ಬೇಕಾದ ಪೂರ್ವ ಸಿದ್ಧತೆ ಇದ್ದರೆ ನೀವು ಕಂಡ ಕನಸನ್ನು ನನಸು ಮಾಡೋದು ಸುಲಭ. ‘ಕುರುಕ್ಷೇತ್ರ’ ಚಿತ್ರ ಕೂಡಾ ನಿರ್ಮಾಪಕ ಮುನಿರತ್ನ ಅವರ ಕನಸು. ‘ಕುರುಕ್ಷೇತ್ರ’ ಸಿನಿಮಾ ಮಾಡಬೇಕೆಂಬುದು ಮುನಿರತ್ನ ಅವರ ಇವತ್ತಿನ ಕನಸಲ್ಲ. 2007ರ ಕನಸು. ಅಂದು ದರ್ಶನ್ ಜೊತೆ ‘ಅನಾಥರು’ ಸಿನಿಮಾ ಮಾಡುವಾಗಲೇ, ‘ಮುಂದೆ ನಾವು ಕುರುಕ್ಷೇತ್ರ ಮಾಡುವ’ ಎಂದು ಹೇಳಿಕೊಂಡ ಮುನಿರತ್ನ ಅದನ್ನು ಈಗ ನನಸು ಮಾಡಿಕೊಂಡಿದ್ದಾರೆ. ಚಿತ್ರ ಇಂದು ತೆರೆಕಾಣುತ್ತಿದೆ.
ಇಡೀ ಕನ್ನಡ ಚಿತ್ರರಂಗವೇ ಎದುರು ನೋಡುತ್ತಿದ್ದ ದಿನ ಬಂದೇ ಬಿಟ್ಟಿದೆ. ಈಗಾಗಲೇ ಅಭಿಮಾನಿಗಳ ಸಂಭ್ರಮ ಆರಂಭವಾಗಿದೆ, ಅನೇಕ ದಾಖಲೆಗಳಿಗೆ ಸಾಕ್ಷಿಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಇಷ್ಟು ಹೇಳಿದ ಮೇಲೆ ನಾವು ಯಾವ ಸಿನಿಮಾ ಬಗ್ಗೆ ಹೇಳುತ್ತಿದ್ದೇವೆಂದು ಗೊತ್ತಾಗಿರುತ್ತದೆ. ಹೌದು, ನಾವು ಹೇಳುತ್ತಿರುವುದು ‘ಕುರುಕ್ಷೇತ್ರ’ದ ಬಗ್ಗೆಯೇ. ಕನ್ನಡ ಚಿತ್ರರಂಗದಲ್ಲಿ ಬಹುನಿರೀಕ್ಷಿತ ಚಿತ್ರವಾಗಿ ಹೊರಹೊಮ್ಮಿರುವ ‘ಕುರುಕ್ಷೇತ್ರ’ ಇಂದು ತೆರೆಕಾಣುತ್ತಿದೆ.
ಬಹುತಾರಾಗಣದ ಈ ಚಿತ್ರದಲ್ಲಿ ದರ್ಶನ್ ದುರ್ಯೋಧನನಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಇವತ್ತಿನ ಕಾಲಘಟ್ಟಕ್ಕೆ ‘ಕುರುಕ್ಷೇತ್ರ’ದಂತಹ ಚಿತ್ರಗಳ ಮಹತ್ವ ಹೆಚ್ಚಿನದು. ಕನ್ನಡ ಚಿತ್ರರಂಗದ ಇತಿಹಾಸವನ್ನು ನೋಡಿದರೆ ನಮ್ಮಲ್ಲಿ ಸಾಕಷ್ಟು ಐತಿಹಾಸಿಕ, ಪೌರಾಣಿಕ ಸಿನಿಮಾಗಳು ಬಂದಿವೆ. ಅನೇಕರು ದೊಡ್ಡ ಕನಸುಗಳನ್ನು ಕಂಡು ಪೌರಾಣಿಕ, ಐತಿಹಾಸಿಕ ಸಿನಿಮಾಗಳನ್ನು ಮಾಡಿದ್ದಾರೆ. ತಂತ್ರಜ್ಞಾನ ಮುಂದುವರೆದಿರದ ಆ ಕಾಲದಲ್ಲೇ ಸಾಕಷ್ಟು ಪ್ರಯೋಗಗಳನ್ನು ಮಾಡಿ, ಕನ್ನಡ ಚಿತ್ರರಂಗದ ಬೆಳವಣಿಗೆಗೆ ಕಾರಣರಾಗಿದ್ದಾರೆ. ಆದರೆ, ಈಗ ತಂತ್ರಜ್ಞಾನ ಮುಂದುವರೆದಿದೆ. ಕೈಯಲ್ಲಿ ಕಾಸಿದ್ದರೆ, ಬೇಕಾದ ಪೂರ್ವ ಸಿದ್ಧತೆ ಇದ್ದರೆ ನೀವು ಕಂಡ ಕನಸನ್ನು ನನಸು ಮಾಡೋದು ಸುಲಭ. ‘ಕುರುಕ್ಷೇತ್ರ’ ಚಿತ್ರ ಕೂಡಾ ನಿರ್ಮಾಪಕ ಮುನಿರತ್ನ ಅವರ ಕನಸು.
‘ಕುರುಕ್ಷೇತ್ರ’ ಸಿನಿಮಾ ಮಾಡಬೇಕೆಂಬುದು ಮುನಿರತ್ನ ಅವರ ಇವತ್ತಿನ ಕನಸಲ್ಲ. 2007ರ ಕನಸು. ಅಂದು ದರ್ಶನ್ ಜೊತೆ ‘ಅನಾಥರು’ ಸಿನಿಮಾ ಮಾಡುವಾಗಲೇ, ‘ಮುಂದೆ ನಾವು ಕುರುಕ್ಷೇತ್ರ ಮಾಡುವ’ ಎಂದು ಹೇಳಿಕೊಂಡ ಮುನಿರತ್ನ ಅದನ್ನು ಈಗ ನನಸು ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ನಿರ್ಮಾಪಕ ಎಂದರೆ ಸಿನಿಮಾಕ್ಕೆ ಬೇಕಾದ ಬಂಡವಾಳವನ್ನು ಒದಗಿಸುವವ ಎಂಬ ಮಾತಿದೆ. ಆದರೆ, ‘ಕುರುಕ್ಷೇತ್ರ’ ವಿಚಾರದಲ್ಲಿ ಮುನಿರತ್ನ ಕೇವಲ ಅಷ್ಟಕ್ಕೇ ಸೀಮಿತವಾಗಿಲ್ಲ. ಯಾವ ಅಂಶವನ್ನು ಹೈಲೈಟ್ ಮಾಡಿ ಸಿನಿಮಾ ಮಾಡಬೇಕು ಎಂಬ ವಿಚಾರದಿಂದ ಹಿಡಿದು ಕಲಾವಿದರ ಆಯ್ಕೆ, ಕಾಸ್ಟ್ಯೂಮ್, ಬಳಸಬೇಕಾದ ಗದೆ, ಗ್ರಾಫಿಕ್‌ವರೆಗೆ ಖುದ್ದು ಮುನಿರತ್ನ ಅವರೇ ಆಸಕ್ತಿ ವಹಿಸಿ ಮಾಡಿಸಿದ್ದಾರೆ. ಇವರ ಕನಸಿಗೆ, ಉತ್ಸಾಹಕ್ಕೆ ಸಾಥ್ ಕೊಟ್ಟವರು ನಿರ್ದೇಶಕ ನಾಗಣ್ಣ. ಈ ಇಬ್ಬರ ಕನಸನ್ನು ಸಾಕಾರಗೊಳಿಸುವಲ್ಲಿ ಸಂಪೂರ್ಣ ಬೆಂಬಲ ನೀಡಿದ್ದು ಕಲಾವಿದರು ಹಾಗೂ ತಂತ್ರಜ್ಞರು. ನಿರ್ಮಾಪಕ ಮುನಿರತ್ನ ಅವರು ದುರ್ಯೋಧನನ್ನು ದೃಷ್ಟಿಯಲ್ಲಿಟ್ಟುಕೊಂಡು ‘ಕುರುಕ್ಷೇತ್ರ’ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.
ಹೇಳಿಕೇಳಿ ‘ಕುರುಕ್ಷೇತ್ರ’ ಬಹುತಾರಾಗಣದ ಚಿತ್ರ. ದರ್ಶನ್, ಅಂಬರೀಶ್, ಶಶಿಕುಮಾರ್, ನಿಖೀಲ್, ಅರ್ಜುನ್ ಸರ್ಜಾ, ಸೋನು ಸೂದ್, ದಾನಿಶ್, ಯಶಸ್ ಸೂರ್ಯ, ಹರಿಪ್ರಿಯಾ, ಸ್ನೇಹಾ, ರಾಕ್‌ಲೈನ್ ವೆಂಕಟೇಶ್, ಮೇಘನಾ ರಾಜ್ … ಹೀಗೆ ಲೆಕ್ಕ ಹಾಕುತ್ತಾ ಹೋದರೆ ಕಲಾವಿದರ ಪಟ್ಟಿ ಬೆಳೆಯುತ್ತದೆ. ಅಷ್ಟೂ ಮಂದಿ ಕಲಾವಿದರನ್ನು ಒಟ್ಟಿಗೆ ಸೇರಿಸಿ ಮುನಿರತ್ನ ಹಾಗೂ ತಂಡ ‘ಕುರುಕ್ಷೇತ್ರ’ ಕಟ್ಟಿದೆ. ಕೇವಲ 2 ಡಿಯಲ್ಲಿ ಅಷ್ಟೇ ಅಲ್ಲದೇ, 3ಡಿಯಲ್ಲೂ ಈ ಚಿತ್ರ ತಯಾರಾಗಿದೆ. ಜೊತೆಗೆ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂನಲ್ಲಿ ಚಿತ್ರ ತಯಾರಾಗಿದ್ದು, ಮೊದಲ ಹಂತವಾಗಿ ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ.
ರಾಕ್‌ಲೈನ್ ವೆಂಕಟೇಶ್ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುವ ಜೊತೆಗೆ ಚಿತ್ರದ ವಿತರಣೆಯ ಹಕ್ಕನ್ನೂ ಪಡೆದಿದ್ದಾರೆ. ಈಗಾಗಲೇ ಟ್ರೇಲರ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು, ಇಂದಿನಿಂದ ಸಿನಿಮಾವನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಪ್ರೇಕ್ಷಕರು ‘ಕುರುಕ್ಷೇತ್ರ’ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಗೆಲ್ಲಿಸಿದರೆ ಕನ್ನಡ ಚಿತ್ರರಂಗದಲ್ಲಿ ಮತ್ತೆ ಪೌರಾಣಿಕ ಸಿನಿಮಾಗಳ ದಾರಿಯೂ ದೊಡ್ಡದಾಗಲಿದೆ.
ರವಿಪ್ರಕಾಶ್ ರೈ