ಕುಷ್ಟಗಿ: ಕನ್ನಡ ಸಾಹಿತ್ಯ ಪರಿಷತ್ತು, ಕೊಪ್ಪಳ ಜಿಲ್ಲಾ ಘಟಕದ ಮಾ.5 ಹಾಗೂ 6 ರಂದು ನಿಗದಿಯಾದ ಹನುಮಸಾಗರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಹ್ವಾನ ಪತ್ರದಲ್ಲಿ ಸಮ್ಮೇಳನದ ವಸತಿ ಸಮಿತಿಗೆ ಮೃತ ವ್ಯಕ್ತಿಯನ್ನು ನೇಮಿಸಿ ಎಡವಟ್ಟು ಸೃಷ್ಟಿಸಿದೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೃತ ವ್ಯಕ್ತಿ ರಾಮಣ್ಣ ಚೌಡಕಿ ಕಲಾವಿದರೊಬ್ಬರ ಹೆಸರು ಸೇರಿಸಿ ಪೇಚಿಗೆ ಸಿಲುಕಿಸಿತ್ತು. ಈ ಪ್ರಮಾದ ಅರಿತಿರುವ ಕಸಾಪ ಅಹ್ವಾನ ಪತ್ರಿಕೆಯಲ್ಲಿ ಮೃತ ರಾಮಣ್ಣ ಚೌಡಕಿ ಹೆಸರು ಅಳಿಸಿ ಹಾಕಿ ಹಂಚಿಕೆಗೆ ಮುಂದಾಗಿದೆ.
ಇದರ ಬೆನ್ನಲ್ಲೆ ಈಗ ಮತ್ತೊಂದು ಪ್ರಮಾದ ಆಗಿರುವುದು ಗುಟ್ಟಾಗಿ ಉಳಿದಿಲ್ಲ.
ಅದೇನೆಂದರೆ ಗೊರೆಬಿಹಾಳ ಶಾಲೆಯ ಮುಖ್ಯ ಶಿಕ್ಷಕ ಶಂಕರಪ್ಪ ನಾಟೇಕರ್ ಕೋವಿಡ್ ಎರಡನೇ ಅಲೆ ಸಂದರ್ಭ ಮೃತಪಟ್ಟಿದ್ದಾರೆ. ಆ ವಿಚಾರ ಎಲ್ಲರಿಗೂ ಗೊತ್ತಿರುವುದಾಗಿದ್ದರೂ ಮೃತ ಮುಖ್ಯ ಶಿಕ್ಷಕನನ್ನು ವಸತಿ ಸಮಿತಿಯ ಪಟ್ಟಿಯಲ್ಲಿ ಸೇರಿಸಿ ಮತ್ತೊಂದು ಎಡವಟ್ಟಿಗೆ ಕಸಾಪ ಕಾರ್ಯವೈಖರಿಯನ್ನು ಪ್ರಶ್ನಿಸುವಂತೆ ಮಾಡಿದೆ.
ಸತ್ತ ವ್ಯಕ್ತಿಗಳನ್ನು ಸಮ್ಮೇಳನದ ಅಹ್ವಾನ ಪತ್ರದಲ್ಲಿ ಉಲ್ಲೇಖಿಸಿ ಸ್ವಯಂಕೃತ ತಪ್ಪಿಗೆ ವಿಪರೀತ ಮುಜಗುರ ಎದುರಿಸುವಂತಾಗಿದೆ.