Advertisement

ಹಂಪಿ ಕನ್ನಡ ವಿವಿಗೆ ವಾಲ್ಮೀಕಿ ಹೆಸರಿಡಿ

04:31 PM Dec 29, 2019 | Naveen |

ಕುರುಗೋಡು: ಕೇಂದ್ರ ಮತ್ತು ರಾಜ್ಯ ಸರಕಾರಗಳು ಪರಿಶಿಷ್ಟ ಜಾತಿ, ಪಂಗಡದವರಿಗೆ ಉದ್ಯೋಗ ಮತ್ತು ಶಿಕ್ಷಣಕ್ಕೆ ಶೇ. 7.5 ಮಿಸಲಾತಿಯನ್ನು ಶೀಘ್ರವೇ ಹೆಚ್ಚಳ ಮಾಡಬೇಕು ಎಂದು ವಾಲ್ಮೀಕಿ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ರೈತ ಸಮುದಾಯ ಭವನದಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ರಾಜನಹಳ್ಳಿ ಗ್ರಾಮದಲ್ಲಿ ಫೆ. 8 ಮತ್ತು 9ರಂದು ನಡೆಯುವ 2ನೇ ವರ್ಷದ ಶ್ರೀ ವಾಲ್ಮೀಕಿ ಜಾತ್ರೋತ್ಸವದ ಪ್ರಯುಕ್ತ ತಾಲೂಕು ಮಟ್ಟದ ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಹಾಗೂ ಪ.ಪಂಗಡದ ಜನಾಂಗದ ಹೆಸರಿನಲ್ಲಿ ಬೇರೆ ಜನಾಂಗದವರು ನಕಲಿ ಪ್ರಮಾಣ ಪತ್ರ ಪಡೆಯುತ್ತಿದ್ದು ಅಂಥವರ ವಿರುದ್ಧ ಕೂಡಲೇ ಶಿಸ್ತು ಕ್ರಮ ಜರುಗಿಸಬೇಕು. ವಾಲ್ಮೀಕಿ ಜನಾಂಗಕ್ಕೆ ಪ್ರತ್ಯೇಕ ಸಚಿವಾಲಯವನ್ನು ನಿರ್ಮಾಣ ಮಾಡಲು ಸರಕಾರ ಮುಂದಾಗಬೇಕು. ಈಗಾಗಲೇ ಇರುವ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ಹೆಸರನ್ನು ಇಡಬೇಕು. ಇದಲ್ಲದೆ ವಾಲ್ಮೀಕಿ ಸಮಾಜದ ಮುಖಂಡರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಮುಖ್ಯ ಪಾತ್ರ ವಹಿಸಬೇಕು. ದಕ್ಷಿಣ ಭಾರತದ ಅಳ್ವಿಕೆಯಲ್ಲಿ ಮುಸ್ಲಿಂರ ಪತನದ ವೇಳೆ ವಾಲ್ಮೀಕಿ ಸಮಾಜದವರು 77 ಪಾಳೆಗಾರರನ್ನು ಧ್ವಂಸ ಮಾಡಿದಂತಹ ಇತಿಹಾಸ ಇಗಲೂ ಇದೆ.

ರಾಜ್ಯದಲ್ಲಿ ವಿಧಾನಸಭಾ ಶಾಸಕರಲ್ಲಿ 15 ಶಾಸಕರು ಪ.ಪಂಗಡದವರು ಇದ್ದಾರೆ. ಇವರು ಸಮಾಜದ ವಿಷಯದಲ್ಲಿ ಯಾವುದೇ ಪಕ್ಷ ಭೇದವಿಲ್ಲದೆ ಪ್ರತಿಯೊಂದಕ್ಕೂ ಸಹಕಾರ ನೀಡುತ್ತ ಬರುತ್ತಿದ್ದಾರೆ. ಇವರ ಸಹಕಾರ ಯಾವಾಗಲೂ ಸಮಾಜದ ಅಭಿವೃದ್ಧಿ ಮೇಲೆ ಇರಲಿ. ಕಳೆದ ವರ್ಷಕ್ಕಿಂತ ಈ ಬಾರಿ ವಾಲ್ಮೀಕಿ ಜಾತ್ರೋತ್ಸವ ಅದ್ಧೂರಿಯಾಗಿ ಜರುಗಲಿದೆ. ಇದಕ್ಕೆ ಪ್ರತಿಯೊಂದು ಹಳ್ಳಿ ಮತ್ತು ತಾಲೂಕಿನ ವಾಲ್ಮೀಕಿ ಸಮಾಜದವರು ಭಾಗವಹಿಸಬೇಕು. ಅದರ ಜೊತೆಗೆ ನಮ್ಮಲ್ಲಿರುವಂಥ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಸಮಾವೇಶ ಜರುಗಲಿದೆ. ಒಂದು ವೇಳೆ ಸರಕಾರಗಳು ಈ ಬಾರಿ ನಮ್ಮ ಬೇಡಿಕೆಗಳನ್ನು ಈಡೇರಿಸಲು ಹಾಗೂ ಮೀಸಲಾತಿಯನ್ನು ಹೆಚ್ಚಳ ಮಾಡಲು ನಿರ್ಧರಿಸದಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಯಾವ ಕೊಠಡಿಯಲ್ಲಿ ಅಡಗಿರುತ್ತಾರೆ ಅದಕ್ಕೆ ಮುತ್ತಿಗೆ ಹಾಕಲು ನಮ್ಮ ಸಮುದಾಯ ಶತಸಿದ್ಧ ಎಂದರು.

ಶಾಸಕ ಜೆ.ಎನ್‌.ಗಣೇಶ್‌ ಮಾತನಾಡಿದರು. ಈ ಸಂದರ್ಭದಲ್ಲಿ ಎನ್‌. ನಾಗರಾಜ, ಕರೆಪ್ಪ ನಾಯಕ, ನಾರಾಯಣಪ್ಪ, ದೊಡ್ಡ ಎರ್ರಿಸ್ವಾಮಿ, ಮುಷ್ಟಗಟ್ಟೆ ಹನುಮಂತಪ್ಪ, ಚಿದಾನಂದಪ್ಪ ಸೇರಿ ಸಮಾಜದ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next