Advertisement

Ground water: 236 ತಾಲೂಕುಗಳಲ್ಲಿ 136 ಕಡೆ ಅಂತರ್ಜಲ ಭಾರೀ ಇಳಿಮುಖ

10:41 PM Mar 21, 2024 | Team Udayavani |

ಬೆಂಗಳೂರು: ಒಂದಲ್ಲೊಂದು ವರ್ಷ ಎದುರಾಗುತ್ತಲೇ ಇರುವ ಬರದ ಛಾಯೆ ಮತ್ತು ಅತಿಯಾದ ನೀರಿನ ಬಳಕೆಯಿಂದ ರಾಜ್ಯದ ಅಂತರ್ಜಲ ಮಟ್ಟ ಪಾತಾಳಕ್ಕಿಳಿಯುತ್ತಿದೆ. ಕಳೆದ ಒಂದು ದಶಕಕ್ಕೆ ಹೋಲಿಸಿದರೆ ಕರಾವಳಿ ಮತ್ತು ಮಲೆನಾಡು ಸಹಿತ ಶೇ. 60ಕ್ಕೂ ಹೆಚ್ಚು ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ.

Advertisement

ರಾಜ್ಯದ ಒಟ್ಟಾರೆ 236 ತಾಲೂಕುಗಳ ಪೈಕಿ 136 ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿತ ಕಂಡಿದ್ದು, ಕನಿಷ್ಠ 0.5ರಿಂದ ಗರಿಷ್ಠ 24 ಮೀಟರ್‌ ವರೆಗೆ ಇಳಿಮುಖವಾಗಿರುವುದು ಕಂಡು ಬಂದಿದೆ. ಇದರಲ್ಲಿ ಚಿಕ್ಕಮಗಳೂರು, ಕೊಡಗು,ಹಾಸನ ಮತ್ತು ಶಿವಮೊಗ್ಗ ಜಿಲ್ಲೆಯ ಬಹು ತೇಕ ತಾಲೂಕುಗಳೂ ಸೇರಿರುವುದು ಆತಂಕ ಕಾರಿ ಅಂಶವಾಗಿದೆ. ದೀರ್ಘಾವಧಿ ಮಳೆ ಕೈಕೊಟ್ಟಿರುವುದು ಹಾಗೂ ಅತಿಯಾಗಿ ಅಂತರ್ಜಲ ಬಳಕೆ  ಈ ನಕಾರಾತ್ಮಕ ಬೆಳವಣಿಗೆಗೆ ಪ್ರಮುಖ ಕಾರಣ.

ಅಂತರ್ಜಲ ನಿರ್ದೇಶನಾಲಯವು ಕಳೆದ ಹತ್ತು ವರ್ಷಗಳ ಫೆಬ್ರವರಿ ತಿಂಗಳ ಅಂತರ್ಜಲ ಮಟ್ಟದ ಸರಾಸರಿ ಹಾಗೂ 2024ರ ಫೆಬ್ರವರಿಯಲ್ಲಿ ದಾಖಲಾದ ಪ್ರಮಾಣವನ್ನು ತಾಳೆ ಹಾಕಿ ವಿವಿಧ ತಾಲೂಕುಗಳ ಏರಿಳಿತವನ್ನು ದಾಖಲಿಸಿಕೊಂಡಿದೆ. ಅದರಂತೆ 136 ತಾಲೂಕುಗಳಲ್ಲಿ  ಟ್ರೆಂಡ್‌ ಇಳಿಮುಖವಾಗಿರುವುದು ತಿಳಿದುಬಂದಿದ್ದು, 38 ತಾಲೂಕುಗಳಲ್ಲಿ 5  ಮೀ.ಗಿಂತ ಹೆಚ್ಚು ಇಳಿಕೆ ಕಂಡಿದ್ದರೆ, ಇದರಲ್ಲಿ 13 ತಾಲೂಕುಗಳಲ್ಲಿ 10 ಮೀ.ಗಿಂತಲೂ ಅಧಿಕ ಕುಸಿದಿರುವುದು ಪತ್ತೆಯಾಗಿದೆ.

ಮಳೆ ಕೈಕೊಟ್ಟಿದ್ದರಿಂದ ಅಂತರ್ಜಲ ಮಟ್ಟ ತುಸು ಇಳಿಕೆ ಆಗುವುದು ಸರ್ವೇಸಾಮಾನ್ಯ. ಆದರೆ, ಈ ಟ್ರೆಂಡ್‌ ನಿರಂತರವಾಗಿ ಕಂಡುಬರುತ್ತಿರುವುದು ಆತಂಕಕಾರಿಯಾಗಿದೆ. ಅದರಲ್ಲೂ ಚಿಕ್ಕಮಗಳೂರಿನ 9 ತಾಲೂಕುಗಳಲ್ಲಿ 7, ಶಿವಮೊಗ್ಗದ ಎಲ್ಲ 7 ತಾಲೂಕುಗಳು, ಕೊಡಗಿನ 5ರಲ್ಲಿ 4 ತಾಲೂಕುಗಳು, ಹಾಸನದ 8 ತಾಲೂಕುಗಳಲ್ಲಿ 4, ಕರಾವಳಿಯ ಉಡುಪಿ 7 ತಾಲೂಕುಗಳ ಪೈಕಿ 6, ದಕ್ಷಿಣ ಕನ್ನಡದ 9ರಲ್ಲಿ 4 ತಾಲೂಕುಗಳು, ಉತ್ತರ ಕನ್ನಡದ 12 ತಾಲೂಕುಗಳಲ್ಲಿ 10 ಕಡೆ ಅಂತರ್ಜಲ ಕುಸಿದಿದೆ. ಇಲ್ಲಿ ಇದೇ ಸ್ಥಿತಿ ಮುಂದುವರಿದರೆ, ಭವಿಷ್ಯದಲ್ಲಿ ಗಂಭೀರ ಸಮಸ್ಯೆಗಳಿಗೆ ಎಡೆಮಾಡಿಕೊಡುವ ಸಾಧ್ಯತೆ ಇದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸುತ್ತಾರೆ.  ಪ್ರಸಕ್ತ ಸಾಲಿನಲ್ಲಿ  800ಕ್ಕೂ ಅಧಿಕ ಕೆರೆಗಳಲ್ಲಿ ಹನಿ ನೀರಿಲ್ಲ. ಬಹುತೇಕ ಕೆರೆಗಳಲ್ಲಿ ನೀರಿನ ಸಂಗ್ರಹ ಸಾಮರ್ಥ್ಯದ ಅರ್ಧದಷ್ಟೂ ಇಲ್ಲ ಎಂದು ಸಣ್ಣ ನೀರಾವರಿ ಇಲಾಖೆ ಮೂಲಗಳು ತಿಳಿಸಿವೆ.

100 ತಾಲೂಕುಗಳಲ್ಲಿ ಸಕಾರಾತ್ಮಕ ಬೆಳವಣಿಗೆ ಇದ್ದು, ಅಲ್ಲೆಲ್ಲ ಅಂತರ್ಜಲ ಮಟ್ಟ ಏರಿಕೆ ಕಂಡುಬಂದಿದೆ. ಬೆಳಗಾವಿಯ ಸವದತ್ತಿ, ಬೆಂಗಳೂರು ಗ್ರಾಮಾಂತರದ ಹೊಸಕೋಟೆ, ಹಾಸನದ ಅರಸೀಕೆರೆ ಸಹಿತ ಹಲವೆಡೆ 10 ಮೀಟರ್‌ಗಿಂತ ಹೆಚ್ಚು ಅಂತರ್ಜಲ ಮಟ್ಟ ಏರಿಕೆಯಾಗಿದೆ. ಇದಕ್ಕೆ ಮುಖ್ಯವಾಗಿ ಕೆರೆ ತುಂಬಿಸುವ ಯೋಜನೆಗಳು, ಅಂತರ್ಜಲ ಮರುಪೂರಣ ಕೆಲಸಗಳು ಕಾರಣ ಎಂದೂ ನಿರ್ದೇಶನಾಲಯದ ವರದಿ ತಿಳಿಸಿದೆ.

Advertisement

ಮಲೆನಾಡಲ್ಲಿ ಕುಸಿತ; ಬರದ ನಾಡಲ್ಲಿ ಏರಿಕೆ!:

ಮಲೆನಾಡು ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದರೆ, ಇದಕ್ಕೆ ಪ್ರತಿಯಾಗಿ ಬರದ ನಾಡು ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಗಣನೀಯವಾಗಿ ಏರಿಕೆಯಾಗುವ ಮೂಲಕ ಹುಬ್ಬೇರಿಸುವಂತೆ ಮಾಡಿದೆ!  ಇದು ಕೆರೆ ತುಂಬಿಸುವ ಯೋಜನೆ ಎಫೆಕ್ಟ್. ಕೆ.ಸಿ. ವ್ಯಾಲಿ ಯೋಜನೆ ಅಡಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ತುಂಬಿಸುವ ಕಾರ್ಯ ಕೈಗೆತ್ತಿಕೊಂಡ ಪರಿಣಾಮ ಅಲ್ಲಿನ ಕೆರೆಗಳು ಭರ್ತಿ ಆಗುವುದರ ಜತೆಗೆ ಅಂತರ್ಜಲವೂ ವೃದ್ಧಿಗೊಂಡಿದೆ. ಆಯಾ ಜಿಲ್ಲೆಗಳ ಬಹುತೇಕ ಎಲ್ಲ ತಾಲೂಕುಗಳಲ್ಲೂ ಅಂತರ್ಜಲ ಏರಿಕೆಯಾಗಿದೆ. ಆದರೆ ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ಗರಿಷ್ಠ ಪ್ರಮಾಣದ ಅಂದರೆ 24 ಮೀಟರ್‌ನಷ್ಟು ಪಾತಾಳಕ್ಕಿಳಿದಿದೆ.

ಬೆಂಗಳೂರು ಪೂರ್ವ: 11 ಮೀಟರ್‌ ಕುಸಿತ:

ಬೆಂಗಳೂರು ನಗರ ಜಿಲ್ಲೆಯ 5 ತಾಲೂಕುಗಳ ಪೈಕಿ ನಾಲ್ಕರಲ್ಲಿ ಅಂತರ್ಜಲ ಮಟ್ಟ ಇಳಿಕೆ ಕಂಡಿದ್ದು, ಅದರಲ್ಲೂ ಬೆಂಗಳೂರು ಪೂರ್ವದಲ್ಲಿ 10.80 ಮೀಟರ್‌ ಕುಸಿದಿದೆ! ಈಗಾಗಲೇ ಸ್ವತಃ ಸಿಎಂ ಸಿದ್ದರಾಮಯ್ಯ ಈಚೆಗೆ ನಡೆಸಿದ ನೀರಿನ ಸಮಸ್ಯೆ ಕುರಿತ ಪರಿಶೀಲನಾ ಸಭೆಯಲ್ಲಿ 14 ಸಾವಿರ ಸರಕಾರಿ ಕೊಳವೆಬಾವಿಗಳ ಪೈಕಿ 7 ಸಾವಿರ ಬತ್ತಿವೆ. ಖಾಸಗಿ ಕೊಳವೆಬಾವಿಗಳು ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಅಂತರ್ಜಲದ ಅತಿಯಾದ ಬಳಕೆಯಿಂದ ದಿನದಿಂದ ದಿನಕ್ಕೆ ನಗರದ ಅಂತರ್ಜಲ ಮಟ್ಟ ಕೂಡ ಇಳಿಮುಖವಾಗುತ್ತಿದೆ ಎಂದು ಕಂಡುಬಂದಿದೆ.

ಅಂತರ್ಜಲ ಮಟ್ಟ ಸುಧಾರಣೆಗೆ ಮರುಪೂರಣ ಪ್ರಕ್ರಿಯೆ ಪರಿಣಾಮಕಾರಿಯಾಗಿ ಆಗಬೇಕು. ಇದು ಸಮರ್ಪಕವಾಗಿ ಆಗದಿದ್ದರೆ, ಗಣನೀಯವಾಗಿ ಕುಸಿಯುತ್ತಲೇ ಹೋಗುತ್ತದೆ. ಕೃಷಿಗೆ ಸಾಧ್ಯವಾದಷ್ಟು ಹನಿ ಮತ್ತು ತುಂತುರು ನೀರಾವರಿ ಮೂಲಕ ಮಿತಬಳಕೆ ಆಗಬೇಕು. ಕೆರೆಗಳನ್ನು ತುಂಬಿಸುವ ಕೆಲಸ ಆಗಬೇಕು. ಬಿ.ಜಿ. ರಾಮಚಂದ್ರಯ್ಯ,ನಿರ್ದೇಶಕರು, ಅಂತರ್ಜಲ ನಿರ್ದೇಶನಾಲಯ

ವಿಜಯ ಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next