ಢಾಕಾ: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಶ್ರೀಲಂಕಾದ ಆಟಗಾರ ಕುಸಾಲ್ ಮೆಂಡಿಸ್ ಗೆ ಎದೆನೋವು ಕಾಣಿಸಿಕೊಂಡಿದೆ. ಫೀಲ್ಡಿಂಗ್ ಮಾಡುತ್ತಿದ್ದ ಕುಸಾಲ್ ಮೆಂಡಿಸ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್‌ನ ಮೊದಲನೇ ದಿನದಂದು ಫೀಲ್ಡಿಂಗ್ ಮಾಡುತ್ತಿದ್ದ ಕುಸಾಲ್ ಮೆಂಡಿಸ್ ಎದೆಯನ್ನು ಹಿಡಿದು ಅಸ್ವಸ್ಥರಾಗಿ ಕಾಣಿಸಿಕೊಂಡರು. ಬಳಿಕ ಅವರನ್ನು ಮೈದಾನದಿಂದ ಹೊರಕ್ಕೆ ಕರೆದೊಯ್ದರು. ನಂತರ ಕುಸಾಲ್ ಮೆಂಡಿಸ್ ರನ್ನು ಢಾಕಾದ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ವರದಿ ತಿಳಿಸಿದೆ.
ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕುಸಾಲ್ ಮೆಂಡಿಸ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಮೊದಲ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಬಾರಿಸಿದ್ದ ಕುಸಾಲ್ ಎರಡನೇ ಇನ್ನಿಂಗ್ಸ್ ನಲ್ಲೂ 48 ರನ್ ಗಳಿಸಿದ್ದರು. ಸೋಲುವ ಸ್ಥಿತಿಯಲ್ಲಿದ್ದ ತಂಡವನ್ನು ಡ್ರಾದೆಡೆಗೆ ಸಾಗುವಂತೆ ಮಾಡಲು ಕುಸಾಲ್ ಇನ್ನಿಂಗ್ಸ್ ಸಹಕಾರಿಯಾಗಿತ್ತು.
ಇದನ್ನೂ ಓದಿ:ಐಪಿಎಲ್ ಪ್ಲೇ ಆಫ್ ಗೆ ವರುಣನ ಕಾಟ; ಗಾಳಿಗೆ ಹಾರಿ ಹೋಯ್ತು ಈಡನ್ ಗಾರ್ಡನ್ ನ ಹೊದಿಕೆ!
ಶ್ರೀಲಂಕಾ ಬೌಲರ್ ಗಳ ಉರಿ ದಾಳಿಗೆ ಬಾಂಗ್ಲಾ ಆರಂಭಿಕ ಆಘಾತ ಅನುಭವಿಸಿತು. ಕೇವಲ 24 ರನ್ ಆಗುವಷ್ಟರಲ್ಲಿ ಬಾಂಗ್ಲಾದ ಐದು ಮಂದಿ ಬ್ಯಾಟರ್ ಗಳು ಪೆವಿಲಿಯನ್ ಸೇರಿಯಾಗಿತ್ತು. ಅದರಲ್ಲಿ ಮೂವರದ್ದು ಶೂನ್ಯ ಸಂಪಾದನೆ. ಆದರೆ ಆರನೇ ವಿಕೆಟ್ ಗೆ ಜೊತೆಯಾದ ಮುಶ್ಷಿಕರ್ ರಹೀಂ ಮತ್ತು ಲಿಟನ್ ದಾಸ್ ಅಜೇಯ 241 ರನ್ ಗಳಿಸಿದ್ದಾರೆ. 82 ಓವರ್ ಮುಗಿದ ವೇಳೆ ಬಾಂಗ್ಲಾದೇಶ ತಂಡ ಐದು ವಿಕೆಟ್ ಗೆ 265 ರನ್ ಗಳಿಸಿದೆ. ರಹೀಂ ಅಜೇಯ 112 ರನ್ ಗಳಿಸಿದರೆ, ಲಿಟನ್ ದಾಸ್ ಅಜೇಯ 128 ರನ್ ಬಾರಿಸಿದ್ದಾರೆ