ಕುಷ್ಟಗಿ: ಸುಣ್ಣ-ಬಣ್ಣಗಳಿಲ್ಲದೇ ಕಳೆಗುಂದಿದ್ದ ಇಲ್ಲಿನ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ) ಇದೀಗ ಪೊಲೀಸ್ ಅಧಿಕಾರಿಯೊಬ್ಬರ ಮುತುವರ್ಜಿಯಿಂದ ಕಂಗೊಳಿಸುತ್ತಿದೆ. ಅಂದದ ಸುಣ್ಣ-ಬಣ್ಣದೊಂದಿಗೆ ಎಲ್ಲರ ಗಮನ ಸೆಳೆಯುತ್ತಿದೆ.
ಹೌದು, ಕೊಪ್ಪಳ ರಸ್ತೆಯಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ನಾಲ್ಕು ದಶಕಷ್ಟು ಹಳೆಯ ಕಟ್ಟಡ ಹೊಂದಿದೆ. 1975-76ರಲ್ಲಿ ನಿರ್ಮಾಣವಾದ ಈ ಕಟ್ಟಡಕ್ಕೆ ಸುಣ್ಣ-ಬಣ್ಣ ಕಂಡಿದ್ದು ಕಡಿಮೆ. ಇತ್ತೀಚೆಗೆ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮಕ್ಕೆ ಹೊಸದಾಗಿ ವರ್ಗವಾಗಿ ಬಂದಿದ್ದ ಜಿ. ಚಂದ್ರಶೇಖರ ಅವರು ಶಾಲೆಗೆ ಆಗಮಿಸಿದ್ದ ವೇಳೆ ಇಲ್ಲಿನ ಅವ್ಯವಸ್ಥೆ ಗಮನಿಸಿದ್ದರು.
600ಕ್ಕೂ ಅಧಿಕ ವಿದ್ಯಾರ್ಥಿನಿಯರು ಓದುತ್ತಿರುವ ಈ ಶಾಲೆಯ ವಾತಾವರಣ ಈ ರೀತಿಯಾದರೆ ಕಲಿಕೆ ಮೇಲೆ ಕಟ್ಟ ಪರಿಣಾಮ ಬಿರುವುದನ್ನು ಯೋಚಿಸಿದ್ದಾರೆ. ಶಾಲಾ ಕಟ್ಟಡಕ್ಕೆ ಹೊಸ ಸ್ವರೂಪ ನೀಡಲು ತಮ್ಮ ಮಿತ್ರ, ಬಳ್ಳಾರಿಯ ಅಂಬೇಡ್ಕರ ವಸತಿ ನಿಲಯಯದ ಸಹಪಾಠಿ, ಕಲಾವಿದ ಬಸವರಾಜ ಬದಾಮಿ ಜೊತೆ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ. ಇದಕ್ಕೆ ಸ್ಪಂದಿಸಿದ ಬಸವರಾಜ, ತಮ್ಮ ಕಲೆ ಮೂಲಕ ಶಾಲೆಯ ಚಿತ್ರಣವನ್ನೇ ಬದಲಿಸಿದ್ದಾರೆ.
ಗೋಡೆಗಳ ಮೇಲೆ ಪಠ್ಯಕ್ಕೆ ಸಂಬಂಧಿಸಿದಂತೆ ವಿಜ್ಞಾನ ಹಾಗೂ ಗಣಿತ ವಿಷಯ, ಸೂರ್ಯ ಮಂಡಲ, ಖಗೋಳ, ಚಂದ್ರಯಾನ ಹೀಗೆ ತರಹೇವಾರಿ ಚಿತ್ರಗಳು, ಕನ್ನಡ ಸಾರಸ್ವತ ಲೋಕದ ಸಾಹಿತಿಗಳು, ದೇಶದ ರಾಷ್ಟ್ರೀಯ ಧ್ವಜ, ಪ್ರಾಣಿ, ಪಕ್ಷಿ ಇತ್ಯಾದಿ ಚಿತ್ರಗಳನ್ನು ಚಿತ್ರಿಸಿದ್ದಾರೆ. ಶಾಲೆಯ ಹೊರ ಆವರಣ, ಒಳ ಆವರಣ ಶಾಲೆಯ ಪ್ರತಿ ಕೊಠಡಿಗಳ ಗೋಡೆ ಮೇಲಿನ ಚಿತ್ರಗಳು ಪಾಠ ಹೇಳುವಂತಿವೆ.
ಈ ಕುರಿತು ಪ್ರತಿಕ್ರಿಯಿಸಿದ ಸಿಪಿಐ ಚಂದ್ರಶೇಖರ ಜಿ. ಅವರು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ವರ್ಗವಾಗಿ ಬಂದಾಗ ಶಾಲೆಯ ಅವ್ಯವಸ್ಥೆ ನೋಡುವಂತಿರಲಿಲ್ಲ. ಮಿತ್ರ ಮತ್ತು ಕಲಾವಿದ ಬಸವರಾಜ ಬದಾಮಿ ಅವರು, ಬಳ್ಳಾರಿ ಜಿಲ್ಲೆಯಲ್ಲಿ ಹಲವು ಶಾಲೆಗಳಲ್ಲಿ ಪ್ರೇರಣಾತ್ಮಕ ಚಿತ್ರಗಳನ್ನು ಚಿತ್ರಿಸಿರುವುದು ಮಾಹಿತಿ ಇತ್ತು. ಕೂಡಲೇ ಅವರನ್ನು ಸಂಪರ್ಕಿಸಿ ಸುಮಾರು 1 ಲಕ್ಷ ರೂ. ವೆಚ್ಚದಲ್ಲಿ ಈ ಕಾರ್ಯ ಕೈಗೊಳ್ಳಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯ ಗೋಡೆಯಲ್ಲೂ ಟ್ರಾಫಿಕ್ ನಿಯಮಾವಳಿಗಳ ಬಗ್ಗೆ ಜಾಗೃತಿ ಮೂಡಿಸುವ ಚಿತ್ರ ಗಳನ್ನು ಚಿತ್ರಿಸಲು ನಿರ್ಧರಿಸಲಾಗಿದೆ ಎಂದರು.