಲ್ ಕುಮಾರ್ ಅವರು ಶುಕ್ರವಾರ ಟ್ವೀಟ್ ಮಾಡಿದ್ದು, ”ಕುವೆಂಪು ವಿರಚಿತ ನಾಡಗೀತೆ”ಜಯ ಭಾರತ ಜನನಿಯ ತನುಜಾತೆ” ಗೆ ದಾಟಿ ಹಾಗೂ ಕಾಲಮಿತಿಯನ್ನು ನಿಗದಿ ಮಾಡಲಾಗಿದೆ ಎಂಬುದನ್ನು ತಿಳಿಸಲು ಹರ್ಷವೆನಿಸುತ್ತಿದೆ. ಎಸ್.ಆರ್.ಲೀಲಾವತಿ ಅಧ್ಯಕ್ಷತೆಯ ಸಮಿತಿ ಶಿಫಾರಸು ಮಾಡಿದ ಪ್ರಕಾರ ಮೈಸೂರು ಅನಂತಸ್ವಾಮಿ ರಾಗಸಂಯೋಜನೆಯಲ್ಲಿ ಇನ್ನು ಎರಡು ನಿಮಿಷ ಮೂವತ್ತು ಸೆಕೆಂಡ್ ನಲ್ಲಿ ನಾಡಗೀತೆಯನ್ನು ಹಾಡಲಾಗುತ್ತದೆ.” ಎಂದು ತಿಳಿಸಿದ್ದಾರೆ.

ನಾಡಗೀತೆ ಮೊಟಕುಗೊಳಿಸುವಂತೆ ಅನಂತಸ್ವಾಮಿ ಹಾಗೂ ಸಿ.ವಿಶ್ವನಾಥ್ ನೇತೃತ್ವದ ಸಮಿತಿಗಳು ಶಿಫಾರಸುಗಳನ್ನು ನೀಡಿದ್ದವು.

ಇತ್ತೀಚಿಗೆ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆ ಮಾಡಿದ ನಾಡಗೀತೆಯನ್ನು 1ನಿಮಿಷಕ್ಕೆ ಸಿಮೀತಗೊಳಿಸಬೇಕು ಎಂದು ಹಿರಿಯ ಸಾಹಿತಿ ಕಮಲಾ ಹಂಪನಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next