Advertisement

ನದಿ ದಂಡೆಯ ರೈತರ ಸ್ಥಿತಿ ಅತಂತ್ರ

03:29 PM Aug 07, 2019 | Naveen |

ಕುರುಗೋಡು: ಜೀವನದಿ ತುಂಗಾಭದ್ರಾ ನದಿ ಸಂಪೂರ್ಣ ಬತ್ತಿರುವುದರಿಂದ ನದಿ ದಂಡೆಯ ರೈತರು ಮುಂಗಾರು ಬೆಳೆಗೆ ಅವಕಾಶ ಇಲ್ಲದಂತಾಗಿದೆ.

Advertisement

ಮುಂಗಾರು ಬೆಳೆಗೆ ಹಾಕಿದ ಸಸಿ ಮಡಿಗಳು ಜಾನುವಾರುಗಳ ಪಾಲಾಗಿವೆ. ಇನ್ನೊಂದು ಕಡೆ ಜನ-ಜಾನುವಾರುಗಳಿಗೆ ನೀರಿಲ್ಲದೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರು ನೀರಿಗಾಗಿ ಖಾಸಗಿ ಘಟಕಗಳಿಗೆ ಮೊರೆ ಹೋಗುವಂತಾಗಿದೆ. ಈಗಾಗಲೇ ನದಿಗೆ ನೀರು ಬರುತ್ತೆ ಎಂಬ ಆಶಾಭಾವ ಹೊಂದಿದ್ದ ರೈತರು ಸಸಿ ಮಡಿ ಹಾಕಿದ್ದರು. ಆದರೆ ನೀರು ಇಲ್ಲದೇ ಒಣಗಿ ಜಾನುವಾರು ಪಾಲಾಗಿವೆ.

ಸತತ 5 ವರ್ಷಗಳಿಂದ ರೈತರಿಗೆ ಸರಿಯಾಗಿ ಉತ್ತಮ ಬೆಳೆ ಸಿಗದೆ ತೀವ್ರ ನಷ್ಟದಲ್ಲಿ ಸಿಲುಕಿದ್ದಾರೆ. ಈ ಬಾರಿ ಕೂಡ ಸಾಕಷ್ಟು ಖರ್ಚು ಮಾಡಿ ಸಸಿ ಮಾಡಿದ್ದ ರೈತರಿಗೆ ಮತ್ತೆ ನಷ್ಟ ಭೀತಿ ಎದುರಾಗಿದೆ. 2008-09 ಮತ್ತು 2016-17ನೇ ವರ್ಷಗಳಲ್ಲಿ ತುಂಗಾಭದ್ರಾ ನದಿ ಪೂರ್ತಿ ಬತ್ತಿ ಹೋಗಿತ್ತು. ಮತ್ತೆ ಪ್ರಸಕ್ತ 2019-20ನೇ ಸಾಲಿನ ಸಹ ಅದೇ ಪರಿಸ್ಥಿತಿ ಮುಂದುವರಿದಿದೆ.

ತುಂಗಾಭದ್ರಾ ನದಿಯಲ್ಲಿ ನೀರಿಲ್ಲದ ದಿನಗಳು ಬಲು ವಿರಳ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಗ್ರಾಮಗಳ ಜನರು ನದಿಯಲ್ಲಿ ಕಾಲ್ನಡಿಗೆ ಮತ್ತು ಬೈಕ್‌ ಹಾಗೂ ಟ್ರ್ಯಾಕ್ಟರ್‌ ಮೂಲಕ ಸಂಚಾರಕ್ಕೆ ಅವಕಾಶ ಸಿಗುತ್ತಿರಲಿಲ್ಲ. ಕೇವಲ ದೋಣಿ ಮೂಲಕ ದಡ ಸೇರಬೇಕಿತ್ತು. ಕಳೆದ ಮೂರು ವರ್ಷಗಳಿಂದ ನದಿ ನೀರು ಇಲ್ಲದೇ ಬತ್ತಿ ಹೋಗಿದ್ದು, ಇದರಿಂದ ರೈತರ ಕೈಗೆ ಕೆಲಸವಿಲ್ಲದೆ ವ್ಯಾಪಾರ-ವಹಿವಾಟು ನಿಂತು ಹೋಗಿವೆ. ಕುಟುಂಬದ ನಿರ್ವಹಣೆಗಾಗಿ ರೈತರು ಚಿಂತಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ನದಿಯಲ್ಲಿ ನೀರಿಲ್ಲದೇ ರೈತ ಕುಟುಂಬಗಳು ಕೆಲಸ ಅರಿಸಿ ಬೇರೆಡೆಗೆ ಗುಳೆ ಹೋಗುವ ಸ್ಥಿತಿ ಉದ್ಬವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next