ಬೆಳಗಾವಿ: ಇಲ್ಲಿಯ ಯುವರಂಗ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಹಿರಿಯ ಸಾಹಿತಿ ದಿ.ಚಂದ್ರಕಾಂತ ಕುಸನೂರ ವಿರಚಿತ ಅಸಂಗತ ನಾಟಕ ವಿದೂಷಕದ ಪ್ರದರ್ಶನ ಕುಮಾರ ಗಂಧರ್ವ ಮಂದಿರ ಆವರಣದಲ್ಲಿ ನಡೆಯಿತು.
ರಂಗಕರ್ಮಿ ಬಾಬಾಸಾಹೇಬ ಕಾಂಬಳೆ ನಿರ್ದೇಶನದಲ್ಲಿ ಮೂಡಿ ಬಂದ ಈ ನಾಟಕ ಪ್ರೇಕ್ಷಕರ ಮನಸೂರೆಗೊಳಿಸಿ ಅವರನ್ನು ನಗೆಗಡಲಲ್ಲಿ ತೇಲಿಸುವಲ್ಲಿ ಯಶಸ್ವಿಯಾಯಿತು. ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದ ಬೆಳಗಾವಿಯ ಅಣ್ಣಾ ಹಜಾರೆ ಖ್ಯಾತಿಯ ಗಾಂಧೀವಾದಿ ಶಿವಾಜಿ ಕಾಗಣಿಕರ ಅವರು, ಸಮಾಜವದಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಲು ಇಂತಹ ನಾಟಕಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಇಲ್ಲದಿದ್ದರೆ ಸಮಾಜ ಮಲಗಿದಲ್ಲಿಯೇ ಇರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮಾತನಾಡಿ, ಕಸವನ್ನು ರಸ ಮಾಡುವ ಶಕ್ತಿ ಕಲಾವಿದರಿಗೆ ಇರುತ್ತದೆ. ಕಲಾವಿದರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಯೋಜನೆಗಳನ್ನು ಮತ್ತು ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಆಧುನಿಕತೆಗೆ ಕಲೆಗಳು ಸೊರಗುತ್ತಿವೆ ಎನ್ನುವ ಮನೋಭಾವ ಬೇಡ ಎಂದು ಹೇಳಿದರು.
ಸಾಹಿತಿ ರಾಮಕೃಷ್ಣ ಮರಾಠೆ ಮಾತನಾಡಿ, ಚಂದ್ರಕಾಂತ ಕುಸನೂರ 30ಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದಾರೆ. ವಿದೂಷಕ ಎಂಬುದು ಅಸಂಗತ ನಾಟಕ. ಅಸಂಗತ ಎನ್ನುವ ಪದವನ್ನು ಕನ್ನಡಕ್ಕೆ ಕೊಟ್ಟವರೇ ಕುಸನೂರ ಅವರು. ಕೊರೊನಾ ಕಾಲದಲ್ಲಿ ಕುಸನೂರ ಅವರು ಎಲ್ಲರನ್ನು ಅಗಲಿದರು.ನಾಟಕದ ಈ ಪ್ರದರ್ಶನ ಅವರಿಗೆ ನೀಡಲಾಗುತ್ತಿರುವ ನಿಜವಾದ ಶೃದ್ಧಾಂಜಲಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೆ„ದ ವಿನಾಯಕ ಕೇಸರಕರ, ಕಿರಣ ಮಾಳಣ್ಣವರ, ಮಹಾದೇವ ಮುಕಾಶಿ, ಮಹಾಬಳೇಶ್ವರ ಸಾಬಣ್ಣವರ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಚಂದ್ರಕಾಂತ ಕುಸನೂರ ಹಾಗೂ ಯುವರಂಗವನ್ನು ಅಗಲಿರುವ ರಂಗಕರ್ಮಿ ದಿಲಾವರ ನದಾಫ ಹಾಗೂ ನಟ ಚೇತನ ಮಾಳಿ ಅವರಿಗೆ ಶƒದ್ಧಾಂಜಲಿ ಅರ್ಪಿಸಲಾಯಿತು.
ಇದನ್ನೂ ಓದಿ : ಶಾಸಕರ ತಾಯಿ ಕೈಗೆ ಪಂಚಾಯತ್ ಚುಕ್ಕಾಣಿ
ಪತ್ರಕರ್ತ ಮುರುಗೇಶ ಶಿವಪೂಜಿ, ಅಶೋಕ ರೆಡ್ಡಿ, ಪ್ರೊ. ವಿಜಯಕುಮಾರ ಜವರೆ, ಅನಿಲ ಕಾಂಬಳೆ, ನಂದಾದೀಪಾ ಸಾಯನಾಯ್ಕ ಮೊದಲಾದವರು ಉಪಸ್ಥಿತರಿದ್ದರು. ಕಲಾವಿದರಾದ ಕಿರಣ ಉಪ್ಪಾರ, ಭಾರತಿ ಪಾಟೀಲ, ವಿನೋದ, ವಿಶ್ವನಾಥ, ಶಿವಕುಮಾರ, ಬಸವರಾಜ, ಪ್ರೇಮಾ ಮತ್ತು ಕ್ರಿಸ್ತಾ ತಮ್ಮ ಉತ್ತಮ ನಟನೆಯ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಬಸವರಾಜ ತಳವಾರ ನಿರೂಪಿಸಿದರು.