– ಹೀಗೆ ಹೇಳಿ ಪಕ್ಕದಲ್ಲಿ ಕುಳಿತಿದ್ದ ನಿರ್ಮಾಪಕ ಮುನಿರತ್ನ ಅವರತ್ತ ನೋಡಿದರು ನಿರ್ದೇಶಕ ನಾಗಣ್ಣ. ಅವರು ಹೀಗೆ ಹೇಳಲು ಕಾರಣ “ಕುರುಕ್ಷೇತ್ರ’ದಿಂದ ಬಹುತಾರಾಗಣದ ಸಿನಿಮಾವನ್ನು ನಿರ್ಮಾಪಕ ಮುನಿರತ್ನ ನಿಭಾಯಿಸಿದ ರೀತಿ. ಅದೇ ಕಾರಣದಿಂದ ಅವರನ್ನು ಹೀರೋ ಅಂದಿದ್ದು. ನಿರ್ದೇಶಕ ನಾಗಣ್ಣ ಅವರಿಗೆ “ಕುರುಕ್ಷೇತ್ರ’ ಮತ್ತೂಂದು ಹೊಸ ಅನುಭವವಂತೆ. ಬಹುತಾರಾಗಣದ ಅದ್ಧೂರಿ ಚಿತ್ರವನ್ನು ನಿರ್ದೇಶಿಸುವಲ್ಲಿ ಕಲಾವಿದರು, ತಂತ್ರಜ್ಞರು ಕೊಟ್ಟ ಪ್ರೋತ್ಸಾಹವನ್ನು ಮರೆಯುವಂತಿಲ್ಲ ಎಂದರು. ಇನ್ನು, ಅಂಬರೀಶ್ ಅವರು ಅನಾರೋಗ್ಯವಿದ್ದರೂ ಬಂದು ತಮ್ಮ ಚಿತ್ರೀಕರಣದ ಜೊತೆಗೆ ತಮ್ಮ ಡಬ್ಬಿಂಗ್ ಕೂಡಾ ಮುಗಿಸಿಕೊಟ್ಟ ಬಗ್ಗೆ ಹೇಳಿದರು ನಾಗಣ್ಣ. ಚಿತ್ರ 2ಡಿ ಹಾಗೂ 2ಡಿಯಲ್ಲಿ ತಯಾರಾಗಿದ್ದು, 3ಡಿಯಲ್ಲಿ ಯಾವುದೇ ತೊಂದರೆಯಾಗದಂತೆ ಅದಕ್ಕೆ ಬೇಕಾದ ತಂತ್ರಜ್ಞಾನದೊಂದಿಗೆ ಚಿತ್ರೀಕರಿಸಲಾಗಿದೆ ಎಂದರು.
Advertisement
ನಿರ್ಮಾಪಕ ಮುನಿರತ್ನ ಈ ಚಿತ್ರವನ್ನು ಆಗಸ್ಟ್ 09 ರಂದು ತೆರೆಕಾಣಿಸಲು ಮುಂದಾಗಿದ್ದಾರೆ. ಚಿತ್ರ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ತಯಾರಾಗಿದ್ದು, ಏಕಕಾಲಕ್ಕೆ ವಿಶ್ವದಾದ್ಯಂತ ಎಲ್ಲಾ ಭಾಷೆಗಳಲ್ಲೂ ಬಿಡುಗಡೆಯಾಗಲಿದೆಯಂತೆ. ಚಿತ್ರ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಿಗೆ ಡಬ್ ಆಗಿದೆ. ಚಿತ್ರದ ಪಾತ್ರಗಳ ಧ್ವನಿಗೆ ಹೊಂದಿಕೆಯಾಗುವವರಿಂದಲೇ ಡಬ್ಬಿಂಗ್ ಮಾಡಿಸಲಾಗಿದೆಯಂತೆ. ಪಾತ್ರಗಳ ಮೂಲ ಧ್ವನಿಗೆ ಡಬ್ಬಿಂಗ್ ಹೊಂದಿಕೆಯಾಗದೇ ಇದ್ದರೆ ಚೆನ್ನಾಗಿರುವುದಿಲ್ಲ ಎಂಬ ಕಾರಣಕ್ಕೆ ಪಾತ್ರಕ್ಕೆ ಹೊಂದಿಕೆಯಾಗುವವರಿಂದಲೇ ಡಬ್ಬಿಂಗ್ ಮಾಡಿಸಲಾಗಿದೆಯಂತೆ. ಇನ್ನು, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ “ಕುರುಕ್ಷೇತ್ರ’ ಚಿತ್ರ ಇಷ್ಟೊತ್ತಿಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ, ತಡವಾಗಿ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಇದಕ್ಕೆ ಕಾರಣ ಗ್ರಾಫಿಕ್ಸ್ ಕೆಲಸ ಎನ್ನುತ್ತಾರೆ. ಚಿತ್ರದಲ್ಲಿ ತುಂಬಾ ಗ್ರಾಫಿಕ್ ಕೆಲಸ ಇದ್ದ ಕಾರಣ ಚಿತ್ರ ತಡವಾಗಿದೆಯೇ ಹೊರತು, ಬೇರೆ ಯಾವುದೇ ಕಾರಣದಿಂದಲ್ಲ ಎನ್ನುವುದು ಚಿತ್ರತಂಡದ ಮಾತು. ನಿರ್ದೇಶಕ ನಾಗಣ್ಣ ಅವರ “ಸಂಗೊಳ್ಳಿ ರಾಯಣ್ಣ’ ಚಿತ್ರ ನೋಡಿ, “ಕುರುಕ್ಷೇತ್ರ’ ಚಿತ್ರಕ್ಕೆ ಆಯ್ಕೆ ಮಾಡಿದ್ದಾಗಿ ಹೇಳಿದರು ಮುನಿರತ್ನ.
ಚಿತ್ರದ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆ ಪಡೆದಿದ್ದು, ಚಿತ್ರ ಮೂಡಿಬಂದಿರುವ ಹಾಗೂ ಹಾಡುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.