ಕುರುಗೋಡು: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ ಹಾಗೂ ರಸಾಯನಿಕ ಗೊಬ್ಬರದ ಪೂರೈಕೆಯಲ್ಲಿ ರೈತರಿಗೆ ಯಾವುದೇ ಕೊರತೆ ಇಲ್ಲ ಎಂದು ಕೃಷಿ ಇಲಾಖೆಯ ಬಳ್ಳಾರಿ ಜಂಟಿ ನಿರ್ದೇಶಕ ಡಾ| ಕೆ. ಮಲ್ಲಿಕಾರ್ಜುನ ಹೇಳಿದರು.
ಬುಧವಾರ ಸಮೀಪದ ಹೊಸಗೆಣಿಕೆಹಾಳು ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಿಂದ ನಿರ್ಮಾಣವಾಗಿರುವ ಕೃಷಿ ಹೊಂಡ ಉತ್ತಮ ಮಳೆಗೆ ತುಂಬಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಬಿತ್ತನೆಗೆ ಉತ್ತಮ ಮಳೆಯಾಗುವ ಸಂಭವವಿದೆ. ಆದ್ದರಿಂದ ಈ ಮುಂಗಾರು ಹಂಗಾಮಿನಲ್ಲಿ ಜಿಲ್ಲಾದ್ಯಂತ 4,35,430 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲೂ ಜೋಳ, ಭತ್ತ, ಹತ್ತಿ, ಶೇಂಗಾ, ತೊಗರಿ, ಸಜ್ಜೆ ಸೇರಿದಂತೆ ಇತರೆ ಬೆಳೆಗಳ ಬೀಜಗಳನ್ನು ಬಿತ್ತನೆ ಮಾಡಲು ಸಿದ್ಧತೆ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ 31 ರೈತ ಸಂಪರ್ಕ ಕೇಂದ್ರಗಳಿದ್ದು, ಈ ಎಲ್ಲಾ ಕೇಂದ್ರಗಳಲ್ಲಿ ಆಯಾ ಕೇಂದ್ರದ ಕೃಷಿ ಅಧಿಕಾರಿಗಳು ಈಗಾಗಲೇ ರಿಯಾಯಿತಿ ದರದಲ್ಲಿ ಬೀಜಗಳನ್ನು ಮಾರಾಟ ಮಾಡಲಾಗಿದೆ. ರೈತರು ಸಹ ಕೇಂದ್ರಕ್ಕೆ ಭೇಟಿ ನೀಡಿ ತಮಗೆ ಬೇಕಾಗುವ ಬೀಜಗಳನ್ನು ಪಡೆದು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಕೋವಿಡ್-19 ಸಂಕಷ್ಟದಲ್ಲಿಯೂ ಸಹ ಉದ್ಯೋಗವಿಲ್ಲದೆ ಸಂಕಷ್ಟ ಅನುಭವಿಸುತ್ತಿರುವ ಕೃಷಿ ಕೂಲಿ ಕಾರ್ಮಿಕರಿಗೆ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಬದು ನಿರ್ಮಾಣ ಹಾಗೂ ಕೃಷಿ ಹೊಂಡಗಳನ್ನು ನಿರ್ಮಿಸಿ ಕೃಷಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಲಾಗಿದೆ. ರಾಜ್ಯದಲ್ಲೇ ಬಳ್ಳಾರಿ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಪ್ರಥಮವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕುರುಗೋಡು ಹಿರಿಯ ಕೃಷಿ ಅಧಿಕಾರಿ ಎಂ.ದೇವರಾಜ ಮಾತನಾಡಿ, ಕೃಷಿ ಹೊಂಡಾಗಳಿಂದ ಬೇಸಿಗೆಯಲ್ಲಿ ದನ, ಕರುಗಳು, ಕುರಿಗಳಿಗೆ ಕುಡಿಯುವುದಕ್ಕೆ ಸಹಕಾರಿಯಾಗಿವೆ ಎಂದರು. ಕೃಷಿ ಅಧಿಕಾರಿ ಸೋಮಶೇಖರ್, ದೊಡ್ಡಬಸವಪ್ಪ, ವೈ. ಮಲ್ಲಿಕಾರ್ಜುನ ವೀರೇಶಪ್ಪ, ಪಂಪಣ್ಣ ಸೇರಿದಂತೆ ಇತರರು ಇದ್ದರು.