ಉಳ್ಳಾಲ: ಸಾಮಾಜಿಕ, ಧಾರ್ಮಿಕ ಸಹಿತ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಕುತ್ತಾರಗುತ್ತು ಚಂದ್ರಹಾಸ ಅಡ್ಯಂತಾಯ ಅವರ 75ನೇ ಜನ್ಮದಿನದ ಅಂಗವಾಗಿ “ಚಂದ್ರಾಮೃತ’ ಕಾರ್ಯಕ್ರಮ ಆ. 5ರಂದು ಸಂಜೆ 4ಕ್ಕೆ ಅಡ್ಯಾರ್‌ನಲ್ಲಿರುವ “ಅಡ್ಯಾರ್ ಗಾರ್ಡನ್‌ನ ವಿ.ಕೆ. ಆಡಿಟೋರಿಯಂ’ನಲ್ಲಿ ನಡೆಯಲಿದೆ ಎಂದು ಕುತ್ತಾರಗುತ್ತು ಚಂದ್ರಹಾಸ ಅಡ್ಯಂತಾಯ ಅಭಿನಂದನ ಸಮಿತಿ ಉಳ್ಳಾಲದ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಚಂದ್ರಹಾಸ ಅವರು ಹೊಟೇಲ್ ಉದ್ಯಮದೊಂದಿಗೆ, ಧಾರ್ಮಿಕ, ಸಮಾಜ ಸೇವೆ, ರಂಗಭೂಮಿ, ಚಿತ್ರರಂಗ, ಶೈಕ್ಷಣಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಉತ್ತಮ ಸಂಘಟಕರಾಗಿ ಸಮಾಜದಲ್ಲಿ ಸರ್ವಧರ್ಮ ಸಮನ್ವಯದ ಜೀವನ ನಡೆಸುತ್ತಿದ್ದಾರೆ. ಅವರ 75ನೇ ಜನ್ಮ ದಿನವನ್ನು ಸಾಮಾಜಿಕ ಸೇವಾ ಕಾರ್ಯಕರ್ತರು, ಸಾಧಕರಿಗೆ ಗೌರವಾರ್ಪಣೆ, ಸಾಂಸ್ಕೃತಿಕ ಮತ್ತು ಅಭಿನಂದನೆ ಇತ್ಯಾದಿಗಳೊಂದಿಗೆ ವಿಶಿಷ್ಟವಾಗಿ ಆಚರಿಸಲು ಸಮಿತಿ ನಿರ್ಧರಿಸಿದ್ದೇವೆ ಎಂದರು.
ನಾಟೆಕಲ್ಲು ಸಮೀಪದ ತಿಬ್ಲೆಪದವು, ಪರಂಡೆಯಲ್ಲಿ ಪ್ರಯಾಣಿಕರ ಬಸ್ ತಂಗುದಾಣ ಉದ್ಘಾಟನೆ, ಅನಾರೋಗ್ಯ ಸೇರಿದಂತೆ ಆರ್ಥಿಕವಾಗಿ ಬಳಲುತ್ತಿರುವವರ ಕುಟುಂಬಕ್ಕೆ ಆರ್ಥಿಕ ಸಹಾಯ, ಶೈಕ್ಷಣಿಕ ಸಹಾಯಧನ, ಲ್ಯಾಪ್‌ಟಾಪ್ ವಿತರಣೆ, ಮೂವರು ಸಾಧಕಿಯರಿಗೆ ಗೌರವ, ಚಂದ್ರಹಾಸ ಅಡ್ಯಂತಾಯರ “ಬದುಕಿನ ಹೆಜ್ಜೆ “ಸಾಕ್ಷಚಿತ್ರ, ಅಭಿನಂದನೆ ಹಾಗೂ ಅರೆಹೊಳೆ ಪ್ರತಿಷ್ಠಾನ ಮಂಗಳೂರು ಅವರಿಂದ ನಂದಗೋಕುಲ ನೃತ್ಯವೈಭವ, ಸಂಗೀತ ರಸಮಂಜರಿ ನಡೆಯಲಿದೆ.
ನಿಟ್ಟೆ ಪರಿಗಣಿತ ವಿ.ವಿ.ಯ ಕುಲಾಧಿಪತಿ ಎನ್. ವಿನಯ ಹೆಗ್ಡೆ, ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಸಂಸದ ನಳಿನ್ ಕುಮಾರ್ ಕಟೀಲು, ಶ್ರೀದೇವಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ| ಸದಾನಂದ ಶೆಟ್ಟಿ, ಕೇಂದ್ರ ಸರಕಾರದ ಸಣ್ಣ ಕೈಗಾರಿಕಾ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಉದಯಚಂದ್ರ ಡಿ. ಸುವರ್ಣ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಭಾಗವಹಿಸಲಿದ್ದಾರೆ ಎಂದರು.
ಸಮಿತಿಯ ಗೌರವಾಧ್ಯಕ್ಷ ಕೆ.ಟಿ. ಸುವರ್ಣ, ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರು, ಜತೆ ಕಾರ್ಯದರ್ಶಿ ಆನಂದ್ ಶೆಟ್ಟಿ ಭಟ್ನಗರ ಪತ್ರಿಕಾಗೋಷ್ಠಿಯಲ್ಲಿದ್ದರು.