ಶಿರ್ವ: ಕಾಪು ತಾಲೂಕಿನ ಕುತ್ಯಾರು ಸಮೀಪದ ಮೂಲ್ದೊಟ್ಟು ಗುತ್ತು ನಾಗಬನದಲ್ಲಿ ವರ್ಷಕ್ಕೊಮ್ಮೆ ತುಳುವಿನ ಬೇಷ ತಿಂಗಳ ಮೊದಲ ಗುರುವಾರ ನಡೆಯುವ ಪರಿಶಿಷ್ಟ ವರ್ಗದ ನಾಗರಾಧನೆ ಪೂಜೆಯು ಮೇ. 23ರಂದು ಸಂಪನ್ನಗೊಂಡಿತು.
ವಿಶಿಷ್ಟ ನಾಗಬನ
ವೈದಿಕ ಪರಂಪರೆಗೆ ಅವಕಾಶವಿರದೆ ವಿವಿಧ ಜಿಲ್ಲೆಗಳ ಪರಿಶಿಷ್ಟ ವರ್ಗದ ಮೊಗೇರ ಸಮುದಾಯದವರಿಂದ ಆರಾಧಿಸಲ್ಪಡುವ ಈ ನಾಗಬನದಲ್ಲಿ ವರ್ಷಕ್ಕೊಮ್ಮೆ ಮಾತ್ರ ಪೂಜೆ ನಡೆಯುವುದು ಅನಾದಿ ಕಾಲದಿಂದ ನಡೆದುಬಂದ ಸಂಪ್ರದಾಯ. ನೈಸರ್ಗಿಕವಾಗಿ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡ ಈ ವಿಶಿಷ್ಟ ನಾಗಬನದಲ್ಲಿ ನಾಗರಪಂಚಮಿಯಂತಹ ಪರ್ವದಿನದಲ್ಲಾಗಲಿ, ಭಕ್ತರು ಬಯಸಿದ ಇತರ ದಿನದಲ್ಲಾಗಲಿ ಪೂಜೆಗೆ ಅವಕಾಶವಿಲ್ಲ.
ಪರಿಶಿಷ್ಟ ವರ್ಗದ ಮೊಗೇರ ಸಮುದಾಯದ 16 ಬಳಿ ಸಾವಿರ ಮಾಗಣೆಯ ಪ್ರಧಾನ ನಾಗ ಬನವಾಗಿದ್ದು ಈ ವಾರ್ಷಿಕ ಆರಾಧನೆ ಪುರಾತನ ಕಾಲದಿಂದಲೂ ಸಂಪ್ರದಾಯ ಬದ್ಧವಾಗಿ ನಡೆದುಕೊಂಡು ಬರುತ್ತಿದೆ. ಶಿರ್ವ ಸೊರ್ಪು ಶ್ರೀಬ್ರಹ್ಮ ಮುಗ್ಗೇರ್ಕಳ ದೈವಸ್ಥಾನದ ಗುರಿಕಾರರಿಗೆ ಮಾತ್ರ ಸನ್ನಿಧಿಯಲ್ಲಿ ತಂಪೆರೆಯುವ ಪೂಜೆ ಸಲ್ಲಿಸುವ ಅಧಿಕಾರವಿದ್ದು, ಈ ನಾಗಬನದಲ್ಲಿ ಮಾತ್ರ ತುಳು ಬೇಷ ತಿಂಗಳ ಮೊದಲ ಗುರುವಾರ ನಾಗಾರಾಧನೆ ನಡೆಯುವುದು ಕರಾವಳಿಯಲ್ಲಿ ವಿಶೇಷವಾಗಿದೆ.
ಪುರಾತನ ಸಂಪ್ರದಾಯದಂತೆ ಕಾಸರಗೋಡಿನಿಂದ ಕಾರವಾರದವರೆಗಿನ ವಿವಿಧ ಜಿಲ್ಲೆಗಳಿಂದ ಬಂದ ಮೊಗೇರ ಸಮುದಾಯದ ಭಕ್ತರು ಬೆಳಗ್ಗೆ ಮೂಲ್ದೊಟ್ಟು ಗುತ್ತು ಮೂಲ ಮನೆಗೆ ತೆರಳಿ ಬಾವಿಯ ನೀರು ಕುಡಿದು ಪೂಜೆ ಸಲ್ಲಿಸಿದ ಬಳಿಕ ನಾಗಬನವನ್ನು ಶುಚಿಗೊಳಿಸಿ ಮಣ್ಣಿನ ಮಡಕೆಯಲ್ಲಿ ತಯಾರಿಸುವ ನಾಗನ ಬಿಂಬದಲ್ಲಿ ನಾಗಾರಾಧನೆ ಪೂಜೆ ನಡೆಯುತ್ತದೆ.
ಪರಿಶಿಷ್ಟ ವರ್ಗದ ಮೊಗೇರ ಸಮುದಾಯದ ಈ ನಾಗಬನದ ಬನದ ಸುತ್ತ ತಡೆಗೋಡೆ ನಿರ್ಮಿಸಿ ಮೂಲ ಸ್ವರೂಪವನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಮೂಲ್ದೊಟ್ಟುಗುತ್ತು ಮನೆತನ ಮತ್ತು ಭಕ್ತರ ಆಶಯವಾಗಿದೆ.
ಮೂಲ್ದೊಟ್ಟು ಮನೆತನದ ನಡಿಗುತ್ತು ನವೀನ್ ಶೆಟ್ಟಿ, ಧೀರಜ್ ಶೆಟ್ಟಿ, ಮೊಗೇರ ಸಮಾಜದ ಗುರಿಕಾರರು, ಒತ್ತು ಗುರಿಕಾರರು, ಭಕ್ತರು ಉಪಸ್ಥಿತರಿದ್ದರು.