Advertisement

ನೋಂದಣಿ ಕಚೇರಿ ಸ್ಥಿತಿ ದೇವರಿಗೇ ಪ್ರೀತಿ!

12:05 PM Jun 29, 2019 | Naveen |

ಸುಧಾಕರ್‌ ಮಣ್ಣೂರು
ಕುರುಗೋಡು:
ಪಟ್ಟಣದ ಉಪನೋಂದಣಾಧಿಕಾರಿಗಳ ಕಚೇರಿ ಸಮಸ್ಯೆಗಳ ಆಗರವಾಗಿ ಮಾರ್ಪಟ್ಟಿದೆ.

Advertisement

ಕಚೇರಿಯಲ್ಲಿ ಅವಶ್ಯವಿರುವ ಉಪಕರಣಗಳ ಕೊರತೆ, ಅನುದಾನ ಇಲ್ಲವೇ ಇಲ್ಲ, ಕಚೇರಿಯ ಕಟ್ಟಡ ಬಿರುಕು ಬಿಟ್ಟು ಬೀಳುವ ಹಂತಕ್ಕೆ ತಲುಪಿದೆ. ಹಾಗಾಗಿ ಸಿಬ್ಬಂದಿ ಮತ್ತು ಸಾರ್ವಜನಿಕರು ನಿತ್ಯ ಆತಂಕದಲ್ಲಿಯೇ ಕೆಲಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈಗ ನೋಂದಣಿ ಕಾರ್ಯ ಇಲ್ಲದೆ ಸ್ಥಗಿತಗೊಂಡ ಕಾರಣ ಸಾಲ ಹೊತ್ತ ರೈತರು ಆತಂಕಗೊಂಡಿದ್ದಾರೆ.

ಉತ್ತಮ ಆದಾಯ: ಮೇ ತಿಂಗಳಲ್ಲಿ ಸ್ಕ್ಯಾ ನಿಂಗ್‌, ಮುದ್ರಾಂಕ, ನೋಂದಣಿ ಶುಲ್ಕ ಸೇರಿದಂತೆ ಒಟ್ಟು 35 ಲಕ್ಷಕ್ಕಿಂತ ಹೆಚ್ಚಿನ ಆದಾಯ ಬಂದಿದೆ. ವರ್ಷಕ್ಕೆ ಅಂದಾಜು 5 ರಿಂದ ಆರು ಕೋಟಿ ರೂ.ನಷ್ಟು ಆದಾಯ ಸರ್ಕಾರಕ್ಕೆ ಬಂದರೂ ಯಾವುದೇ ಅಭಿವೃದ್ಧಿ ಆಗಿಲ್ಲ.

ಉಪಕರಣಗಳ ಕೊರತೆ: ಉಪನೋಂದಣಿ ಕಚೇರಿ ನಿರ್ವಹಣೆಗೆ ಎಚ್.ಸಿ.ಎಲ್ ಕಂಪನಿ ಗುತ್ತಿಗೆದಾರರಿಗೆ ಐದೂ ವರ್ಷಕ್ಕೆ ಗುತ್ತಿಗೆ ನೀಡಿತ್ತು. ಈ ಕರಾರು ಮುಗಿದು ಮೂರು ತಿಂಗಳಾಯಿತು. ಅಂದಿನಿಂದ ಈ ಕಚೇರಿಯಲ್ಲಿ ನೋಂದಣಿ ಸರಿಯಾಗಿ ಆಗುತ್ತಿಲ್ಲ, ನೋಂದಣಿಗೆ ರೈತರು ಆಗಮಿಸಿ ಸಿಬ್ಬಂದಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಹಲವು ತಾಂತ್ರಿಕ ತೊಂದರೆ ಮಧ್ಯೆಯೂ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರೈತರಿಗೆ ಈ ತೊಂದರೆ ತಿಳಿಸಿ ಸಾಕಾಗಿದೆ ಎಂದು ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕಟ್ಟಡ ಶಿಥಿಲ: ನೋಂದಣಿ ಕಚೇರಿ 1993 ಏಪ್ರಿಲ್ 1 ರಂದು ಆರಂಭಗೊಂಡಿತು. 2011ರಲ್ಲಿ 14.72 ಲಕ್ಷ ರೂ. ಅನುದಾನದಲ್ಲಿ ಪಿಡಬ್ಲೂಡಿಯಿಂದ ಬಳ್ಳಾರಿ ರಸ್ತೆಯಲ್ಲಿ ನೋಂದಣಿ ಕಚೇರಿಗಾಗಿ ಹೊಸ ಕಟ್ಟಡ ನಿರ್ಮಾಣಗೊಂಡಿತು. ಇದು ಕಳಪೆ ಕಾಮಗಾರಿಯಾಗಿದ್ದು, ಕಟ್ಟಡ ನಿರ್ಮಾಣಗೊಂಡು 4 ತಿಂಗಳಲ್ಲೇ ಕಟ್ಟಡದ ಎಲ್ಲಾ ಗೋಡೆಗಳು ಬಿರುಕು ಬಿಟ್ಟಿದ್ದವು. ಇದನ್ನು ಗಮನಿಸಿದ ಅಂದಿನ ಸಿಬ್ಬಂದಿ ಅನೇಕ ಬಾರಿ ಮೇಲಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಏನೂ ಪ್ರಯೋಜನವಾಗಿಲ್ಲ.

Advertisement

ಅನುದಾನ ಕೊರತೆ: ಎಚ್ಸಿಎಲ್ ಕಂಪನಿಯೂ ಐದೂ ವರ್ಷ ಗುತ್ತಿಗೆ ಪಡೆದಿತ್ತು. ಅದರ ಗುತ್ತಿಗೆ ಅವಧಿ ಮುಗಿದು ಮೂರು ತಿಂಗಳಾಯಿತು. ಆದರೂ ಇಂದಿನವರೆಗೂ ಸರ್ಕಾರದಿಂದ ಹಾಗೂ ಜಿಲ್ಲಾ ನೋಂದಣಿ ಇಲಾಖೆಯಿಂದ ಆಗಲಿ ಯಾವುದೇ ಅನುದಾನ ಬಂದಿಲ್ಲ. ಕಟ್ಟಡ ನಿರ್ಮಾಣಗೊಂಡ ವರ್ಷದಿಂದ ಇಂದಿನವರೆಗೂ ಕಟ್ಟಡ ದುರಸ್ತಿಗಾಗಿ ಅನುದಾನನೂ ಬಂದಿಲ್ಲ. ಹಾಗಾಗಿ ದಿನದಿಂದ ದಿನಕ್ಕೆ ಕಟ್ಟಡ ಶಿಥಿಲಾವ್ಯಸ್ಥೆ ತಲುಪಿದೆ. ಅನುದಾನವಿಲ್ಲದ್ದರಿಂದ 35 ಸಾವಿರ ರೂ. ಜೆಸ್ಕಾಂ ಬಿಲ್ ಬಾಕಿ ಉಳಿದಿದೆ.

ಸಿಬ್ಬಂದಿಗೆ ಸಂಬಳ ಇಲ್ಲ: ಮೂರು ತಿಂಗಳಿಂದ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಕಂಪ್ಯೂಟರ್‌ ಆಪರೇಟರ್‌ ಹಾಗೂ ಸಿಬ್ಬಂದಿಗೆ ಸಂಬಳವಿಲ್ಲ. ಇದಕ್ಕೆ ಮೇಲಧಿಕಾರಿಗಳನ್ನು ಕೇಳಿದರೆ ಅನುದಾನ ಬಂದಿಲ್ಲ ಎಂಬ ನೆಪ ಒಡ್ಡುತ್ತಾರೆ.

ಇಲ್ಲಿನ ಸಮಸ್ಯೆಯ ಕುರಿತು ಬೆಂಗಳೂರಿನ ಮುಖ್ಯ ಕಚೇರಿಗೆ ತಿಳಿಸಿದ್ದೇವೆ. ಗುತ್ತಿಗೆ ಅವಧಿ ಮುಗಿದಿದೆ. ಮತ್ತೇ ಟೆಂಡರ್‌ ಕರೆದು ಗುತ್ತಿಗೆ ನೀಡುತ್ತಾರೆ, ನಂತರ ಸಮಸ್ಯೆ ಬಗೆಹರಿಯುತ್ತದೆ.
ಅಶೋಕ,
ಜಿಲ್ಲಾ ನೋಂದಣಾಧಿಕಾರಿ.

ಸಾಲಕ್ಕಾಗಿ ಹೊಲ ಮಾರಾಟ ಮಾಡಿದ್ದೇನೆ. 15 ದಿನದಿಂದ ನೋಂದಣಿ ಮಾಡಿಸಲು ಕಚೇರಿಗೆ ತಿರುಗುತ್ತಿದ್ದೇನೆ. ಆದರೆ ಅಲ್ಲಿರುವ ಅಧಿಕಾರಿಗಳು ಸಮಸ್ಯೆ ಹೇಳಿ ಮನೆಗೆ ಕಳುಹಿಸುತ್ತಿದ್ದಾರೆ. ಸಾಲಗಾರರು ಸಾಲ ಕಟ್ಟು ಎಂದು ಮನೆಗೆ ಬರುತ್ತಿದ್ದಾರೆ ನಮ್ಮ ಸಮಸ್ಯೆ ಯಾರಿಗೇ ಹೇಳಬೇಕೋ ಅರ್ಥವಾಗುತ್ತಿಲ್ಲ.
ಎಚ್.ದೇವಪ್ಪ, ಸೋಮಲಾಪುರ.

ಇಲ್ಲಿನ ಸಮಸ್ಯೆಗಳಿಗಾಗಿ ಗುತ್ತಿಗೆದಾರರನ್ನು ಕೇಳಿದರೆ ನಮ್ಮ ಗುತ್ತಿಗೆ ಅವಧಿ ಮುಗಿದಿದೆ ಎಂದು ಹೇಳುತ್ತಾರೆ. ಹಾಗಾಗಿ ಮೇಲಧಿಕಾರಿಗಳಿಗೆ ಇಲ್ಲಿನ ಸಮಸ್ಯೆ ಕುರಿತು ಅರ್ಜಿ ಸಲ್ಲಿಸಿದ್ದೇವೆ.
•ಕೆ.ಉಮಾಶಂಕರಿ,
ಪ್ರಭಾರಿ ಉಪನೋಂದಣಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next