Advertisement

ರಸ್ತೆ ಪಕ್ಕ-ಹಳ್ಳದ ಬದುವಿನಲ್ಲಿ ಶವಸಂಸ್ಕಾರ

04:01 PM Jan 05, 2020 | Naveen |

ಕುಷ್ಟಗಿ: ತಾಲೂಕಿನ ಹಲವು ಗ್ರಾಮಗಳಲ್ಲಿ ಸ್ಮಶಾನ ಭೂಮಿ ಕೊರತೆ ಮುಂದುವರೆದಿದೆ. ಇದರಿಂದಾಗಿ ರಸ್ತೆಯ ಪಕ್ಕ, ಹಳ್ಳದ ಬದುವಿನಲ್ಲಿ ಶವಸಂಸ್ಕಾರ ಮಾಡುವ ಪರಿಸ್ಥಿತಿ ಇದೆ. ಹೌದು. ತಾಲೂಕಿನಲ್ಲಿ 166 ಗ್ರಾಮಗಲ ಪೈಕಿ 107 ಗ್ರಾಮಗಳಲ್ಲಿ ಪ್ರತ್ಯೇಕ ಸ್ಮಶಾನ ಭೂಮಿಯ ವ್ಯವಸ್ಥೆ ಇದೆ. ಉಳಿದ 57 ಗ್ರಾಮಗಳಿಗೆ ಸ್ಮಶಾನ ಭೂಮಿ ಇಲ್ಲದಿರುವ ಹಿನ್ನೆಲೆಯಲ್ಲಿ ಸೂಕ್ತ ಜಮೀನು ಖರೀದಿಗೆ ತಾಲೂಕಾಡಳಿತ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.

Advertisement

ಜಾಗೆ ಇಲ್ಲ: ಸ್ಮಶಾನ ಭೂಮಿಯ ಕೊರತೆ ಇಂದು ನಿನ್ನೆಯದಲ್ಲ. ತಾಲೂಕಿನ ಮೇಲ್ವರ್ಗದ ಕೆಲವರಿಗೆ ಪ್ರತ್ಯೇಕ ಸ್ಮಶಾನ ಜಮೀನು ಇದೆ. ಬಹುತೇಕ ಕೆಳವರ್ಗ, ಹಿಂದುಳಿದ ವರ್ಗದವರಿಗೆ ಸ್ಮಶಾನ ಭೂಮಿ ಇಲ್ಲ. ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಬೇಡಿಕೆ ಆಧರಿಸಿ, ಸ್ಮಶಾನ ಭೂಮಿ ಖರೀದಿಗೆ ಮುಂದಾದರೂ ವರ್ಷದಲ್ಲಿ
ಬೆರಳೆಣಿಕೆ ಬೇಡಿಕೆ ಬರುತ್ತಿದ್ದು, ಬೇಡಿಕೆಯಾಧರಿಸಿ ಸರಿಯಾದ ದಾಖಲೆಗಳಿದ್ದರೆ ಮಾತ್ರ ಜಮೀನು ಖರೀದಿಗೆ ಮುಂದಾಗುತ್ತಿದೆ.

ಗ್ರಾಮ, ಪಟ್ಟಣಕ್ಕೆ ಹತ್ತಿರವಿರುವ ಜಮೀನು ಅಲಭ್ಯವಾಗಿವೆ. ಬೇಸಾಯಕ್ಕೆ ಜಮೀನು ನೀಡುತ್ತಿದ್ದು, ಸ್ಮಶಾನ ಭೂಮಿಗೆ ಎಂದರೆ ಸರ್ಕಾರಕ್ಕೆ ಜಮೀನು ನೀಡಲು ಹಿಂದೇಟು ಹಾಕಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತರ ಖುಷ್ಕಿ ಜಮೀನು ಸರ್ಕಾರ ನಿಗದಿ ಪಡಿಸಿದ ಮಾರ್ಗಸೂಚಿ ದರದನ್ವಯ ಮೂರು ಪಟ್ಟು ನೀಡಿ ಖರೀದಿಸಲು ಮುಂದಾದರೂ ಸರ್ಕಾರಕ್ಕೆ ಜಮೀನು ಸಿಗುತ್ತಿಲ್ಲ.

ಸತ್ತಾಗ ಸಮಸ್ಯೆ: ಕೆಲವು ಸಣ್ಣಪುಟ್ಟ ಸಮುದಾಯಗಳಿಗೆ ಸ್ವಂತ ಜಮೀನು ಇದ್ದರೆ ಅಂತ್ಯಕ್ರಿಯೆಗೆ ಯಾವೂದೇ ಅಡೆತಡೆಗಳಿಲ್ಲ. ಸ್ವಂತ ಜಮೀನು ಇಲ್ಲದಿದ್ದರೆ ಹಳ್ಳದ ಬದು, ಸರ್ಕಾರದ ಗೋಮಾಳ, ಗಾಂವಠಾಣವೇ ಗತಿಯಾಗಿದೆ. ತಾಲೂಕಿನ ಬಹುತೇಕ ಸಮುದಾಯದವರು ತಮ್ಮ ಕುಟುಂಬದವರು ಮೃತಪಟ್ಟರೆ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸಮಸ್ಯೆ ತೀವ್ರತೆ ಕಂಡು ಬಂದಿಲ್ಲ. ಕೆಲವು ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯದವರ ಅಂತ್ಯಕ್ರಿಯೆಗೆ ಸಮಸ್ಯೆಯಾದರೆ ಸರ್ಕಾರ ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆಹರಿಸಿದ ಪ್ರಕರಣಗಳಾಗಿವೆ.

ಸದ್ಗತಿಗೆ ಸರ್ಕಾರಿ ಜಮೀನು: ತಾಲೂಕಿನ ಎಂ. ಗುಡದೂರು ಗ್ರಾಮದಲ್ಲಿ ಯಾವುದೇ ಸಮುದಾಯಕ್ಕೂ ಸ್ಮಶಾನ ಭೂಮಿಯೇ ಇಲ್ಲ. ಸರ್ಕಾರಿ ಜಾಗೆಯನ್ನು ಬಳಸಿಕೊಳ್ಳಲಾಗಿದೆ. ಈ ಗ್ರಾಮದಲ್ಲಿ ರಾಜಕೀಯ ಪ್ರತಿನಿಧಿಯೊಬ್ಬರು ಸರ್ಕರಿ ಜಮೀನು ಅತಿಕ್ರಮಿಸಿಕೊಂಡಿದ್ದು, ತಮ್ಮ ಸಮುದಾಯಕ್ಕೆ ಸ್ಮಶಾನ ಭೂಮಿ ಬಿಟ್ಟುಕೊಡದಿರುವುದು ಸಮಸ್ಯೆ ಕಾರಣವಾಗಿದೆ.

Advertisement

ಟೆಂಗುಂಟಿ ಗ್ರಾಮದಲ್ಲಿ ಸ್ಮಶಾನ ಭೂಮಿ ಇಲ್ಲದಿರುವ ಹಿನ್ನೆಲೆಯಲ್ಲಿ ರಸ್ತೆಯ ಬದಿಯಲ್ಲಿ ನಿಗದಿತ ಜಾಗೆಯಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಹೂಲಗೇರಾದಲ್ಲಿ ಎಸ್‌ಸಿ ಸಮುದಾಯಕ್ಕೆ ಎರಡು ಎಕರೆ ಜಮೀನು ಇದ್ದು, ಸದರಿ ಜಮೀನಿಗೆ ಚಕ್ಕಡಿ ದಾರಿ ಇದೆ. ಬಿತ್ತನೆ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ದಾರಿಯ ಜಮೀನುದಾರರ ತಕರಾರು ಇಲ್ಲ, ಆದರೆ ಕಳೆಬರಕ್ಕೆ ಈ ದಾರಿಯಲ್ಲಿ ಪ್ರವೇಶ ನಿಷಿದ್ಧವಾಗಿದೆ. ಹೀಗಾಗಿ ಎಸ್‌ಸಿ ಸಮುದಾಯದವರು, ತಮ್ಮ ತಮ್ಮ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡುತ್ತಾರೆ. ಗೋಮಾಳ, ಗಾಂವಠಾಣದಂತಹ ಸರ್ಕಾರಿ
ಜಮೀನು ಇಲ್ಲದಿದ್ದರೆ ಸಮಸ್ಯೆ ಇನ್ನಷ್ಟು ತೀವ್ರವಾಗುತ್ತಿತ್ತು.

ಸ್ಮಶಾನ ಭೂಮಿ ಇಲ್ಲದ ಗ್ರಾಮಗಳಲ್ಲಿ ಗ್ರಾಮಕ್ಕೆ ಹತ್ತಿರುವ, ರಸ್ತೆಯ ಬದಿಯಲ್ಲಿರುವ ಜಮೀನನ್ನು ಸ್ಮಶಾನಕ್ಕಾಗಿ ಮಾರಾಟ ಮಾಡಲು ಮುಂದೆ ಬಂದರೆ ಖುಷ್ಕಿ ಜಮೀನಿನ ಮೂರು ಪಟ್ಟು ದರದಲ್ಲಿ ಸರ್ಕಾರದ ಮಾರ್ಗಸ್ರಚಿಯನ್ವಯ ಖರೀದಿಸಲಾಗುವುದು. ಸರ್ಕಾರಕ್ಕೆ 52 ಗ್ರಾಮಗಳಲ್ಲಿ ಸ್ಮಶಾನ ಭೂಮಿ ಖರೀದಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.
ಎಂ. ಸಿದ್ದೇಶ,
ತಹಶೀಲ್ದಾರ್‌ ಕುಷ್ಟಗಿ
ಎಂ. ಗುಡದೂರು

ಗ್ರಾಮದಲ್ಲಿ ಸ್ಮಶಾನ ಇಲ್ಲ, ನಮ್ಮ ಸಮುದಾಯದವರು ಹಳ್ಳದ ಬದುವಿನಲ್ಲಿ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಸರ್ಕಾರದ 6 ಎಕರೆ ಜಮೀನು ಹಳ್ಳಕ್ಕೆ ಹೊಂದಿಕೊಂಡಿದ್ದರೂ, ಅಂತ್ಯಕ್ರಿಯೆಗೆ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದು, ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ.
ಮಾರುತಿ ವಕೀಲರು,

ಎಂ. ಗುಡದೂರು ಗ್ರಾಮಗಳಲ್ಲಿ ಬಡವರು ಸತ್ತಾಗ ರಸ್ತೆಯ ಪಕ್ಕ, ಹಳ್ಳದ ಬದುವಿನಲ್ಲಿ ಶವ ಸಂಸ್ಕಾರ ಮಾಡುವುದನ್ನು ಸರ್ಕಾರ ತಪ್ಪಿಸಬೇಕಿದೆ. ಅಭಿವೃದ್ಧಿ ಹೆಸರಿನಲ್ಲಿ ರಸ್ತೆ, ಕಟ್ಟಡಕ್ಕೆ ಖಾಸಗಿ ಕಾರ್ಖಾನೆಗಳಿಗೆ ಜಮೀನು ಸ್ವಾಧೀನ ಪಡೆಸಿಕೊಳ್ಳುವಂತೆ ಶವ ಸಂಸ್ಕಾರಕ್ಕಾಗಿ ಜಮೀನು ಸ್ವಾಧಿಧೀನಕ್ಕೆ ತೆಗೆದುಕೊಂಡು ಧರ್ಮಧಾರಿತವಾಗಿ ವಿತರಿಸಬೇಕು.
ಮಂಜುನಾಥ ಕಟ್ಟಿಮನಿ,
ಕುಷ್ಟಗಿ

ಮಂಜುನಾಥ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next