Advertisement

ಅಂತರ್ಜಲ ಕುಸಿತ: ನೀರಿಗೆ ಹಾಹಾಕಾರ

04:13 PM Nov 04, 2018 | Team Udayavani |

ಕುಷ್ಟಗಿ: ಅಂತರ್ಜಲ ಕುಸಿತದ ಹಿನ್ನೆಲೆಯಲ್ಲಿ ಪಟ್ಟಣದ ಹೊರವಲಯದ ಮಾರುತಿ ನಗರದಲ್ಲಿ ಕುಡಿಯುವ ನೀರಿನ ಅಭಾವ ತಲೆದೋರಿದ್ದು, ನೀರಿಗಾಗಿ ಹಾಹಾಕಾರ ಶುರುವಾಗಿದೆ.

Advertisement

ಪಟ್ಟಣದ ಪುರಸಭೆ ವ್ಯಾಪ್ತಿಯ 1ನೇ ವಾರ್ಡ್‌ನಲ್ಲಿರುವ ಕೊಳಚೆ ನಿರ್ಮೂಲನೆಯ ಮಂಡಳಿ ಅಧಿಧೀನದಲ್ಲಿ 200 ಮನೆಗಳಿದ್ದು, ಇವುಗಳೊಂದಿಗೆ ಹೆಚ್ಚುವರಿಯಾಗಿ 100 ಮನೆಗಳು ತಲೆ ಎತ್ತಿವೆ. ಅಂದಾಜು 1,200 ಜನಸಂಖ್ಯೆ ಇದೆ. ಇಷ್ಟೊಂದು ಜನಕ್ಕೆ ನೀರು ಪೂರೈಸಲು ಇಲ್ಲಿ ಇರುವುದು ಒಂದೇ ಕೊಳವೆಬಾವಿ. ಒಂದೇ ಕೊಳವೆಬಾವಿ ನೀರು ಸಾಲುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಕೇವಲ ಒಂದೇ ಕೊಳವೆಬಾವಿಯಿಂದ ಇಡೀ ಬಡಾವಣೆಯ ಜನತೆ ನೀರು ತುಂಬಿಕೊಳ್ಳುವ ಪರಿಸ್ಥಿತಿ ಇದೆ. ಇದು ಬಿಟ್ಟರೆ ನೀರಿನ ಪರ್ಯಾಯ ವ್ಯವಸ್ಥೆ ಇಲ್ಲ. ಪಕ್ಕದ ತೋಟಪಟ್ಟಿಗಳಿಂದ ನೀರು ತರಬೇಕೆಂದರೆ ಅಲ್ಲಿಯೂ ಅಂತರ್ಜಲ ಕೊರತೆಯಿಂದ ರೈತರು ನೀರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ನೀರಿಗಾಗಿ ನಿತ್ಯದ ಕೆಲಸ ಬಿಟ್ಟು, ನೀರಿನ ತೊಟ್ಟಿಯ ಬಳಿ ದಿನವೂ ಕಾಯುತ್ತ ಕುಳಿತರೆ ನೀರು ಸಿಗುತ್ತದೆ. ನೀರಿಗಾಗಿ ಜಗಳ ಸಾಮಾನ್ಯವಾಗುತ್ತಿದ್ದು, ಸಂಬಂಧಿಸಿದ ಪುರಸಭೆ ಸದಸ್ಯರ ಗಮನಕ್ಕೆ ತರಲಾಗಿದ್ದು, ಕೊಳವೆಬಾವಿ ಕೊರೆಸುವ ಭರವಸೆ ನೀಡಿದ್ದಾರೆ. 

ಈ ಹಿನ್ನೆಲೆಯಲ್ಲಿ ಅಂತರ್ಜಲ ಸೆಲೆಗಾಗಿ ಹುಡುಕಾಟ ನಡೆಸಿರುವುದು ಕಂಡು ಬಂತು. ಕೃಷ್ಣೆಯ ನೀರು ಮರೀಚಿಕೆ: ಈ ಬಡಾವಣೆಯ ಕೂಗಳತೆ ದೂರದಲ್ಲಿ ಆಲಮಟ್ಟಿ ಜಲಾಶಯದಿಂದ ಜಿಂದಾಲ್‌ ಗೆ ಕೃಷ್ಣಾ ನದಿ ನೀರಿನ ಪೈಪ್‌ಲೈನ್‌ ಹಾದು ಹೋಗಿದೆ. ಈ ಪೈಪ್‌ಲೈನ್‌ ಮೂಲಕ ಆಸುಪಾಸಿನ ಗ್ರಾಮಗಳಿಗೆ ನೀರು ಬಳಸಿಕೊಳ್ಳಲಾಗಿದೆ. ಅದೇ ರೀತಿ ಮಾರುತಿ ನಗರಕ್ಕೂ ಈ ನೀರು ಕೊಡಿ ಎನ್ನುವ ಪ್ರಸ್ತಾಪವನ್ನು ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಅವರಲ್ಲಿ ನಿವೇದಿಸಿಕೊಳ್ಳಲಾಗಿದೆ. ಆದರೆ ಶಾಸಕರು, ಈ ನೀರು ಕೇವಲ ಗ್ರಾಮೀಣ ಪ್ರದೇಶಕ್ಕೆ ಮಾತ್ರ ಪಟ್ಟಣಕ್ಕೆ ಅಲ್ಲ ಎಂದು ಹೇಳಿ ಪುನಃ ಪ್ರಸ್ತಾಪಿಸದಂತೆ ಮಾಡಿದ್ದಾರೆ. ಈಗಿನ ಅಸಮರ್ಪಕ ಮಳೆ ಪರಿಸ್ಥಿತಿಯಲ್ಲಿ ಅಂತರ್ಜಲ ನೆಚ್ಚಿಕೊಳ್ಳುವುದು ಅಸಾಧ್ಯವೆನಿಸಿದೆ. ದಿನದಿಂದ ದಿನಕ್ಕೆ ಅಂತರ್ಜಲ ಕುಸಿಯುತ್ತಿದೆ. ಇದುವರೆಗೂ 10 ಕೊಳವೆಬಾವಿ ಕೊರೆಸಲಾಗಿದ್ದು, ಎಲ್ಲವೂ ವಿಫಲವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಿದ ಮೋಹನಲಾಲ್‌ ಜೈನ್‌ ಹಾಗೂ ಸ್ಥಳೀಯರು ವಂತಿಗೆ ಸಂಗ್ರಹಿಸಿ ಕೊಳವೆಬಾವಿ ಹಾಕಿಸಿಕೊಂಡಿದ್ದು, ಅದರಿಂದಲೇ ಈ ಬಡಾವಣೆ ನೀರು ಕಾಣುವಂತಾಗಿದೆ ಎಂದು ಸ್ಥಳೀಯರಾದ ಶಿವು ಹಜಾಳ, ಮಹಿಬೂಬ್‌ ಅಳ್ಳಳ್ಳಿ, ಬುಡಾನಸಾಬ್‌ ಖಾನಗೌಡ್ರು, ಹನುಮೇಶ ಮೇಟಿ ತಿಳಿಸಿದರು.

ಈ ಬಡಾವಣೆಯಲ್ಲಿ ಜನಸಂಖ್ಯೆಗೆ ತಕ್ಕಂತೆ ಕುಡಿಯುವ ನೀರು ಹಾಗೂ ಅಗತ್ಯ ಸೌಲತ್ತು ಒದಗಿಸುವಂತೆ ಕೊಳಚೆ ನಿರ್ಮೂಲನೆ ಮಂಡಳಿಗೆ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪುರಸಭೆ ಸದಸ್ಯರ, ಶಾಸಕರ ಗಮನಕ್ಕೆ ತರಲಾಗಿದ್ದು, ಕೊಳವೆಬಾವಿ ಕೊರೆಯುವ ವಾಹನ ಕಳುಹಿಸಲಾಗಿದ್ದು, ನೀರು ಸಿಕ್ಕರೆ ನಮ್ಮ ಪುಣ್ಯ. ಇಲ್ಲವಾಗಿದ್ದರೆ ಟ್ಯಾಂಕರ್‌ಗಳ ಮೂಲಕ ನೀರು ತರಿಸಿಕೊಳ್ಳುವುದು ಅನಿವಾರ್ಯವೆನಿಸಿದೆ ಎನ್ನುತ್ತಾರೆ ಸ್ಥಳೀಯರಾದ ದೊಡ್ಡಪ್ಪ.

ಮಾರುತಿ ನಗರದಲ್ಲಿ ಕುಡಿಯುವ ನೀರು ಮೂಲಸೌಕರ್ಯಕ್ಕಾಗಿ ಸರ್ಕಾರಕ್ಕೆ 7 ಲಕ್ಷ ರೂ. ಪ್ರಸ್ತಾವನೆ ಸಲ್ಲಿಸಿದ್ದೇವೆ. ಅನುದಾನ ಇಲ್ಲ ಎನ್ನುವ ಕಾರಣಕ್ಕೆ ಪ್ರಸ್ತಾವನೆ ವಾಪಸ್ಸಾಗಿದೆ. ಇನ್ನೂ ಪುರಸಭೆಯ ಅಭಿವೃದ್ಧಿ ಅನುದಾನದಲ್ಲಿ ಸ್ಲಂ ಸೆಸ್‌ ಮೊತ್ತದಲ್ಲಿ ಅಗತ್ಯ ಸೌಕರ್ಯ ಕೈಗೊಳ್ಳಬಹುದಾಗಿದೆ. ಪುರಸಭೆಯವರು ಸ್ಲಂಸೆಸ್‌ ಮೊತ್ತ ತಿಳಿಸಿದರೆ ಆ ಮೊತ್ತವನ್ನು ಬಳಸಿಕೊಳ್ಳಲು ಕೊಳಚೆ ನಿರ್ಮೂಲನೆ ಮಂಡಳಿ ಅನುಮೋದನೆ ನೀಡಲಿದೆ. 
. ಆನಂದಪ್ಪ, ಎಇಇ ಕೊಳಚೆ ನಿರ್ಮೂಲನೆ ಮಂಡಳಿ, ಗದಗ

Advertisement
Advertisement

Udayavani is now on Telegram. Click here to join our channel and stay updated with the latest news.

Next