Advertisement

ಕುಶಾಲನಗರ ಕಳ್ಳತನ ಪ್ರಕರಣ : ಚಿನ್ನಾಭರಣ, ದ್ವಿಚಕ್ರ ವಾಹನ ವಶ

10:09 AM Nov 12, 2021 | Team Udayavani |

ಮಡಿಕೇರಿ: ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಬಸವೇಶ್ವರ ಬಡಾವಣೆ, ಕಾವೇರಿ ಬಡಾವಣೆಯಲ್ಲಿ ನಡೆದ ಮನೆಗಳ್ಳತನ ಹಾಗೂ ದಂಡಿನಪೇಟೆಯಲ್ಲಿ ನಡೆದ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಬಂಧಿತ ಆರೋಪಿ ಕುಶಾಲನಗರದ ವ್ಯಕ್ತಿಯಾಗಿದ್ದು, 2 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಹಾಗೂ 1.10 ಲಕ್ಷ ರೂ ಮೌಲ್ಯದ ಎರಡು ದ್ವಿಚಕ್ರ ವಾಹನಗಳನ್ನು ಕುಶಾಲನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕುಶಾಲನಗರದ ಬಡಾವಣೆಗಳಲ್ಲಿ ಬೀಗ ಹಾಕಿರುವ ಮನೆಗಳನ್ನು ಗಮನಿಸಿ ಕಳ್ಳತನ ಮಾಡಿರುವ 2 ಪ್ರಕರಣಗಳು ಹಾಗೂ ಮನೆಯ ಮುಂಭಾಗ ಬೀಗ ಹಾಕದೇ ನಿಲ್ಲಿಸಿರುವ ವಾಹನ ಕಳವು ಪ್ರಕರಣ ದಾಖಲಾಗಿತ್ತು. ನ.10 ರಂದು ರಾತ್ರಿ ಗಸ್ತಿನಲ್ಲಿದ್ದ ಎಎಸ್‌ಐ ಮಂಜುನಾಥ ಹಾಗೂ ಸಿಬ್ಬಂದಿ ಅರುಣ್ ಕುಮಾರ್ ಅವರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಕೆಎ.12 ಯು.8989 ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯ ನಡೆಯ ಬಗ್ಗೆ ಸಂಶಯ ವ್ಯಕ್ತವಾಗಿ ತೀವ್ರ ತಪಾಸಣೆ ನಡೆಸಿದರು.

ಈ ಸಂದರ್ಭ ವಾಹನದಲ್ಲಿ ಮನೆಗಳ್ಳತನ ಮಾಡಲು ಬಳಸುವ ಆಯುಧ ಕಂಡು ಬಂದ ಹಿನ್ನೆಲೆಯಲ್ಲಿ ಆತನನ್ನು ವಿಚಾರಣೆಗೊಳಪಡಿಸಿದಾಗ ಕುಶಾಲನಗರ ವ್ಯಾಪ್ತಿಯ ಕಳ್ಳತನದ ಮೂರು ಪ್ರಕರಣಗಳಲ್ಲಿ ತಾನು ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಂಧಿತ ಆರೋಪಿ ಕುಶಾಲನಗರದವನೇ ಆಗಿದ್ದು, ತನಿಖೆ ಮುಂದುವರೆದಿರುವುದರಿಂದ ಹೆಸರನ್ನು ಬಹಿರಂಗ ಪಡಿಸುತ್ತಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಫ್ಯಾಮಿಲಿ ಪ್ಯಾಕೇಜ್‌ ನಲ್ಲಿ ‘ಪ್ರೇಮಂ ಪೂಜ್ಯಂ’: ಸಿಲ್ವರ್‌ ಫ್ರೇಮ್‌ ನಲ್ಲಿ ಪ್ರೇಮ್‌ ಚಿತ್ರ

Advertisement

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಹಾಗೂ ಸೋಮವಾರಪೇಟೆ ಡಿವೈಎಸ್‌ಪಿ ಹೆಚ್.ಎಂ.ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಎಂ.ಮಹೇಶ್ ನೇತೃತ್ವದಲ್ಲಿ, ಠಾಣಾಧಿಕಾರಿ ಮಾದೇಶ್, ಎಎಸ್‌ಐ ಮಂಜುನಾಥ್, ಗೋಪಾಲ್, ಸಿಬ್ಬಂದಿಗಳಾದ ಪ್ರಕಾಶ್, ಟಿ.ಎಸ್.ಸಜಿ, ಅರುಣ್ ಕುಮಾರ್, ರಂಜಿತ್, ಸೌಮ್ಯ, ಚಾಲಕರುಗಳಾದ ಶೇಷಪ್ಪ, ಕೊಡಗು ಜಿಲ್ಲಾ ಸಿಡಿಆರ್ ವಿಭಾಗದ ಸಿಬ್ಬಂದಿಗಳಾದ ರಾಜೇಶ್, ಗಿರೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಯಶಸ್ವೀ ಕಾರ್ಯಾಚರಣೆ ನಡೆಸಿ ಕಳ್ಳತನ ಪ್ರಕರಣವನ್ನು ಭೇದಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಎಸ್‌ಪಿ ಕ್ಷಮಾಮಿಶ್ರ ನಗದು ಬಹುಮಾನ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next