ಕುರುಗೋಡು: ಹೆಸರಿಗಷ್ಟೇ ತಾಲೂಕು ಕೇಂದ್ರವಾದಂತಾಗಿದ್ದು ಅಭಿವೃದ್ಧಿ ಮಾತು ಮರೀಚಿಕೆಯಾಗಿದೆ. ಇಂಥದ್ದೊಂದು ಸಾಲಿಗೆ ತಾಲೂಕಿನ ಪಶು ಆಸ್ಪತ್ರೆಗಳು ಸೇರಿವೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.
ಕುರುಗೋಡು ತಾಲೂಕು ವ್ಯಾಪ್ತಿಯಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ 1 ಪಶು ಆಸ್ಪತ್ರೆ ಸೇವೆ ನೀಡುತ್ತಿದೆ. ಗ್ರಾಮೀಣ ಭಾಗಗಳ ಜಾನುವಾರುಗಳಿಗೆ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಗ್ರಾಮಗಳಲ್ಲಿ ತಲಾ ಒಂದೊಂದು ಪಶು ಚಿಕಿತ್ಸಾಲಯಗಳನ್ನು ತೆರೆಯಲಾಗಿದೆ. ಆದರೆ ಹೀಗೆ ತೆರೆಯಲಾದ ಚಿಕಿತ್ಸಾಲಯಗಳಿಗೆ ಪಶು ವೈದ್ಯಕೀಯ ಇಲಾಖೆ ಮೂಲಸೌಕರ್ಯದ ಜತೆಗೆ ಶಾಶ್ವತ ಸಿಬ್ಬಂದಿ ನಿಯೋಜನೆ ಮಾಡುವುದನ್ನೇ ಮರೆತಂತಿದ್ದು ಪಶುಗಳ ಕಾಳಜಿಯಿಂದ ದೂರವುಳಿದಿದೆ.
ಕುರುಗೋಡು ತಾಲೂಕಿನ ಸುಂಕ್ಲಮ್ಮ ದೇವಿಯ ಮುಂಭಾಗದಲ್ಲಿ 2010-11ನೇ ಸಾಲಿನಲ್ಲಿ ಪಶು ಚಿಕಿತ್ಸಾಲಯ ನಿರ್ಮಾಣಗೊಂಡಿದೆ. ಆದರೆ ಅದಕ್ಕೆ ಅವಶ್ಯವಿರುವ ಮೂಲಸೌಕರ್ಯಗಳನ್ನು ನೀಡಲಾಗಿಲ್ಲ. ಆಸ್ಪತ್ರೆಯಲ್ಲಿ ಪಶುಗಳ ಕಾಳಜಿಗಾಗಿ ಶಾಶ್ವತ ಸಿಬ್ಬಂದಿಗಳೇ ಇಲ್ಲವಾಗಿದೆ.
ಮೂಲಸೌಕರ್ಯ ಕಾಣದ ಪಶು ಆಸ್ಪತ್ರೆ: ತಾಲೂಕು ಕೇಂದ್ರದಲ್ಲಿರುವ ಪಶು ಆಸ್ಪತ್ರೆಗೆ ದಿನನಿತ್ಯ 4ರಿಂದ 5 ಶ್ವಾನಗಳು, 8ರಿಂದ 15 ಎತ್ತು, ದನ, ಎಮ್ಮೆ, ಆಕಳುಗಳು ಚಿಕಿತ್ಸೆಗಾಗಿ ಬರುತ್ತಲಿವೆ. ಹೀಗೆ ಚಿಕಿತ್ಸೆಗೆ ಬರುವ ಜಾನುವಾರುಗಳಿಗೆ ಪೂರೈಸಲು ಸೂಕ್ತ ನೀರಿನ ಸೌಕರ್ಯವಿಲ್ಲ. 4 ದಿನಕ್ಕೊಮ್ಮೆ ಬಿಡುವ ಪುರಸಭೆ ನಲ್ಲಿಯ ನೀರಿಗಾಗಿ ಜಾನುವಾರುಗಳು ಕಾದುಕೂರುವಂತಾಗಿದೆ. ಬೋರ್‌ವೆಲ್ ಕೊರೆಸಿ ನೀರಿನ ಸಮರ್ಪಕ ಪೂರೈಕೆಗಾಗಿ ಆಸ್ಪತ್ರೆ ವತಿಯಿಂದ ಪುರಸಭೆಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಆಸ್ಪತ್ರೆ ಆವರಣದಲ್ಲಿರುವ ಕೇವಲ ಒಂದೇ ಒಂದು ನೀರಿನ ತೊಟ್ಟಿಯಿಂದಲೇ ಸದ್ಯ ಜಾನುವಾರುಗಳ ನೀರಿನ ದಾಹ ನೀಗಿಸುವಂತಾಗಿದೆ. ಜಾನುವಾರುಗಳ ಕೃತಕ ಗರ್ಭಧಾರಣೆಗಾಗಿ ಪ್ರತ್ಯೇಕವಾದ ಶೆಡ್ ವ್ಯವಸ್ಥೆ ಆಸ್ಪತ್ರೆಯಲ್ಲಿರಬೇಕು. ಆದರೆ ಈ ವ್ಯವಸ್ಥೆಯೇ ಇಲ್ಲವಾಗಿದ್ದು, ಬಹುತೇಕರು ಪಶು ವೈದ್ಯಾಧಿಕಾರಿಗಳನ್ನು ದೂರವಾಣಿ ಕರೆ ಮಾಡಿ ಮನೆಗಳಿಗೆ ಕರೆಸಿಕೊಂಡು ಜಾನುವಾರುಗಳ ಗರ್ಭಧಾರಣೆ ಮಾಡಿಸಿಕೊಳ್ಳುವಂತಾಗಿದೆ.
ಕುರುಗೋಡು ಪಶು ಆಸ್ಪತ್ರೆಯಲ್ಲಿ ಒಬ್ಬರು ಮುಖ್ಯ ಪಶು ವೈದ್ಯಾಕಾರಿ ಇದ್ದರೂ ಅವರು ಕುರುಗೋಡಲ್ಲಿ ಮೂರು ದಿನ ಕಾರ್ಯನಿರ್ವಹಿಸಿ ಇನ್ನುಳಿದ ದಿನಗಳಲ್ಲಿ ಕುಡುತಿನಿ, ಸಿದ್ದಮ್ಮನಹಳ್ಳಿ, ಸುಗ್ಗೆನಹಳ್ಳಿ, ಕಂಪ್ಲಿಯಲ್ಲಿ ಡೆಪ್ಯೂಟೇಶನ್ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ ಒಬ್ಬ ಡಿ ಗ್ರೂಪ್ ನೌಕರ ಮತ್ತು ಜಾನುವಾರುಗಳ ಅಧಿಕಾರಿ ಮಾತ್ರವಿದ್ದು ಆಸ್ಪತ್ರೆಯಲ್ಲಿ ಹುಡುಕಿದರೂ ಶಾಶ್ವತ ಸಿಬ್ಬಂದಿಯಿಲ್ಲ. ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದಲ್ಲಿ ಪೂರ್ಣ ಪ್ರಮಾಣದ ಶಾಶ್ವತ ಸಿಬ್ಬಂದಿ (ಹಿರಿಯ ಪಶು ವೈದ್ಯಕೀಯ ಪರೀಕ್ಷಕ-01, ಪಶು ವೈದ್ಯ ಸಹಾಯಕ-01, ಡಿ ಗ್ರೂಪ್-01) ಇದ್ದರೂ ಒಬ್ಬರೂ ಕಾಣ ಸಿಗುವುದಿಲ್ಲ. ಸದ್ಯ ಕುರುಗೋಡು ಪಶು ಆಸ್ಪತ್ರೆಯಲ್ಲಿ ಮುಖ್ಯ ಪಶು ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವವರೇ ಈ ಎಲ್ಲ ಗ್ರಾಮಗಳ ಪಶು ಚಿಕಿತ್ಸಾಲಯಗಳನ್ನು ನಿಭಾಯಿಸಬೇಕಿದೆ. ಅಲ್ಲದೇ ವಾರದಲ್ಲಿ ಮೂರು ದಿನಗಳಂತೆ ಕುರುಗೋಡು ಹಾಗೂ ಕಂಪ್ಲಿ ಎರಡೂ ತಾಲೂಕು ಭಾಗಗಳಲ್ಲಿನ ಚಿಕಿತ್ಸಾಲಯಗಳ ನಿರ್ವಹಣೆ ಹೊರೆ ಹೊತ್ತಿದ್ದಾರೆ.