ಮಡಿಕೇರಿ: ಕೃಷಿಕರಿಗೆ ಉಪಟಳ ನೀಡಿದ ಕಾರಣಕ್ಕೆ ಸೆರೆಯಾಗಿ ಕುಶನಾಗಿ ಮಾರ್ಪಟ್ಟು ಅನಂತರ ಪರಿಸರವಾದಿಗಳ ಒತ್ತಾಯಕ್ಕೆ ಮಣಿದು ಕಾಡು ಸೇರಿದ್ದ ಕಾಡಾನೆ ಮತ್ತೆ ಮರಳಿದೆ.
2018ರಲ್ಲಿ ಚೆಟ್ಟಳ್ಳಿ ಸಮೀಪದ ಕಂಡಕರೆಯಲ್ಲಿ ಕೃಷಿಕರಿಗೆ ತೊಂದರೆ ನೀಡುತ್ತಿದ್ದ ಕಾಡಾನೆಯನ್ನು ಸೆರೆಹಿಡಿದು ದುಬಾರೆ ಸಾಕಾನೆ ಶಿಬಿರದಲ್ಲಿ ಪಳಗಿಸಿ ಕುಶ ಎಂದು ಹೆಸರಿಡ ಲಾಗಿತ್ತು. 2019ರಲ್ಲಿ ಮದವೇರಿದ ಕುಶ ಶಿಬಿರದಿಂದ ತಪ್ಪಿಸಿಕೊಂಡು ಅರಣ್ಯದೊಳಗೆ ಸೇರಿಕೊಂಡಿತ್ತು. ವರ್ಷ ಉರುಳಿದರೂ ಶಿಬಿರಕ್ಕೆ ಕಾಲಿಡಲಿಲ್ಲ.
ಹೀಗಾಗಿ ಅರಣ್ಯ ಇಲಾಖೆಯ ಸಿಬಂದಿ ತಂಡೋಪತಂಡವಾಗಿ ಹುಡು ಕಾಡಿ ದಾಗ ಕಾಡಾನೆಗಳ ಹಿಂಡಿನಲ್ಲಿ ಕುಶ ಕಂಡು ಬಂದಿತ್ತು. ಅರಣ್ಯ ಸಿಬಂದಿ ಹರಸಾಹಸ ಪಟ್ಟು ಕುಶನನ್ನು ಮರಳಿ ಸೆರೆ ಹಿಡಿದು ದುಬಾರೆ ಸಾಕಾನೆ ಶಿಬಿರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು.
ಆದರೆ ರಾಷ್ಟ್ರೀಯ ಪರಿಸರವಾದಿಗಳು ವನ್ಯಜೀವಿ ಪ್ರೇಮದ ಕಾರಣ ನೀಡಿ ಮತ್ತು ಪಳಗಿಸುವ ಸಂದರ್ಭ ಹಿಂಸಿಸಲಾಗುತ್ತಿದೆ ಎಂದು ಆರೋಪಿಸಿ ಕುಶನನ್ನು ಮತ್ತೆ ಅರಣ್ಯ ಪ್ರದೇಶಕ್ಕೆ ಬಿಡಬೇಕೆಂದು ಕಾನೂನಾತ್ಮಕ ಹೋರಾಟ ನಡೆಸಿ ಜಯಶಾಲಿಗಳಾಗಿದ್ದರು. ಅನಿವಾರ್ಯವಾಗಿ ಅರಣ್ಯ ಇಲಾಖೆ ಸಾಕಾನೆ ಕುಶನನ್ನು 2021 ಜೂನ್ ತಿಂಗಳಿನಲ್ಲಿ ಬಂಡೀಪುರ ಅರಣ್ಯಕ್ಕೆ ಬಿಟ್ಟು ಬಂದಿತ್ತು.
ಇದೀಗ 1 ವರ್ಷದ ಬಳಿಕ ಕುಶ ಮತ್ತೆ ದುಬಾರೆ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದಾನೆ. ಆತನಿಗೆ ಅಳವಡಿಸಿದ್ದ ರೇಡಿಯೋ ಕಾಲರ್ ನೀಡಿದ ಮಾಹಿತಿಯಾಧರಿಸಿ ಅರಣ್ಯ ಸಿಬಂದಿ ಸ್ಥಳಕ್ಕೆ ಧಾವಿಸಿದಾಗ ದುಬಾರೆ ಸಾಕಾನೆ ಶಿಬಿರದ ಸಮೀಪವೇ ಕುಶ 4ಕಾಡಾನೆ ಸಂಗಾತಿಗಳೊಂದಿಗೆ ಸ್ವತ್ಛಂದವಾಗಿರುವುದು ಕಂಡು ಬಂದಿದೆ.
ತಾನು ಪಳಗಿದ ಸಾಕಾನೆ ಶಿಬಿರದ ಮೇಲಿನ ಅಭಿಮಾನ ದಿಂದ ಸಾವಿರಾರು ಕಿ.ಮೀ. ದೂರ ಕ್ರಮಿಸಿ ಮತ್ತೆ ಕುಶ ದುಬಾರೆಗೆ ಮರಳಿರಬಹುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ವಿಶ್ಲೇಷಿಸಿದ್ದಾರೆ. ಸುತ್ತಮುತ್ತಲ ಪ್ರಾಣಿ ಪ್ರಿಯರು ಕುಶನನ್ನು ಕಂಡು ಹರ್ಷಗೊಂಡಿದ್ದಾರೆ.