Advertisement

ಜುಲೈನಲ್ಲೂ ಮುಂದುವರಿಯಲಿ ಗೋಶಾಲೆ

01:25 PM Jul 04, 2019 | Naveen |

ಮಂಜುನಾಥ ಮಹಾಲಿಂಗಪುರ
ಕುಷ್ಟಗಿ:
ಮಳೆ ಕೊರತೆಯಾಗಿರುವ ಕಾರಣ ದಿಂದ ತಾಲೂಕಿನಲ್ಲಿನ ಗೋಶಾಲೆಗಳನ್ನು ಜುಲೈ ತಿಂಗಳಾಂತ್ಯದವರೆಗೂ ಮುಂದುವರಿಸುವ ಬೇಡಿಕೆ ಅನ್ನದಾತರಿಂದ ವ್ಯಕ್ತವಾಗಿದೆ.

Advertisement

ಸರ್ಕಾರ ಕುಷ್ಟಗಿ ತಾಲೂಕು ಬರಗಾಲ ಪೀಡಿತವೆಂದು ಘೋಷಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಕಲಕೇರಿಯ ಸಾಮಾಜಿಕ ಅರಣ್ಯ ಇಲಾಖೆಯ ಸಸ್ಯಪಾಲನಾ ಕ್ಷೇತ್ರದಲ್ಲಿ ಫೆಬ್ರುವರಿ 4ರಿಂದ ಗೋಶಾಲೆ ಆರಂಭಿಸಲಾಗಿತ್ತು. ಸರ್ಕಾರದ ಮಾರ್ಗಸೂಚಿ ಅನ್ವಯ ಏಪ್ರಿಲ್ ತಿಂಗಳವರೆಗೆ ಗೋಶಾಲೆ ಸೇವೆ ನಿಗದಿಗೊಳಿಸಲಾಗಿತ್ತು. ಆದರೆ ಸಕಾಲಿಕವಾಗಿ ಮಳೆಯಾಗದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವಾಸ್ತವ ಪರಿಸ್ಥಿತಿ ಅವಲೋಕಿಸಿ, ಜೂನ್‌ ತಿಂಗಳವರೆಗೂ ವಿಸ್ತರಿಸಲಾಗಿದೆ. ಇದೀಗ ಜೂನ್‌ ತಿಂಗಳ ಗತಿಸಿದರೂ ಮಳೆಯಾಗಿಲ್ಲ. ಆರಿದ್ರಾ ಮಳೆಯ ದಿನಗಳಲ್ಲೂ ಮಳೆ ಕೊರತೆ ಎದುರಿಸುವಂತಾಗಿದೆ. ಸಮರ್ಪಕವಾದ ಮಳೆ, ಮೇವಿನ ವ್ಯವಸ್ಥೆಯಾಗುವರೆಗೂ ಗೋಶಾಲೆ ಮುಂದುವರಿಸಬೇಕು ಎನ್ನುವುದು ರೈತಾಪಿ ವರ್ಗದ ಬೇಡಿಕೆ ಇದೆ. ಗೋಶಾಲೆ ಸೇವೆ ಏಕಾಏಕಿ ಸ್ಥಗಿತಗೊಳಿಸಿದರೆ ಮುಂದೇನು? ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.

ಬರಗಾಲದ ಮೇವಿನ ಕೊರತೆ ಸಂದರ್ಭದಲ್ಲಿ ಕಲಕೇರಿಯ ಗೋಶಾಲೆ ತಮ್ಮ ಜಾನುವಾರುಗಳಿಗೆ ಇಲ್ಲಿಯವರೆಗೂ ಆಸರೆಯಾಗಿದೆ. ಮಳೆಗಾಲದ ಆರಂಭವಾದರೂ ಮಳೆ ಇಲ್ಲದ ಕಾರಣ ಎಲ್ಲಿಯೂ ಹಸಿರು ಮೇವು ಇಲ್ಲ, ಮೇವಿನ ಕೊರತೆ ಇದ್ದು, ಜುಲೈ ತಿಂಗಳವರೆಗೂ ಮುಂದುವರಿಸಿದರೆ ಒಳ್ಳೆಯದು. ಸರ್ಕಾರ ಏನು ಮಾಡಲಿದೆಯೋ ಗೊತ್ತಿಲ್ಲ ಎಂದು ತೋಪಲಕಟ್ಟಿಯ ಮುತ್ತಣ್ಣ ಗೌಡ್ರು, ಯಮನಪ್ಪ ಬಲಕುಂದಿಮ ಬಾಲಪ್ಪ ಗುಗ್ಗರಿ, ಬಸಮ್ಮ ಬಳ್ಳೋಳ್ಳಿ ಆತಂಕ ವ್ಯಕ್ತಪಡಿಸಿದರು.

ಮೇವಿನ ಕೊರತೆ: ಕಲಕೇರಿ ಗೋಶಾಲೆಗೆ ಎರಡ್ಮೂರು ದಿನಕ್ಕೊಮ್ಮೆ ಮೂರು ಟನ್‌ ಭತ್ತದ ಹುಲ್ಲು ಬರುತ್ತಿದ್ದು, ಇಲ್ಲಿರುವ 140ರಿಂದ 150 ಜಾನುವಾರುಗಳಿಗೆ ಎರಡ್ಮೂರು ದಿನಕ್ಕೆ ಸಾಕಾಗುತ್ತಿದೆ. ಕಳೆದ ಮೂರ್‍ನಾಲ್ಕು ದಿನಗಳಿಂದ ಮೇವು ಬಂದಿಲ್ಲ ಆದರೂ ಅಲ್ಪಸ್ವಲ್ಪ ಮಳೆಗೆ ನೆನೆದ ಮೇವು ಒಣಗಿಸಿ ಜಾನುವಾರುಗಳಿಗೆ ಹಾಕುತ್ತಿದ್ದು, ಇದು ಬಿಟ್ಟರೆ ಮೇವಿಲ್ಲ. ಕಳೆದ ವರ್ಷದ ಬರಗಾಲದಲ್ಲಿ ಏನೂ ಬೆಳೆ ಬರಲಿಲ್ಲ, ಈ ವರ್ಷವೂ ತೀರ ಕನಿಷ್ಠವಾಗಿದೆ. ಮನೆಯಲ್ಲಿದ್ದರೆ ದನಕರುಗಳಿಗೆ ಮೇವಿಲ್ಲ ಗೋಶಾಲೆಗೆ ಹೊಡೆದುಕೊಂಡು ಬರುತ್ತಿದ್ದೇವೆ. ಮಳೆಯಾಗದೇ ಇರುವುದು ಹೊಲದಲ್ಲಿ ಏನೂ ಕೆಲಸ ಇಲ್ಲ, ಜಾನುವಾರುಗಳನ್ನು ಇಲ್ಲಿಗೆ ಹೊಡೆದುಕೊಂಡು ಬಂದು ಮೇಯಿಸಿಕೊಂಡು ಹೋಗುವುದೇ ಕೆಲಸವಾಗಿದೆ ರೈತ ಮಹಿಳೆ ಸಾಲವ್ವ ಚವ್ಹಾಣ ಹೇಳಿಕೊಂಡರು.

ತಾಲೂಕಿನ ಕಲಕೇರಿ ಸೇರಿದಂತೆ ಮೂರೂ ಗೋಶಾಲೆಗಳಿಗೆ ಮೇವು ತರಿಸಲಾಗುತ್ತಿದೆ. ಸದ್ಯ ಗೋಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಇಲ್ಲ. ಮೇಲಾಧಿಕಾರಿಗಳ ಆದೇಶ ಬಂದರೆ ಗೋಶಾಲೆ ಸೇವೆ ಸ್ಥಗಿತಗೊಳಿಸಲಾಗುವುದು.
ಕೆ.ಎಂ. ಗುರುಬಸವರಾಜ್‌,
ತಹಶೀಲ್ದಾರ್‌

Advertisement

ಗೋಶಾಲೆಗೆ ಮೇವು ಬಾರದ ಇರುವುದು ಕಳೆದ ಮೂರು ದಿನಗಳಿಂದು ಅಳಿದುಳಿದ ಮಳೆಯಲ್ಲಿ ನೆನೆದ ಮೇವನ್ನೇ ಹಾಕಲಾಗುತ್ತಿದೆ. ಜಾನುವಾರುಗಳು ನೆನೆದ ಮೇವನ್ನು ತಿನ್ನುತ್ತಿಲ್ಲ.ಅದನ್ನೇ ಬಿಸಿಲಿಗೆ ಒಣಗಿಸಿ ಹಾಕುತ್ತಿದ್ದೇವೆ.
ಸಾಲವ್ವ ಚವ್ಹಾಣ, ರೈತ ಮಹಿಳೆ

ಮಳೆಯಾಗಿ ಮೇವಿನ ಪರಿಪೂರ್ಣ ವ್ಯವಸ್ಥೆಯಾಗುವರೆಗೂ ಗೋಶಾಲೆ ಮುಂದುವರಿಯಲಿವೆ. ಸದ್ಯದ ಪರಿಸ್ಥಿತಿ ಅವಲೋಕಿಸಿ, ಗೋಶಾಲೆಗಳನ್ನು ಜುಲೈ ಅಂತ್ಯದವರೆಗೂ ಮುಂದುವರಿಸಲಾಗುವುದು. ಕಳೆದೆರಡು ದಿನಗಳಿಂದ ಕಲಕೇರಿ ಗೋಶಾಲೆಗೆ ಮೇವು ಸರಬರಾಜು ಆಗದೇ ಇರುವುದು ನನ್ನ ಗಮನಕ್ಕಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಯನ್ನು ಸಂಪರ್ಕಿಸಿ ಮೇವಿನ ವ್ಯವಸ್ಥೆ ಮಾಡಲಾಗುವುದು.
• ಅಮರೇಗೌಡ ಪಾಟೀಲ ಬಯ್ನಾಪೂರ,
ಶಾಸಕ

 

Advertisement

Udayavani is now on Telegram. Click here to join our channel and stay updated with the latest news.

Next