Advertisement

ಮಳೆ ಇಲ್ಲದೆ ಒಣಗುತ್ತಿವೆ ಬೆಳೆ

06:44 PM Sep 12, 2019 | Naveen |

ಮಂಜುನಾಥ ಮಹಾಲಿಂಗಪುರ
ಕುಷ್ಟಗಿ:
ತಾಲೂಕಿನಲ್ಲಿ ಅನ್ನದಾತರ ಮೇಲೆ ಮಳೆರಾಯನ ಮುನಿಸು ಕಡಿಮೆಯಾಗಿಲ್ಲ. ಪ್ರಸಕ್ತ ಹುಬ್ಬಿ ನಕ್ಷತ್ರದ ಮಳೆ ಗುಬ್ಬಿ ತೊಯುವುಷ್ಟು ಸುರಿಯದ ಹಿನ್ನೆಲೆಯಲ್ಲಿ ಸಜ್ಜೆ, ಮೆಕ್ಕೆಜೋಳ ಒಣಗುತ್ತಿದ್ದು, ರೈತರು ಆತಂಕಗೊಂಡಿದ್ದಾರೆ.

Advertisement

ತಾಲೂಕಿನಲ್ಲಿ ಮುಂಗಾರು ಆರಂಭದಿಂದ ಸಮರ್ಪಕವಾದ ಮಳೆಯಾಗಿಲ್ಲ. ಬಿದ್ದ ಅಲ್ಪಸ್ವಲ್ಪ ಮಳೆಯಲ್ಲಿ ಬಿತ್ತನೆ ಮಾಡಲಾಗಿದ್ದು, ಬಿತ್ತನೆಯಾದಷ್ಟು ಕಾಳು ಒಕ್ಕಬೇಕು ಎನ್ನುವ ರೈತರ ಆಸೆಗೆ ಹುಬ್ಬಿ ಮಳೆ ತಣ್ಣೀರು ಎರಚಿದೆ. ಇದರಿಂದ ಸಮದ್ಧ ಸಜ್ಜೆ, ಮೆಕ್ಕೆಜೋಳ, ತೊಗರಿ ಬೆಳೆ ಸದ್ಯದ ಸ್ಥಿತಿಯಲ್ಲಿ, ಮಳೆ ನಿರೀಕ್ಷೆಯಲ್ಲಿದ್ದು, ಕಾಳು ಕಟ್ಟುವ ಹಂತದ ಸಜ್ಜೆ ಬೆಳೆಗೆ ಈ ವಾರದಲ್ಲಿ ಮಳೆಯಾಗದಿದ್ದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಲಿದೆ. ಹೂವು ಕಟ್ಟುವ ಹಂತದ ತೊಗರಿ, ತೆನೆ ಒಡೆದ ಮೆಕ್ಕೆಜೋಳ ಮಳೆ ನಿರೀಕ್ಷೆಯಲ್ಲಿವೆ.

ಶೇ. 88ರಷ್ಟು ಬಿತ್ತನೆ: ಕೃಷಿ ಇಲಾಖೆ ಮಾಹಿತಿ ಪ್ರಕಾರ 67,575 ಹೆಕ್ಟೇರ್‌ ನಿಗದಿತ ಗುರಿಯಲ್ಲಿ 59,275 ಹೆಕ್ಟೇರ್‌ ಪ್ರದೇಶದಲ್ಲಿ ಒಟ್ಟು ಶೇ. 88ರಷ್ಟು ಬಿತ್ತನೆಯಾಗಿದೆ. ಸಜ್ಜೆ ಬಿತ್ತನೆ ಕ್ಷೇತ್ರ ಕಳೆದ ವರ್ಷಕ್ಕಿಂತ ಹೆಚ್ಚುವ ಸಾಧ್ಯತೆಯಿವೆ. ಕಳೆದ ವರ್ಷ ಸಜ್ಜೆ 20,900 ಹೆಕ್ಟೇರ್‌ ಗುರಿಯಲ್ಲಿ 24,587 ಹೆಕ್ಟೇರ್‌ ಕ್ಷೇತ್ರದಲ್ಲಿ ಬಿತ್ತನೆಯಾಗಿತ್ತು. ಈ ವರ್ಷ ಮೆಕ್ಕೆಜೋಳ 12,200 ಹೆಕ್ಟೇರ್‌ ಪ್ರದೇಶದಲ್ಲಿ 13,409 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು. ಈ ವರ್ಷದಲ್ಲಿ 12,200 ನಿಗದಿತ ಗುರಿಯಲ್ಲಿ 10,860 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ತೊಗರಿ ಪ್ರಸಕ್ತ ವರ್ಷದಲ್ಲಿ 5,900 ಹೆಕ್ಟೇರ್‌ನಲ್ಲಿ 9,120 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

ಮುಂಗಡ ಬಿತ್ತನೆ ಕೈಗೊಂಡ ಸಜ್ಜೆ ಬೆಳೆ ಸದ್ಯ ಕಟಾವು ಹಂತದಲ್ಲಿದ್ದು, ಕಾಳು ಕಟ್ಟುವ ಹಂತದಲ್ಲಿ ಮಳೆ ಕೈಕೊಟ್ಟಿದ್ದರಿಂದ ತೆನೆ ತುಂಬ ಕಾಳುಗಳಾಗಿಲ್ಲ. ಹೆಸರು ಕಟಾವು ನಂತರ ಬಿತ್ತನೆ ಕೈಗೊಂಡ ಸಜ್ಜೆ ಬೆಳೆ ಸದ್ಯ ಹಾಲ್ದೆನೆ ಹಂತದಲ್ಲಿದ್ದು, ಸಕಾಲಕ್ಕೆ ಮಳೆ ಅಗತ್ಯವಾಗಿದೆ. ಮಳೆಯಾಗದಿದ್ದರೆ ಬಿತ್ತನೆಗೆ ಹಾಕಿದಷ್ಟು ಕಾಳು ಮನೆಗೆ ತರದಂತಾಗುತ್ತದೆ ಎನ್ನುವುದು ರೈತ ಭೀಮಪ್ಪ ಗಡಾದ್‌ ಅವರ ಆತಂಕ.

ಮಳೆ ಮಾಹಿತಿ: ಜೂನ್‌ ತಿಂಗಳ 75.25 ಮಿ.ಮೀ. ವಾಡಿಕೆ ಮಳೆಯಲ್ಲಿ 89.75 ಮಿ.ಮೀ.ನಷ್ಟು ಮಳೆಯಾಗಿದೆ. ಜುಲೈ ತಿಂಗಳಲ್ಲಿ 73.05 ಮಿ.ಮೀ. ವಾಡಿಕೆ ಮಳೆಯಲ್ಲಿ 81.75ರಷ್ಟು ಮಳೆಯಾಗಿದೆ. ಆಗಸ್ಟ್‌ 5ಕ್ಕೆ ಈ ವರ್ಷದ ಒಟ್ಟು ಸರಾಸರಿ 255 ಮಿ.ಮೀ. ವಾಡಿಕೆ ಮಳೆಯಷ್ಟೇ 255 ಮಿ.ಮೀ. ಮಳೆಯ ವರದಿಯಾಗಿತ್ತು. ಕಳೆದ ಜನವರಿಯಿಂದ ಆಗಸ್ಟ್‌ ತಿಂಗಳವರೆಗೆ ಕುಷ್ಟಗಿ ಹೋಬಳಿಯಲ್ಲಿ 304 ಮಿ.ಮೀ. ಮಳೆಯಾಗಬೇಕಿತ್ತು 316 ಮಿ.ಮೀ. ನಷ್ಟು ಮಳೆಯಾಗಿದ್ದು, ಶೇ. 4ರಷ್ಟು ವ್ಯತ್ಯಾಸವಾಗಿದೆ. ಹನುಮನಾಳ ಹೋಬಳಿಯಲ್ಲಿ 344 ಮಿ.ಮೀ. ಮಳೆಯಾಗಬೇಕಿತ್ತು 414 ಮಿ.ಮೀ. ಮಳೆಯಾದ್ದು, ಶೇ. 20ರಷ್ಟು ಮಳೆ ವ್ಯತ್ಯಾಸವಾಗಿದೆ. ಹನುಮಸಾಗರ ವ್ಯಾಪ್ತಿಯಲ್ಲಿ 330 ಮಿ.ಮೀ. ಮಳೆಯಾಗಬೇಕಿದ್ದು, 313 ಮಿ.ಮೀ. ಮಳೆಯಾಗಿದೆ. ಶೇ. 5 ಕಡಿಮೆಯಾಗಿದೆ. ಕುಷ್ಟಗಿ ಹೊಬಳಿಯಲ್ಲಿ 297 ಮಿ.ಮೀ ಮಳೆಯಾಗಬೇಕಿತ್ತು. 267 ಮಿ.ಮೀ. ಮಳೆಯಾಗಿದ್ದು ಶೇ. 10ರಷ್ಟು ಕಡಿಮೆಯಾಗಿದೆ.

Advertisement

ಸದ್ಯಕ್ಕೆ ಮಳೆ ನಿರೀಕ್ಷೆಯಲ್ಲಿದ್ದು, ವಾರದೊಳಗೆ ಮಳೆಯಾದರೆ ಮಾತ್ರ ಇಳುವರಿ ಕಾಣಬಹುದಾಗಿದೆ. ಮಳೆಯಾಗದೇ ಇದ್ದಲ್ಲಿ ಇಳುವರಿ ಕುಂಠಿತವಾಗುವ ಸಾಧ್ಯತೆಗಳಿವೆ. ಹೆಸರು ಕಟಾವು ನಂತರ ಬಿತ್ತನೆ ಮಾಡಿದ ಸಜ್ಜೆ, ತೊಗರಿ, ಮೆಕ್ಕೆಜೋಳ ಬೆಳೆಗೆ ಮಳೆಯಾದರೆ ಮಾತ್ರ ಇಳುವರಿ ಪ್ರಮಾಣ ಹೆಚ್ಚಲಿದೆ.
ಶಿವಾನಂದ ಮಾಳಗಿ,
 ಸಹಾಯಕ ಕೃಷಿ ಅಧಿಕಾರಿ ಕುಷ್ಟಗಿ

Advertisement

Udayavani is now on Telegram. Click here to join our channel and stay updated with the latest news.

Next