Advertisement

ಕುರಿ ಹಟ್ಟಿಯ ಸೋಲಾರ್ ಬೆಳಕಿನಲ್ಲಿ ಓದಿದ್ದ ಪರಶುರಾಮ್ ಪ್ರಥಮ ದರ್ಜೆಯಲ್ಲಿ ತೇರ್ಗಡೆ

12:21 PM May 20, 2022 | Team Udayavani |

ಕುಷ್ಟಗಿ: ಅಡವಿ ಪ್ರದೇಶದ ಕುರಿ ಹಟ್ಟಿಯ ಸೋಲಾರ್ ಬೆಳಕಿನಲ್ಲಿ ಓದಿದ್ದ ಪರಶುರಾಮ್ ಹಟ್ಟಿ ಗೊಲ್ಲರ್ ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾನೆ.

Advertisement

ತಾಲೂಕಿನ ವೆಂಕಟಾಪೂರ ನಿವಾಸಿ ಸಂಚಾರಿ ಕುರಿಗಾಯಿ ಮಕಾಳಪ್ಪ ಹಟ್ಟಿ ಗೊಲ್ಲರ,ದುರಗವ್ವ ಇವರ ಪುತ್ರ ಪರಶುರಾಮ್ ಕಡು ಬಡತನ, ಮೂಲ ಸೌಕರ್ಯಗಳನ್ನು ನೀಗಿಸಿಕೊಂಡು ಈ ಸಾಧನೆ ಮಾಡಿರುವುದು ವಿಶೇಷವೆನಿಸಿದೆ.

ಮೊರಾರ್ಜಿ ಶಾಲೆಗೆ ಆಯ್ಕೆಯಾಗಿದ್ದ ಪರಶುರಾಮ್ ಗೆ ಅಲ್ಲಿ ಇಂಗ್ಲೀಷ್ ಮಾದ್ಯಮ ಕಲಿಕೆ ಕಠಿಣವಾಗಿದ್ದರಿಂದ 7ನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದ. ಬಳಿಕ ತಂದೆ ಆತನನ್ನು ಕುರಿ ಕಾಯಲು ಕಳಿಸಿದ್ದರು.

ಆದರೆ ಸೈನ್ಯ ಸೇರಬೇಕೆಂಬ ತುಡಿತದಲ್ಲಿ ಕುರಿ ಕಾಯ್ದರೆ ಸೈನ್ಯ ಸೇರಲು ಸಾಧ್ಯವಿಲ್ಲ ಎಂದು 8ನೇ ತರಗತಿಗೆ ಪಾಲಕರನ್ನು ಕಾಡಿ ಬೇಡಿ ಯರಗೇರಾ ಸರ್ಕಾರಿ ಪ್ರೌಢಶಾಲೆ ಸೇರಿಕೊಂಡಿದ್ದ. ಅಲ್ಲಿಂದಲೇ ಭಾನುವಾರ ಹಾಗೂ ಇತರ ರಜೆ ದಿನಗಲ್ಲಿ ಕುರಿ ಕಾಯುತ್ತಾ ಕುರಿ ಹಟ್ಟಿಯಲ್ಲಿ ತಂದೆ ಕೊಡಿಸಿದ್ದ 600 ರೂ. ಸೋಲಾರ್ ಬೆಳಕಿನಲ್ಲಿ ಓದಿದ ಪರಶುರಾಮ್ ಗೆ ಎಸ್ಸೆಸ್ಸೆಲ್ಸಿ ಫಲಿತಾಂಶ ಫಲಶ್ರುತಿ ನೀಡಿದ್ದು, ಸೈನ್ಯ ಸೇರುವ ಕನಸಿಗೆ ಈ ಫಲಿತಾಂಶ ಇನ್ನಷ್ಟು ಹತ್ತಿರವಾಗಿಸಿದೆ.

ಪಿಯುಸಿ ಕೊಪ್ಪಳದ ಗವಿಸಿದ್ದೇಶ್ವರ ಮಠದಲ್ಲಿ ಕಲಿತು, ಅಲ್ಲಿಯೇ ಸೈನಿಕ ತರಭೇತಿ ಪಡೆದು ಸೇನಾ ನೇಮಕಾತಿಯಲ್ಲಿ ಭಾಗವಹಿಸಬೇಕೆಂಬ ಮನದಿಂಗಿತ ವ್ಯಕ್ತಪಡಿಸಿದರು.

Advertisement

ಪರಶುರಾಮ್ ಪ್ರತಿಕ್ರಿಯಿಸಿ ನಮ್ಮ ತಂದೆ ಕುರಿಕಾಯಲು ಕಳಿಸುತ್ತಾರೆ ಎಂದು ಕನ್ನಡ ಶಾಲೆ ಸೇರಿದ್ದೆ. ಕುರಿಗಾರನಾದರೆ ಸೈನ್ಯ ಸೇರಲು ಆಗುತ್ತಿರಲಿಲ್ಲ. ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಯಾಗಿದ್ದೇನೆ. ಮುಂದೆ ಸೈನ್ಯ ಸೇರಿ ದೇಶ ಸೇವೆ ಮಾಡುವೆ ಎಂದರು.

ಅವರ ತಂದೆ ಮಕಾಳಪ್ಪ ಮಾತನಾಡಿ, ನನ್ನ ಮಗನಿಗೆ ಸೇನೆ ಸೇರುವ ಕನಸಿಗೆ ನಾವು ಅಡ್ಡಿ ಆಗಲಿಲ್ಲ. ಕುರಿ ಕಾಯುವ ಕೆಲಸ ಮಾಡಿ ಹತ್ತನೇ ತರಗತಿ ಮುಗಿಸಿದ್ದಾನೆ. ಈಗಲೂ ಪರಶುರಾಮ್ ಮಿಲ್ಟ್ರಿ ಕಟಿಂಗ್ ಇಷ್ಟ ಪಡುತ್ತಿದ್ದು, ಆತನ ಆಸೆಯಂತೆ ಸೇನೆ ಸೇರಿದರೆ ನಮಗೂ ಖುಷಿ ಎಂದರು.

-ಮಂಜುನಾಥ ಮಹಾಲಿಂಗಪುರ (ಕುಷ್ಟಗಿ)

Advertisement

Udayavani is now on Telegram. Click here to join our channel and stay updated with the latest news.

Next