Advertisement

ಜೀವನಕ್ಕೆ ಕಸುವು ತುಂಬುವ “ಕುಸುಬೆ’

09:04 PM Jul 07, 2019 | mahesh |

ಇತ್ತೀಚೆಗೆ ಕುಸುಬೆ ಬೆಳೆಯುವವರ ಸಂಖ್ಯೆ ಕಡಿಮೆಯಾಗ್ತಿದೆ. ಇದಕ್ಕೆ ಪ್ರಮುಖ ಕಾರಣ: ಒಕ್ಕಲು ಸಮಸ್ಯೆ. ಮುಳ್ಳು ತುಂಬಿದ ಈ ಬೆಳೆಯೊಂದಿಗೆ ಅದರೊಂದಿಗೆ ವ್ಯವಹರಿಸುವುದು ನಮ್ಮ ಹೈಬ್ರಿಡ್‌ ರೈತರಿಗೆ ಕಷ್ಟದ ಕೆಲಸ. ಆದರೆ ಇದನ್ನರಿತ ಕೃಷಿ ವಿಜ್ಞಾನಿಗಳು, ಇಂಥವರಿಗೆಂದೇ ಮುಳ್ಳೇ ಇರದ ಕುಸುಬೆ ಕಂಡುಹಿಡಿದರು. ಇದನ್ನು ಸಂಶೋಧನೆ ಮಾಡಿ ತುಂಬಾ ವರ್ಷವಾಯಿತಾದರೂ ಪ್ರಚಾರದ ಕೊರತೆ ಹಾಗೂ ಬೀಜಗಳು ಸಿಗದಿರುವಿಕೆಯಿಂದಾಗಿ ಮುಳ್ಳಿರದ ಕುಸುಬೆ ಬೆಳೆ, ಇನ್ನೂ ಅಂದುಕೊಂಡಷ್ಟು ಯಶಸ್ಸು ಕಂಡಿಲ್ಲ. ಇಷ್ಟಕ್ಕೂ ಈಗ ಮೊದಲಿನಂತೆ ರಾಶಿ ಮಾಡಲು ಕಷ್ಟಪಡಬೇಕಿಲ್ಲ, ಕಟಾವು ಮಾಡುವುದರ ಜೊತೆಗೆ ರಾಶಿ ಮಾಡುವ ಯಂತ್ರಗಳೂ ಬಂದಿರುವುದರಿಂದ, ರೈತರು ಈ ಎಣ್ಣೆ ಬೆಳೆ ಬೆಳೆಯಲು ಮನಸ್ಸು ಮಾಡಬೇಕಷ್ಟೆ.

Advertisement

ಕುಸುಬೆ ವಿಶೇಷವಾಗಿ ಉತ್ತರಕರ್ನಾಟಕದ ಆಳವಾದ ಕಪ್ಪುಮಣ್ಣಿಗೆ ಹೇಳಿ ಮಾಡಿಸಿದ ಬೆಳೆ. ಹಿಂಗಾರು ಮಳೆಯ ಸಂದರ್ಭದಲ್ಲಿ ಇದನ್ನು ಬೆಳೆಯುತ್ತಾರೆ. ನೀರಾವರಿ ಬಳಸಿಯೂ ಕುಸುಬೆ ಬೆಳೆಯಬಹುದಾದರೂ ರೋಗಗಳ ಕಾಟ ಜಾಸ್ತಿ. ಇನ್ನು ಮಸಾರಿ (ಕೆಂಪು) ಮಣ್ಣಿನಲ್ಲಿ ಇದು ಬೆಳೆಯಲು ಯೋಗ್ಯವಲ್ಲ. ಖಾಸಗಿ ಕಂಪನಿಯ ಬೀಜಗಳು ಸಿಗುತ್ತವಾದರೂ ರೈತ ಸಂಪರ್ಕ ಕೇಂದ್ರ ಅಥವಾ ಹುಲಕೋಟಿಯ ಕುಸುಬೆ ಸಂಶೋಧನಾ ಕೇಂದ್ರದಿಂದ ಬೀಜಗಳನ್ನು ಪಡೆಯುವುದು ಒಳ್ಳೆಯದು. ಕುಸುಬೆ ಹಾಗೂ ಸೂರ್ಯಕಾಂತಿ ಬೆಳೆಯುವ ಪದ್ಧತಿ ಒಂದೇ ಥರ, ಎರಡಡಿ ಸಾಲು ಬಿಟ್ಟು ಅಡಿಗೆ ಒಂದರಂತೆ ಬರುವ ಹಾಗೆ ಬೀಜ ಹಾಕಬೇಕು. ಹೊಲ ಫ‌ಲವತ್ತಾಗಿದ್ದರೆ ಸರಿ, ಇಲ್ಲವೆಂದರೆ ಬಿತ್ತನೆಗೂ ಮೊದಲು ಎಕರೆಗೆ ಎರಡು ಟ್ರ್ಯಾಕ್ಟರ್‌ ಕೊಟ್ಟಿಗೆ ಗೊಬ್ಬರ ಹಾಕಬೇಕು.

ರಾಸಾಯನಿಕ ಗೊಬ್ಬರವನ್ನು ಒಂದೇ ಸಲಕ್ಕೆ ಹಾಕದೆ, ಉಳುಮೆ ಮಾಡಿದಾಗ ಒಮ್ಮೆ ಸ್ವಲ್ಪ ಸ್ವಲ್ಪವಾಗಿ ಕೊಡುವುದು ಒಳ್ಳೆಯದು. ಯೂರಿಯಾ, ಡಿ.ಎ.ಪಿ, ಪೊಟ್ಯಾಷ್‌, ಸೂಪರ್‌ ಫಾಸೆ#àಟ್‌ ಜೊತೆಗೆ ಎಕರೆಗೆ ಒಂದು ಕ್ವಿಂಟಾಲ್‌ ಜಿಪ್ಸಂಅನ್ನು ಕುಸುಬೆ ಬೆಳೆಗೆ ಕೊಡಬೇಕು. ಕಾಳುಗಳಲ್ಲಿ ಎಣ್ಣೆಯ ಅಂಶ ಹೆಚ್ಚಿ ಕಾಳು ತೂಕ ಬರಲು ಇದು ಅತ್ಯವಶ್ಯಕ. ಮೊಗ್ಗು ಬರುವ ಮೊದಲು ಕುಡಿಗಳನ್ನು ಚಿವುಟಿ ಹಾಕಿದರೆ ಹೆಚ್ಚು ಕವಲೊಡೆದು ಇಳುವರಿ ಹೆಚ್ಚುತ್ತದೆ. ಈ ಬೆಳೆಗೆ ಹೆಚ್ಚು ನೀರಿನ ಅವಶ್ಯಕತೆ ಇಲ್ಲ, ಬಿತ್ತನೆ ಸಮಯದಲ್ಲಿ ಮಳೆಯಾದರೆ ಸಾಕು, ಇಬ್ಬನಿ ಮೂಲಕವೇ ಬೇಕಾದಷ್ಟು ತಂಪಿನಾಂಶ ಹೀರಿಕೊಂಡು ಬೆಳೆಯುತ್ತದೆ. ರೋಗಗಳ ಕಾಟವೂ ತೀರಾ ಕಮ್ಮಿ.

ಕುಸುಬೆ ಎಣ್ಣೆಯಲ್ಲಿ ಕೆಟ್ಟ ಕೊಬ್ಬಿನಾಂಶ ಕಡಿಮೆ ಇರುವುದರಿಂದ ಹೃದಯದ ಆರೋಗ್ಯಕ್ಕೆ ಉತ್ತಮ. ವಿಟಮಿನ್‌ “ಎ’ ಅಧಿಕ ಪ್ರಮಾಣದಲ್ಲಿರುವುದನ್ನು ತಜ್ಞರು ಸಂಶೋಧನೆಯಿಂದ ಪ್ರಮಾಣೀಕರಿಸಿದ್ದಾರೆ. ಕುಸುಬೆ ಎಣ್ಣೆಯನ್ನು ಈಚೆಗೆ ಹೃದ್ರೋಗಗಳಿಗೆ (ಕರೋನರಿ, ತ್ರಾಂಬೊಸಿಸ್‌, ಇತ್ಯಾದಿ) ನಡೆಸುವ ಚಿಕಿತ್ಸೆಯಲ್ಲೂ ಬಳಸುತ್ತಿದ್ದಾರೆ. ಕುಸುಬೆಯ ಹಿಂಡಿ ಒಂದು ಮುಖ್ಯ ಉತ್ಪನ್ನ, ಬೀಜದ ಸಿಪ್ಪೆ ತೆಗೆದು ಎಣ್ಣೆ ತೆಗೆದ ಮೇಲೆ ಉಳಿಯುವ ಹಿಂಡಿಯನ್ನು ದನಗಳ ಮೇವಿಗೆ ಬಳಸುವರು. ಕುಸುಬೆಯಲ್ಲಿ ಸುಮಾರು 20%ರಿಂದ 30%ರಷ್ಟು ಎಣ್ಣೆ ಇರುತ್ತದೆ. ಅದನ್ನು ಮುಖ್ಯವಾಗಿ ಪದಾರ್ಥಗಳನ್ನು ಕರಿಯುವ ಖಾದ್ಯ ತೈಲವನ್ನಾಗಿ ಹಿಂದಿನಿಂದಲೂ ಬಳಸುತ್ತಾರೆ. ದೀಪಕ್ಕೂ ಉಪಯೋಗಿಸುತ್ತಿದ್ದಾರೆ. ಈಚೆಗೆ ಸಾಬೂನು ತಯಾರಿಕೆಯಲ್ಲೂ ಬಳಸಲಾಗುತ್ತಿದೆ. ಕೆಲವು ಕೇಶತೈಲಗಳ ತಯಾರಿಕೆಯಲ್ಲೂ ಬಳಸುವುದುಂಟು. ಮುಂದಿನ ದಿನಗಳಲ್ಲಿ ತಾಳೆ ಎಣ್ಣೆಗೆ ಪೈಪೋಟಿ ನೀಡಲು ಕುಸುಬೆ ಸಮರ್ಥವಾಗಲಿದೆ, ರೈತರು ಆಸ್ಥೆ ವಹಿಸಿ ಬೆಳೆಯಬೇಕಷ್ಟೆ.

-ಎಸ್‌.ಕೆ. ಪಾಟೀಲ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next