ಕುಷ್ಟಗಿ: ಆಮ್ ಆದ್ಮಿ ಪಾರ್ಟಿ (ಎಎಪಿ) ರಾಜ್ಯ ಪಧಾಧಿಕಾರಿಗಳ ನಡೆ ಬೇಸತ್ತು ಪಕ್ಷಕ್ಕೆ ಸಾಮೂಹಿಕ ರಾಜಿನಾಮೆ ಸಲ್ಲಿಸಿದ್ದಾರೆ.
ಇಲ್ಲಿನ ಹಳೆಯ ಪವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜೀನಾಮೆಯನ್ನು ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರಿಗೆ ಸಲ್ಲಿಸಿದ್ದಾರೆ.
ಮಾರ್ಚ್ 4ರಂದು ದಾವಣಗೇರಾಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಆಗಮಿಸುವ ಒಂದು ದಿನ ಮೊದಲೇ ಎಎಪಿ ಕುಷ್ಟಗಿ ಘಟಕದ ಪಧಾಧಿಕಾರಿಗಳು ಸಾಮೂಹಿಕ ರಾಜಿನಾಮೆ ಸಲ್ಲಿಸಿದ್ದಾರೆ.
ಹಿರಿಯ ವಕೀಲ ಹೊಳಿಯಪ್ಪ ಕುರಿ, ಹುಲಗಪ್ಪ ಚೂರಿ ಅಬ್ದುಲ್ ರಝಾಕ್ ಸುಳ್ಳದ, ಚನ್ನಪ್ಪ ನಾಲಗಾರ, ಶೇಖರಯ್ಯ ಸಂಕೀನ್, ಸುಭಾಷ ಕರಿಗಾರ, ಶರಣಪ್ಪ ಸಜ್ಜನ, ಯಮನೂರಪ್ಪ ಕೋಮಾರ, ಅಜ್ಮೀರ ಕಲಾಲಬಂಡಿ, ರಾಜ ಅಹ್ಮದ್ ವಾಲೀಕಾರ, ಶಾಹೀದ ಕಲಾಲಬಂಡಿ, ಚಮದಪಾಷಾ ದಾವಣಗೇರಾ, ರಾಮಪ್ಪ ಸರೂರು, ಮೈನುದ್ದೀನ ವಾಲೀಕರ ಸಂತೋಷ ಹಂಚಿನಾಳ, ಮಹಾಂತೇಶ ವಾಲೀಕಾರ, ಶರಣು ಹರಿಜನ, ಪರಶುರಾಮ ಹರಿಜನ, ಎಂ.ಡಿ.ಉಸ್ತಾದ, ಲತೀಫ ಮೂಗನೂರು ರಾಜಿನಾಮೆ ನೀಡಿದ್ದಾರೆ.
ಹುಲಗಪ್ಪ ಚೂರಿ ಪ್ರತಿಕ್ರಿಯಿಸಿ, ಎಎಪಿ ಸ್ವಇಚ್ಚೆಯಿಂದ ರಾಜಿನಾಮೆ ಸಲ್ಲಿಸಲಾಗಿದೆ. ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದರೂ ಕುಷ್ಟಗಿ ತಾಲೂಕು ಘಟಕಗಳ ರಚನೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಎಎಪಿಯಲ್ಲಿ ಹಣ ಪಡೆಯುವ ರಾಜಕಾರಣಿಗಳಿರುವ ಹೊರತು ಜನಪರ ಕಾಳಜಿ ಹೊಂದಿರುವ ರಾಜಕಾರಣಿಗಳು ಇಲ್ಲ ಎಂದರು.
ರಾಜ್ಯ ಘಟಕದ ಪಧಾಧಿಕಾರಿಗಳು ವೇತನಕ್ಕಾಗಿ ಕೆಲಸ ಮಾಡುತ್ತಿದ್ದು, ಸಂಘಟನೆಗೆ ಸ್ಪಂದಿಸಿಲ್ಲ. ಚುನಾವಣೆ ಬಳಿಕ ಘಟಕ ರಚನೆ ಬಗ್ಗೆ ಸಲಹೆ ನೀಡಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಸೇರಿದ್ದರಿಂದ ನಾವು ಸೇರಿದ್ದೆವು. ಅವರು ಎಎಪಿ ಗೆ ರಾಜಿನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ನಾವುಗಳು ತಟಸ್ಥರಾಗಿದ್ದು ಮುಂದಿನ ನಡೆ ಚುನಾವಣೆ ಸಂದರ್ಭದಲ್ಲಿ ತಿಳಿಸುವುದಾಗಿ ವಿವರಿಸಿದರು.