ಕುಷ್ಟಗಿ: ತಾಲೂಕಿನ ನೀರಲೂಟಿ ಗ್ರಾಮದಲ್ಲಿ ಕೋತಿಯ ಹುಚ್ಚಾಟಕ್ಕೆ ಜನ ಆತಂಕಗೊಂಡಿದ್ದಾರೆ. ಕೋತಿ ಕಚ್ಚುವಿಕೆ ಮುಂದುವರಿದ ಹಿನ್ನೆಲೆಯಲ್ಲಿ ಜೂ.29ರ ಶನಿವಾರ ಶಾಲೆಗೆ ರಜೆ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕಳೆದ ಜೂನ್ 27 ರಿಂದ ಕೋತಿಯ ಉಪಟಳ ಜಾಸ್ತಿಯಾಗಿದೆ. ಗಿಡ, ಮನೆಯ ಮಾಳಿಗೆಯ ಮೇಲೆ ಕೂರುವ ಕೋತಿ ಜನರ ಮೇಲೆ ಏಕಾಏಕಿ ದಾಳಿ ಮಾಡಿ ಸಿಕ್ಕ ಸಿಕ್ಕಲ್ಲಿ ಕಚ್ಚಿ ಗಾಯಗೊಳಿಸಿದೆ. ಹುಚ್ಚು ಕೋತಿಯ ದಾಳಿಗೆ ಮಕ್ಕಳಿಂದ ಹಿಡಿದು ವೃದ್ದರವರೆಗೆ ಒಟ್ಟು 15 ಜನರಿಗೆ ಗಾಯವಾಗಿದೆ.
ಮಾಬುಸಾಬ ಪಿಂಜಾರ, ದೇವಪ್ಪ ಕಂಬಾರ, ಮಲ್ಲಪ್ಪ ಅಗಸಿ ಮುಂದಿನ, ಅಡಿವೆಪ್ಪ ಚಳ್ಳಾರಿ, ಶಂಕ್ರಮ್ಮ ಬೆಣಕಲ್ ಸೇರಿದಂತೆ ಮೊದಲಾದವರಿಗೆ ಕಚ್ಚಿದ್ದು ತಾವರಗೇರಾ ಸಮುದಾಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಹುಚ್ಚು ಕೋತಿಯನ್ನು ಹಿಡಿಯಲು ಜನರು ಎಷ್ಟೇ ಹರಸಾಹಸ ಪಟ್ಟರೂ ಕೋತಿ ಸೆರೆಯಾಗದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಮೊರೆ ಹೋಗಿದ್ದಾರೆ.
ಏಕಾಏಕಿ ಕೋತಿ ದಾಳಿಗೆ ಜನ ಹೊರಬರಲು ಹಿಂಜರಿಯುತ್ತಿದ್ದು, ಸಾರ್ವಜನಿಕರು ಕೈಯಲ್ಲಿ ಕೋಲು ಹಿಡಿದುಕೊಂಡು ಹೊರಗೆ ತಿರುಗಾಡುತ್ತಿದ್ದಾರೆ. ಬಹುತೇಕ ಮಕ್ಕಳಿಗೆ ಹುಚ್ಚು ಕೋತಿ ದಾಳಿ ಮಾಡಿದ್ದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲಾಗುತ್ತಿಲ್ಲ. ಮಕ್ಕಳ ಮೇಲೆ ಸಂಭವನೀಯ ದಾಳಿಗೆ ಶಾಲೆಗೆ ರಜೆ ನೀಡಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಹುಚ್ಚು ಕೋತಿಯ ದಾಳಿಯ ತೀವ್ರತೆ ಅರಿತ ಅರಣ್ಯ ಇಲಾಖೆ ಬೋನು ಇಟ್ಟು ಸೆರೆ ಹಿಡಿಯಲು ಮುಂದಾಗಿದ್ದಾರೆ.