Advertisement

ಕುಷ್ಟಗಿ ಆಸ್ಪತ್ರೆ ದುರ್ವಾಸನೆ ಅಸಹನೀಯ

10:50 AM Jul 15, 2019 | Suhan S |

ಕುಷ್ಟಗಿ: ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಯ ಮೇಲಿನ ಮಹಡಿಯಲ್ಲಿ ಎರಡು ದಿನಗಳಿಂದ ಶೌಚಾಲಯದ ದುರ್ವಾಸನೆ ಹರಡಿದ್ದು, ಒಳರೋಗಿಗಳಿಗೆ ಅಸಹನೀಯವೆನಿಸಿದೆ.

Advertisement

ಆಸ್ಪತ್ರೆಯ ಮೇಲಮಹಡಿಯ ಶೌಚಾಲಯ ಕಟ್ಟಿಕೊಂಡಿದ್ದರಿಂದ ಅವುಗಳ ದುರಸ್ತಿ ಹಾಗೂ ಹೊಸ ಟೈಲ್ಸ್ ಅಳವಡಿಸುವ ನವೀಕರಣ ಕಾರ್ಯ ನಡೆದಿದೆ. ಈ ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ಸದರಿ ವಾರ್ಡ್‌ಗಳಲ್ಲಿ ಶೌಚಾಲಯಕ್ಕಾಗಿ ಪರ್ಯಾಯ ಕ್ರಮಕೈಗೊಂಡಿಲ್ಲ. ಶೌಚಾಲಯದ ವ್ಯವಸ್ಥೆ ಇಲ್ಲದಿರುವುದು, ಆಸ್ಪತ್ರೆಯ ಒಳರೋಗಿಗಳು ಹಾಗೂ ಅವರ ಸಂಬಂಧಿಕರು ದುರಸ್ತಿ ಹಂತದ ಸ್ಥಳದಲ್ಲೇ ಶೌಚ ಮಾಡಿರುವುದರಿಂದ ದುರ್ವಾಸನೆ ಇಡೀ ಆಸ್ಪತ್ರೆಯನ್ನು ಆವರಿಸಿದೆ. ಈ ಪರಿಸ್ಥಿತಿಯಲ್ಲಿ ದುರ್ವಾಸನೆಗೆ ಮೂಗು ಮುಚ್ಚಿಕ್ಕೊಳ್ಳುವುದು ಅನಿವಾರ್ಯವೆನಿಸಿದೆ. ಈ ವಿಷಯ ವೈದ್ಯರ ಗಮನಕ್ಕೂ ಬಂದಿದ್ದು, ದುರಸ್ತಿ ಕೆಲಸ ಮುಗಿಯುವರೆಗೂ ಪರ್ಯಾಯ ಕ್ರಮ ಕೈಗೊಳ್ಳದೇ ಇರುವುದು ಸಾರ್ವಜನಿಕರಿಂದ ಬೇಸರ ವ್ಯಕ್ತವಾಗಿದೆ.

ತಾಲೂಕಿನ 100 ಹಾಸಿಗೆ ಆಸ್ಪತ್ರೆ ಸ್ವಚ್ಛತೆಗೆ ಕೇವಲ 6 ಜನರಿದ್ದು, ಸ್ವಚ್ಛತೆ ಕಡೆಗೆ ಗಮನ ಕಡಿಮೆಯಾಗುತ್ತಿದೆ. ಆಸ್ಪತ್ರೆಯಲ್ಲಿ ಒಳ ಪ್ರವೇಶಿಸಿದರೆ ದುರ್ವಾಸನೆಯಿಂದ ವಾಕರಿಕೆ ತರಿಸುತ್ತಿದೆ ಎಂದು ನಾಗರಾಜ ಕಬ್ಬಣ್ಣನವರ್‌ ಬೇಸರ ವ್ಯಕ್ತಪಡಿಸಿದರು.

ಕೆಲಸ ಸ್ಥಳದಲ್ಲಿ ಬೆಡ್‌: ಶೌಚಾಲಯ ದುರಸ್ತಿ ಕಾರ್ಯ ನಡೆಯುತ್ತಿದ್ದು, ಕೊಠಡಿಯ ಮೂಲೆಯಲ್ಲಿ ಓರ್ವ ರೋಗಿ ಬೆಡ್‌ ಮೇಲೆ ಮಲಗಿದ್ದು, ಮತ್ತೋರ್ವ ಟೈಲ್ಸ್ ಕವರ್‌ಗಳನ್ನು ಬಳಸಿಕೊಂಡು ನೆಲದಲ್ಲಿ ಮಲಗಿರುವುದು ಕಂಡು ಬಂತು. ಕೆಲಸದ ಸ್ಥಳದಲ್ಲಿ ಸಿಮೆಂಟ್ ಧೂಳಿನ ನಡುವೆ ರೋಗಿಗಳನ್ನು ಮಲಗಿಸಿರುವುದು ಆಸ್ಪತ್ರೆಯ ಅವಸ್ಥೆಯನ್ನು ಸಾಕ್ಷೀಕರಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next